ಕಳೆದ ನವೆಂಬರ್ನ ಮೊದಲ ವಾರದಲ್ಲಿ, ಮಂಗಳೂರು ನಗರದಂಚಿನ ಮಾರ್ನಿಂಗ್ ಮಿಸ್ಟ್ ಸ್ಟೇಹೋಮ್ನಲ್ಲಿ ಹಲವು ಯುವಕ-ಯುವತಿಯರು ಸಂಭ್ರಮ ಪಡುತ್ತಿದ್ದಾಗ, ಕೆಲವು ಸಂಘಟನೆಗಳ ಯುವಕರು ನುಗ್ಗಿ ದಾಂಧಲೆ ನಡೆಸಿ, ಯುವತಿಯರ ಜತೆ ಹೀನಾಯವಾಗಿ ವರ್ತಿಸಿದ ಪ್ರಕರಣಕ್ಕೆ ದೇಶವ್ಯಾಪೀ ಪ್ರಚಾರ ಸಿಕ್ಕಿತ್ತು.
ಆ ಪ್ರಕರಣದ ಒಂದು ವಿಶೇಷವೆಂದರೆ, ಘಟನೆ ನಡೆದಾಗ, ಅದರ ಸುಳಿವನ್ನು ಹಿಡಿದು ಒಳಗೆ ಹೋಗಿ ಕೆಲವು ದೃಶ್ಯಗಳನ್ನು ಟಿವಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದ ಖಾಸಗಿ ಟಿ.ವಿ. ಛಾನೆಲ್ ಒಂದರ ಛಾಯಾಗ್ರಾಹಕನ ವಿರುದ್ಧವೂ ಪೊಲೀಸರು ಮೊಕದ್ದಮೆಯನ್ನು ದಾಖಲು ಮಾಡಿದ್ದು.
ಆ ವರದಿಗಾರ ನವೀನ ಸೂರಂಜೆ ಮೇಲಿದ್ದ ಪ್ರಮುಖ ಆರೋಪ ಘಟನೆಯ ಸುದ್ದಿ ಪೊಲೀಸರಿಗೆ ಕೊಡಲಿಲ್ಲ ಎನ್ನುವುದೇ. ಆ ಪ್ರಕರಣಕ್ಕೆ ಸಿಕ್ಕಿದ ಅಬ್ಬರದ ಪ್ರಚಾರದ ಹಿನ್ನೆಲೆಯಲ್ಲಿ ಪೊಲೀಸರು ಅನೇಕರನ್ನು ಬಂಧಿಸಿದ್ದಾರೆ. ನವೀನ ಸೂರಂಜೆಯನ್ನು ಬಂಧಿಸಿದ್ದು ನವೆಂಬರ್ ಏಳರಂದು. ಅವರು ಈಗಲೂ ಜೈಲಿನಲ್ಲೇ ಇದ್ದಾರೆ.
ತಮಗೂ ಆ ಘಟನೆಗೂ ಏನೇನೂ ಸಂಬಂಧವೇ ಇಲ್ಲದೇ ಹೋದರೂ ತಮ್ಮನ್ನು ಬಂಧಿಸಿರುವುದಾಗಿ ದೂರಿದ ನವೀನ್ ಅವರ ಜಾಮೀನು ಅರ್ಜಿಯನ್ನು ಈಚೆಗೆ ಹೈಕೋರ್ಟ್ ತಿರಸ್ಕರಿಸಿತ್ತು. ಮಂಗಳೂರಿನಲ್ಲಿ, ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಪತ್ರಕರ್ತರ ಸಂಘಟನೆಗಳೂ ಅವರ ಬಿಡುಗಡೆಗೆ ಒತ್ತಾಯ ಪಡಿಸಿ ಪ್ರದರ್ಶನ ನಡೆಸಿದ್ದರು. ವರದಿಗಾರರ ವಿರುದ್ಧದ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯುವ ಭರವಸೆಯನ್ನೂ ಗೃಹ ಸಚಿವ ಅಶೋಕ ಅವರು ನೀಡಿದ್ದರು.
ಗುರುವಾರ ರಾಜ್ಯ ಸಚಿವ ಸಂಪುಟ ಕೈಗೊಂಡ ಕೆಲವು ಪ್ರಮುಖ ನಿರ್ಧಾರಗಳಲ್ಲಿ ವರದಿಗಾರ ನವೀನ ಸೂರಂಜೆ ಅವರ ವಿರುದ್ಧದ ಖಟ್ಲೆಯನ್ನು ಹಿಂದಕ್ಕೆ ಪಡೆಯುವುದೂ ಒಂದು. ಕೊನೆಗೂ ಸರ್ಕಾರ ಈ ವಿಚಾರದಲ್ಲಿ ಒಂದು ಒಳ್ಳೆಯ ಜನತಾಂತ್ರಿಕ ಮಾನವೀಯ ನಿರ್ಧಾರವನ್ನೇ ಕೈಗೊಂಡಿದೆ. ನವೀನ ಸೂರಂಜೆ ಇನ್ನು ಎರಡು ಮೂರು ದಿನಗಳಲ್ಲಿ ಯಾವುದೇ ಕಪ್ಪು ಚುಕ್ಕೆಯೂ ಇಲ್ಲದೇ ಜೈಲಿನಿಂದ ಹೊರಬರುವುದು ಸಾಧ್ಯವಾಗಬಹುದು.
ಆದರೆ ಮಂಗಳೂರು ಪ್ರದೇಶದಲ್ಲಿ "ಸ್ವಯಂ ಘೋಷಿತ ನೈತಿಕ ಪೊಲೀಸರ" ದಬ್ಬಾಳಿಕೆ ಕೊನೆಗಂಡಿಲ್ಲ. ಗುರುವಾರವಷ್ಟೇ ಆ ಊರಿನಲ್ಲಿ ವ್ಯಾಪಾರಿ ಸಂಸ್ಥೆಯೊಂದರ ಮಾಲಿಕ ಹಾಗೂ ಅವರ ಕಾರ್ಯಾಲಯದ ಸ್ವಾಗತಕಾರಿಣಿ ಕಾರಿನಲ್ಲಿ ಮನೆಗೆ ಹೋಗುವಾಗ, ಅವರಿಬ್ಬರನ್ನೂ ಒಂದು ಗುಂಪು ಥಳಿಸಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸರಿಗೂ ಈ ವಿಚಾರ ಗೊತ್ತು.
ಕಾನೂನಿಗೆ ವಿರುದ್ಧವಾಗಿ ವರ್ತಿಸಿದವರನ್ನೂ ಹಿಂಸಾಚಾರಕ್ಕೆ ಗುರಿಪಡಿಸುವ ಅಧಿಕಾರ ಯಾರಿಗೂ ಇಲ್ಲ. ಕಾನೂನಿನಂತೆ ಕ್ರಮ ಕೈಗೊಳ್ಳುವ ಅಧಿಕಾರ ಪೊಲೀಸರಿಗಷ್ಟೇ ಇರುವುದು. ಇನ್ನು ಕಾನೂನಿನ ಮಾತನ್ನು ಬಿಟ್ಟು, ಅನೈತಿಕ ವರ್ತನೆ ಎಂದು ಭಾವಿಸಬಹುದಾದ ವರ್ತನೆಯ ವಿಚಾರದಲ್ಲಿ ತಮ್ಮ ಬಾಹುಬಲವನ್ನು ಪ್ರದರ್ಶಿಸುವವರು ಮಾನವ ಹಕ್ಕುಗಳ ದಮನ ಮಾಡುತ್ತಿದ್ದಾರೆಂದೇ ಭಾವಿಸಬೇಕು. ಅವರನ್ನು ಪ್ರಭುತ್ವ ಹಾಗೇ ನಡೆಸಿಕೊಳ್ಳಬೇಕು.
ಮಂಗಳೂರಿನಲ್ಲಿ ಈ ಪಿಡುಗು ಈಗ ಹೆಚ್ಚಾಗಿರುವಂತಿದೆ. ಕಾಯಿದೆ ಹಾಗೂ ಸುವ್ಯವಸ್ಥೆಯ ಪಾಲನೆಯ ಹೊಣೆ ಹೊತ್ತ ಪೊಲೀಸರು ಇದನ್ನು ಸಹಿಸಬಾರದು. ಸರ್ಕಾರವೂ ಇಂತಹ ಪ್ರಕರಣಗಳನ್ನು ಲಘುವಾಗಿ ಪರಿಗಣಿಸಬಾರದು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ, ಬಿಜೆಪಿಯ ಮಹಿಳಾ ವಿಭಾಗದ ನಾಯಕಿ ಮಂಜುಳಾ ಅವರು ತಮ್ಮ ರಾಜಿನಾಮೆ ಪತ್ರದಲ್ಲಿ ಮಂಗಳೂರಿನ ಪ್ರಕರಣದಲ್ಲಿ ಆಯೋಗದ ಅಧ್ಯಯನ ಆಧರಿತ ವರದಿಯಲ್ಲಿನ ಶಿಫಾರ್ಸುಗಳನ್ನು ಸರ್ಕಾರ ಅಲಕ್ಷ್ಯ ಮಾಡಿದ್ದನ್ನೂ ಪ್ರಸ್ತಾಪಿಸಿದ್ದಾರೆ. ಇಂತಹ ದೂರುಗಳಿಗೆ ಭವಿಷ್ಯದಲ್ಲಿ ಅವಕಾಶವಿರಬಾರದು.