ಇಂದು ವೈದ್ಯರು ತಮ್ಮ ಸ್ಟೆತಾಸ್ಕೋಪನ್ನು ಮೊದಲು ರೋಗಿಯ ಜೇಬಿನಮೇಲಿಟ್ಟು ನಂತರ ಚಿಕಿತ್ಸೆ ಕೊಡುತ್ತಾರೆ ಎಂದು ಮಲ್ಲಾಡಿಹಳ್ಳಿಯ 'ತಿರುಕ' ನಾಮಾಂಕಿತ ರಾಘವೇಂದ್ರ ಸ್ವಾಮಿಗಳು ತಮಾಷೆಗಾಗಿ ಹೇಳುತ್ತಿದ್ದರು. ವೈದ್ಯನಾದವನಿಗೆ ಜನಸೇವೆಗಿಂತ ಹಣಗಳಿಕೆಯೇ ಪ್ರಧಾನ ಅಂಶವಾಗಿ ಕಂಡು ಬರುತ್ತಿರುವುದು ಸುಳ್ಳೇನಲ್ಲ. ಆದರೆ ಕೆಲ ವೈದ್ಯರು ರೋಗಿಗಳ ಸೇವೆಯನ್ನು ತಮ್ಮ ಪವಿತ್ರ ಕರ್ತವ್ಯ ಎಂದು ತಿಳಿದು ಸೇವೆ ಸಲ್ಲಿಸುತ್ತಿರುವುದೂ ಸುಳ್ಳಲ್ಲ. ಅಂತಹವರಲ್ಲಿ ಮುಂಬೈನ ಡಾ.ರವೀಕಾಂತ್ ಸಿಂಗ್ ಒಬ್ಬರು. ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರೂ ಹಣಸಂಪಾದನೆಗೆ ತೊಡಗದೆ "ಡಾಕ್ಟರ್ಸ್ ಫಾರ್ ಯು" ಎಂಬ ಸ್ವಯಂಸೇವಾ ಸಂಸ್ಥೆಯನ್ನು ಸ್ಥಾಪಿಸಿ, ಸಮಾನ ಮನಸ್ಕ ವೈದ್ಯರನ್ನು ಮತ್ತು ವ್ಯಕ್ತಿಗಳನ್ನು ಸೇರಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ. ಮುಂಬೈನ ಶಿವಾಜಿನಗರ ಒಂದು ಲಕ್ಷ ಜನಸಂಖ್ಯೆಯಿರುವ ಪ್ರದೇಶ. ಅಲ್ಲಿ ಓಡಾಡಬೇಕಾದರೆ ಮೂಗಿಗೆ ಕರ್ಚೀಫು ಹಿಡಿದೇ ಓಡಾಡಬೇಕು. ಬಡವರು, ಕೂಲಿಕಾರ್ಮಿಕರೇ ಹೆಚ್ಚಾಗಿರುವ ಈ ಸ್ಥಳದಲ್ಲಿ ಡಾ.ರವಿಕಾಂತ್ ಒಂದು ಪುಟ್ಟ ಆಸ್ಪತ್ರೆಯನ್ನು ಸ್ಥಾಪಿಸಿ, ಅಲ್ಲಿ ಹೊರರೋಗಿಗಳ ವಿಭಾಗ, ದಂತಚಿಕಿತ್ಸಾ ವಿಭಾಗ, ಚುಚ್ಚುಮದ್ದು ಕೇಂದ್ರ, ಕ್ಷಯರೊಗ ತಪಾಸಣಾ ಕೇಂದ್ರ ಮತ್ತು ಸಾಮಾನ್ಯ ಚಿಕಿತ್ಸಾ ಕೇಂದ್ರವನ್ನು ತೆರೆದಿದ್ದಾರೆ. ಭಾರತಕ್ಕೆ ಸೂಪರ್ ಸ್ಪೆಷಾಲಿಟಿ ವೈದ್ಯರ ಅವಶ್ಯಕತೆಯಿಲ್ಲ ಎಂದು ಪ್ರತಿಪಾದಿಸುವ ಸಿಂಗ್ ವೈದ್ಯರಾದವರು ರೋಗವನ್ನು ಸರಿಯಾಗಿ ಗುರುತಿಸಿ, ಚಿಕಿತ್ಸೆ ನೀಡಬೇಕೆಂದು ಹೇಳುತ್ತಾರೆ. ಅಷ್ಟೇ ಅಲ್ಲ, ಎಲ್ಲೇ ನೈಸರ್ಗಿಕ ವಿಪತ್ತು ಸಂಭವಿಸಿದರೂ ಅಲ್ಲಿ ಡಾಕ್ಟರ್ಸ್ ಫಾರ್ ಯು ತಂಡ ಹಾಜರಿದ್ದು ವ್ಯೆದ್ಯಕೀಯ ನೆರವು ನೀಡುತ್ತದೆ. ಅದು ಅಸ್ಸಾಂ ಹಿಂಸಾಚಾರವಾಗಿರಬಹುದು, ಪ್ರವಾಹಪೀಡಿತ ಆಂಧ್ರಪ್ರದೇಶವಾಗಿರಬಹುದು, ಉತ್ತರಕಾಂಡದ ಅನಾಹುತವಾಗಿರಬಹುದು. ಅಲ್ಲೆಲ್ಲ ಡಾ.ರವಿಕಾಂತ ಸೇವೆ ಸಲ್ಲಿಸಿದ್ದಾರೆ. ಈ ಸಂಸ್ಥೆಯು ದೇಶದ ಕೆಲಕಡೆ ತನ್ನ ಶಾಖೆಯನ್ನು ಪ್ರಾರಂಭಿಸುವ ಅಭಿಲಾಷೆ ಹೊಂದಿದೆ. ಈಗಾಗಲೇ ಆರು ರಾಜ್ಯಗಳಲ್ಲಿ ಈ ಸಂಸ್ಥೆ ಸೇವಾನಿರತವಾಗಿದೆ. ಮೊದಲ ಹಂತವಾಗಿ ಈಗಾಗಲೇ ಮುಂಬೈ ರೈಲ್ ವಿಕಾಸ್ ಕಾರ್ಪೊರೇಷನ್ ನೆರವಿನಿಂದ ಲಲ್ಲುಭಾಯಿ ಕಾಂಪೌಂಡ್ನಲ್ಲಿ ಈ ಸಂಸ್ಥೆ ಶಾಖೆಯೊಂದನ್ನು ತೆರೆಯುವ ಸಿದ್ಧತೆ ನಡೆಸಿದೆ. ಬಿಹಾರದ ಪ್ರವಾಹ ಪೀಡಿತ ಪ್ರದೇಶದಲ್ಲಿ ಇವರ ತಂಡ 1.3.ಲಕ್ಷ ಜನರಿಗೆ ಚಿಕಿತ್ಸೆ ನೀಡಿ ದಾಖಲೆ ಸ್ಥಾಪಿಸಿದೆ. ಇವರ ಸೇವೆಯನ್ನು ಗುರುತಿಸಿ 2009ರಲ್ಲಿ ಸಾರ್ಕ್ ಯುವ ಪ್ರಶಸ್ತಿ ದೊರೆತಿದೆ. ಇದು ಮೊದಲಬಾರಿಗೆ ಭಾರತೀಯನೊಬ್ಬನಿಗೆ ದೊರೆತ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. 2010ರಲ್ಲಿ ಬ್ರಿಟಿಷ್ ಜರ್ನಲ್ ಗ್ರೂಪ್ ಅವಾರ್ಡ್ ಸಹ ದೊರೆತಿದೆ.
(ಆಧಾರ ಮುಂಬೈ ಮಿರರ್)
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com