ಹಣವೆಂಬ ಜೀವಸತ್ವ ಕಡಿಮೆಯಾದಾಗ ತೆಗೆದುಕೊಳ್ಳುವ ವಿಟಾಮಿನ್
ಪ್ರಾಣಿಗಳೆಲ್ಲರ ಪ್ರಾಣಧಾರಣಕ್ಕೆ ಪೂರ್ವಜನ್ಮದ ಋಣವೇ ಕಾರಣ
ಋಣಾನುಬಂಧಕ್ಕೆ ಅನುಸಾರವಾಗಿಯೇ ಪಶು ಪತ್ನಿ ಸುತ ಆಲಯ ಮತ್ತು ಇವೆಲ್ಲವುಗಳ ಲಯ
ಕಡೆಗೆ ಕೊಡುವೆನೆಂದು ಹೇಳಿ ಕೊಂಡುಕೊಂಡ ಕಡ
ತನ್ನ ಬಳಿ ಇರುವುದು ಸಾಲದಿದ್ದಾಗ ಮೊರೆ ಹೋಗುವ ಸಾಲ
ಹುಟ್ಟಿದವರೆಲ್ಲರೂ ಋಣಿಗಳಾಗಿಯೇ ಹುಟ್ಟುತ್ತಾರೆ ಆದರೆ ಕೆಲವರು ಅದನ್ನು ಕೊನೆಯವರೆಗೂ ತೀರಿಸುವ ಮನಸ್ಸೇ ಮಾಡುವುದಿಲ್ಲ
ಮೂರು ವಿಧದ ಋಣವಿದೆ. ಪಿತೃ ಋಣ,ಋಷಿ ಋಣ, ದೇವ ಋಣ. ಆದರೆ ಇದರಲ್ಲಿ ಬಿಟ್ಟು ಹೋಗಿದ್ದೆಂದರೆ ಮಾವನ ಋಣ ಮತ್ತು ಬ್ಯಾಂಕಿನ ಋಣ
ಋಣ ವಿಮೋಚದಿಂದಲೇ ಮುಕ್ತಿಯ ಪ್ರಾಪ್ತಿ
ಕರುಣದಿಂದ ಕೊಟ್ಟದ್ದನ್ನು ತೆಗೆದುಕೊಂಡಾಗ ಋಣ ಹುಟ್ಟುತ್ತದೆ
ಯೋಚಿಸದೇ ಯಾಚಿಸುವವಗೆ ಮೈತುಂಬಾ ಋಣವೇ ಮೆತ್ತಿಕೊಳ್ಳುವುದು
ಋಣಂ ಕೃತ್ವಾ ಘೃತಂ ಪಿಬೇತ್, ತುಪ್ಪ ತಿನ್ನುವಾಗ ಮಾಡಬೇಕಾದದ್ದು
ನಾವು ತೀರಿದರೂ ಋಣ ತೀರುವುದಿಲ್ಲ. ಆದರೆ ಋಣ ತೀರಿದರೆ ನಾವು ತೀರುತ್ತೇವೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com