ಕಾನೂನಿನ ಪರಾಮರ್ಶೆ ಅವಶ್ಯ

Updated on: 

ಅನ್ಯಾಯ, ಅತ್ಯಾಚಾರಕ್ಕೊಳಗಾದ ಅಬಲೆಗೆ ನ್ಯಾಯ ದೊರೆಯುವಲ್ಲಿ ಎಷ್ಟೊಂದು ಅಡೆತಡೆಗಳು ! ನೊಂದ ಜೀವಕ್ಕೆ ಕಾಡುವ ಅಸಹಾಯಕತೆ, ಅದೂ ಅಸಹನೀಯ, ಇದು ಹಾಲಿ ಕಾನೂನಿನಲ್ಲಿರುವ ಹಲವಾರು ನ್ಯೂನತೆಗಳ ಫಲ. ಅಪರಾಧಿ ಯೋರ್ವ ಅಪರಾಧವನ್ನು "ಕುಡಿದು" ಎಸಗಿದ್ದಲ್ಲಿ ಆತನಿಗೆ ಶಿಕ್ಷೆಯಲ್ಲಿ ರಿಯಾಯಿತಿ, ಆತ ಎಷ್ಟೇ ಕ್ರೂರ ಕೃತ್ಯವೆಸಗಿರಲಿ ವರ್ಷ 18 ಆಗಿಲ್ಲ ಎಂಬ ಕಾರಣ ಆತನಿಗೂ ರಿಯಾಯಿತಿ. ಇದೂ ಸಾಲದೆ ಕಾನೂನಿನ ಉರುಳು ಕೊರಳನ್ನು (ಅಪರಾಧಿಯನ್ನು) ಸುತ್ತಿಕೊಂಡಿದ್ದಲ್ಲಿ ಅದರಿಂದ ತಪ್ಪಿಸಿಕೊಳ್ಳುವ ಕೊನೆಯ ಅವಕಾಶವೆಂದು ರಾಷ್ಟ್ರಪತಿಯವರಿಗೆ ಆತನಿಂದ ಮನವಿ ಸಲ್ಲಿಸುವ ಅವಕಾಶ.
ನೊಂದ, ಬೆಂದ, ಕಮರಿದ ಜೀವಕ್ಕೇ ದೊರಕದ ಸಹಾನುಭೂತಿ ಅಪರಾಧಿಗೆ ಇಲ್ಲಿ ಸಲ್ಲುತ್ತದೆ !! ಇದರರ್ಥ ಏನೆಂದರೆ ಈ ಎಲ್ಲ ಸದವಕಾಶಗಳನ್ನು (?) ನುರಿತ ಅಪರಾಧಿ, ಪಾತಕಿಯಾದವನು ತನಗೆ ಅನುಕೂಲವಾಗುವಂತೆ ಹೊಂದಿಸಿಕೊಂಡು (ಪ್ರೀ ಪ್ಲಾನ್ಡ್) ಅಪರಾಧವೆಸಗುವಂತೆ ನೀಡುವ ಕುಮ್ಮಕ್ಕು ಅಪರಾಧಿಗೆ ಒಂದೊಮ್ಮೆ ನಾಮ್‌ಕೆವಾಸ್ತೆ ಶಿಕ್ಷೆ ಲಭಿಸಿದರೂ ಅಪರಾಧೀ ಪ್ರಜ್ಞೆ ಆತನನ್ನು ಕಾಡದೆ ಪುನರಪಿ ಕುಕೃತ್ಯಕ್ಕೆಳಸುವ ಪರಿ ಇದು. ಇಂತಹ ಅಪದ್ಧಗಳಿಂದಲ್ಲವೇ ನಮ್ಮ ಕಾನೂನು ಎಂಬುದು ಕಾಗದದ ಹುಲಿಯಾಗಿ ಕ್ರಿಮಿನಲ್‌ಗಳ ಸಂಖ್ಯೆ ದಿನೇ ದಿನೇ ಅಧಿಕವಾಗ್ತಾ ಇರೋದು? ಆದರೂ ನಮ್ಮ ಕಾನೂನಿನ ಪರಿಭಾಷೆ ಆಮೂಲಾಗ್ರವಾಗಿ ಪರಿಷ್ಕರಿಸ್ಪಡಬೇಕು. ಕ್ರಿಮಿನಲ್ ಕೃತ್ಯಗಳು ಕ್ಷಯಿಸಬೇಕು ಎಂಬ ವಿಚಾರದಲ್ಲಿ ಸರ್ವ ಸಮ್ಮತ ಅಭಿಪ್ರಾಯವಿನ್ನೂ ಸಮಾಜದಲ್ಲಿ ಮೂಡಿಬಂದಿಲ್ಲ. ಇದು ಬೇಸರದ ಸಂಗತಿಯಲ್ಲವೇ ?
- ಎನ್.ಡಿ.ಕಾರಂತ, ಮೈಸೂರು

ಮುಸಲ್ಮಾನರೂ ಸಾಯುತ್ತಿಲ್ಲವೇ?
ಖ್ಯಾತ ನಟ ಕಮಲ್‌ಹಾಸನ್‌ರವರ 'ವಿಶ್ವರೂಪಂ' ಚಲನಚಿತ್ರ ಪ್ರದರ್ಶನ ವಿರೋಧಿಸಿ ದೇಶದ ವಿವಿದೆಡೆ ಪ್ರತಿಭಟನೆ ನಡೆಸುತ್ತಿರುವುದು ಹಾಗೂ ಹಿಂಸಾಚಾರಕ್ಕಿಳಿಯುತ್ತಿರುವುದು ಸರಿಯಲ್ಲ. ಯೂರೋಪಿನಿಂದ ಚೀನಾದವರೆಗೂ ಪೆಡಂಭೂತವಾಗಿ ಬೆಳೆದು ನಾಗರಿಕ ಸಮಾಜಕ್ಕೆ ಕಂಟಕ ಪ್ರಾಯವಾಗಿರುವ ಭಯೋತ್ಪಾದನೆಯನ್ನು ಚಿತ್ರೀಕರಿಸಿರುವುದರಲ್ಲಿ ತಪ್ಪೇನಿಲ್ಲ.
ಮುಸ್ಲಿಂ ಸಮಾಜದಲ್ಲಿ ಮೂಲಭೂತವಾದಿಗಳು ತಮ್ಮ ಸ್ವಹಿತಾಸಕ್ತಿ ರಕ್ಷಿಸಿಕೊಳ್ಳಲು ಜಿಹಾದ್ ಹೆಸರಿನಲ್ಲಿ ಬಡ ಹಾಗೂ ಮಧ್ಯಮವರ್ಗದ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ.  ಅನ್ಯರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಆದರೆ ಭಯೋತ್ಪಾದನೆ ಮುಸ್ಲಿಮೇತರರನ್ನು ಮಾತ್ರವಲ್ಲ ಮುಸ್ಲಿಮರನ್ನೂ ಸಹ ಸಹಸ್ರ ಸಂಖ್ಯೆಯಲ್ಲಿ ಬಲಿ ತೆಗೆದುಕೊಳ್ಳುತ್ತಿರುವುದು ಕಠೋರ ಸತ್ಯ. ಆದ್ದರಿಂದ ಭಾರತದ ಮುಸ್ಲಿಮರು 'ವಿಶ್ವರೂಪಂ' ಚಲನಚಿತ್ರವನ್ನು ವಿರೋಧಿಸುವುದನ್ನು ಬಿಟ್ಟು ಭಯೋತ್ಪಾದನೆ ವಿರುದ್ಧ ನಿಂತರೆ ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ಕ್ಷೇಮ.
ಚಲನಚಿತ್ರರಂಗದ ಗಣ್ಯರು, ಕಲಾವಿದರು, ಬುದ್ಧಿಜೀವಿಗಳು, ಪತ್ರಕರ್ತರು, ಸಾಹಿತಿಗಳು ಹಾಗೂ ಎಲ್ಲಾ ಕ್ಷೇತ್ರಗಳಲ್ಲಿನ ಗಣ್ಯ ವ್ಯಕ್ತಿಗಳು ಕಮಲ್ ಹಾಸನ್ ರವರಿಗೆ ನೈತಿಕ ಬೆಂಬಲ ನೀಡಬೇಕು ಆ ಮೂಲಕ ದೇಶದ ನೈಜ ಜಾತ್ಯತೀತ ಸ್ವರೂಪವನ್ನು ಎತ್ತಿ ಹಿಡಿಯಬೇಕು.
- ಕೆ.ಎಂ.ಲಿಂಗರಾಜು, ನಂಜನಗೂಡು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com