ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- "ಮಣ್ಣಿನಲ್ಲದೇ ಹಸಿರೀಕರಣ' ಹೀಗೆಂದರೇನು? ಊಹು. ನನಗೆ ಅರ್ಥವಾಗಲಿಲ್ಲ. ನೀವು ನೋಡಿಲ್ಲದಿದ್ದರೆ ಜ.31ರಂದು 'ಬೈಟು ಕಾಫಿ' 4ನೇ ಪುಟದಲ್ಲಿ 'ಅಕ್ವಾಫೋನಿಕ್ಸ್ ಕಮಾಲ್' ಲೇಖನದ ಶೀರ್ಷಿಕೆಯನ್ನು ಪರಿಶೀಲಿಸಿ. ಪ್ರಾಯಶಃ ಅದು 'ಮಣ್ಣಿಲ್ಲದೇ' ಎಂದಿರಬೇಕಿತ್ತು.'
'ಹೊಟ್ಟೆ ಪಕ್ಷವು ದಿವಂಗತವೇ! ಸಂಪಾದಕೀಯ ಲೇಖನದಲ್ಲಿ (ಕಜಪದ ಆಂತರಿಕ ಜಗಳ) ಪ್ರಸನ್ನಕುಮಾರರ ಬಗೆಗೆ ತಿಳಿವಳಿಕೆಗಾಗಿ ಆವರಣದಲ್ಲಿ ಮಾಹಿತಿಯಾಗಿ 'ದಿವಂಗತ ಹೊಟ್ಟೆಪಕ್ಷದ ರಂಗಸ್ವಾಮಿ ಅವರ ಹತ್ತಿರದ ಸಂಬಂಧಿ' ಎಂದು ಬರೆಯಲಾಗಿದೆ. ದೂರಾನ್ವ ಯವಾಗಿ 'ದಿವಂಗತ' ಪದವು ರಂಗಸ್ವಾಮಿಗೆ ಸಂಬಂಧಿಸಿದೆ. ಆದರೆ ಹೊಟ್ಟೆಪಕ್ಷದ ದಿ. ರಂಗಸ್ವಾಮಿ ಎಂದು ಪದಪ್ರಯೋಗ ಮಾಡುವುದೇ ಲೇಸು.'
'ಅದೇ ದಿನದ 'ಬೈಟು ಕಾಫಿ' ಮೊದಲ ಪುಟದಲ್ಲಿ 'ಮಾಡೆಲ್ಗೇರಿ' ಲೇಖನದಲ್ಲಿ ಉಪಶೀರ್ಷಿಕೆಯಾಗಿ 'ಬಸವನ ಚತುರತೆ' ಎಂಬ ಪದ ಬಳಸಿದೆ. 'ಚತುರ' ವಿಶೇಷಣ ಪದಕ್ಕೆ 'ತೆ' ಪ್ರತ್ಯಯ ಸೇರುವುದಿಲ್ಲ. 'ಯ' ಪ್ರತ್ಯಯ ಸೇರಬೇಕು. 'ಚಾತುರ್ಯ' ಎಂಬುದು ಸರಿಯಾದ ರೂಪ.'
"ತಪ್ಪಾಯ್ತು ತಿದ್ಕೋತೀವಿ' ಅಂಕಣಕ್ಕೆ ಬರೆಯುವವರೇ ಅಶುದ್ಧವಾದ, ಅಬದ್ಧ ಪದಗಳನ್ನು ಬಳಸುತ್ತಿವುದನ್ನು ಕಂಡು ಬರೆಯದೇ ಇರಲಾಗದು. ಜ.24ರಂದು ನಾರಾಯಣ ಭಟ್ಟ ಪಾದೇಲುಕೋಡಿಯವರು 'ನ್ಯೂನ್ಯತೆ' ಎಂಬ ಪದವನ್ನು ಬಳಸಿದ್ದಾರೆ. 'ನ್ಯೂನತೆ' ಎಂಬುದು ಶುದ್ಧರೂಪ. ನಾರಾಯಣ ಭಟ್ಟರೇ ಹಾಗೆ ಬಳಸಿದ್ದಾರೋ ಅಥವಾ 'ತಿದ್ಕೊಳೋವಾಗ' ಆದ ಅವಾಂತರವೋ ಹೇಳಲಾರೆ!'
'ದೃಶ್ಯಮಾಧ್ಯಮ ವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಕರು, ನಿರೂಪಕಿಯರು ವಾರ್ತಾವಾಚಕ/ಕಿಯರು 'ನ್ಯೂನ್ಯತೆ' ಎಂಬ ಪದವನ್ನು ಧಾರಾಳವಾಗಿ ಬಳಸುವುದನ್ನು ಗಮನಿಸಿದ್ದೇನೆ. ದೂರದರ್ಶನದ ಪ್ರಭಾವ ಜನಸಾಮಾನ್ಯರ ಮೇಲೆ ಹಾಗೂ ಪತ್ರಿಕೆಗಳ ಮೇಲೂ ಗಾಢವಾಗಿ ಮೂಡುತ್ತದೆ. 'ನ್ಯೂನ' ಎಂಬ ಪದವಿದೆ. ದೋಷ, ಕೊರತೆ ಎಂದರ್ಥ. ನ್ಯೂನ ಪದಕ್ಕೆ 'ತೆ' ಪ್ರತ್ಯಯ ಸೇರಿ 'ನ್ಯೂನತೆ' ಎಂದಾಗುತ್ತದೆ. 'ನ್ಯೂನ್ಯತೆ' ಎಂದಾಗುವುದಿಲ್ಲ. 'ಅನ್ಯೋನ್ಯ' ಎಂಬ ಪದವಿದೆ. ಪರಸ್ಪರ ಎಂದರ್ಥ. ಈ ಪದದ ಪ್ರಭಾವದಿಂದ, ಭ್ರಮೆಯಿಂದ 'ನ್ಯೂನ್ಯತೆ' ಎಂಬ ಅಪದ್ಧ ಪದ ಬಳಕೆಗೆ ಬಂದಿರಲೂಬಹುದು.'
'ಮಿತ್ರ ಶ್ರೀವತ್ಸ ಜೋಷಿಯವರು ನನ್ನ ಹೆಸರನ್ನು ಪ್ರಸ್ತಾಪಿಸಿರುವುದರಿಂದ 'ಒಮ್ಮತಾಭಿಪ್ರಾಯ'ಕ್ಕೆ ಬರಲೇಬೇಕು. ಜೋಷಿಯವರು ಹೇಳಿದಂತೆ 'ಒಮ್ಮತ' ಎಂಬುದು ಅಚ್ಚಕನ್ನಡ ಪದವಲ್ಲ. 'ಒಮ್ಮತ'ದಲ್ಲಿ ಒಂದು ಎಂಬುದು ಕನ್ನಡಪದ. 'ಮತ' ಎಂಬುದು ಸಂಸ್ಕೃತಪದ. 'ಮತಾಭಿಮಾನ' ಎಂಬಲ್ಲಿ ಸವರ್ಣದೀರ್ಘ ಸಂಧಿಯಾಗುತ್ತದೆ. ಮತ ಎಂಬುದಕ್ಕೆ ಪ್ರಸ್ತುತ 'ಅಭಿಪ್ರಾಯ' ಎಂದೇ ಅರ್ಥ. 'ಮತಾಭಿಪ್ರಾಯ' ಎಂದು ಬಳಸಿದರೆ 'ಡೋರ್ ಬಾಗಿಲು' ಎಂದಂತಾಗುತ್ತದೆ. 'ಒಮ್ಮತಾಭಿಪ್ರಾಯ' ಸೇರಿಸಿದರೆ ಲೋಪಸಂಧಿಯೆಂದೇ ಹೇಳಬೇಕು' ಎಂದಿದ್ದಾರೆ.
- ವಿಶ್ವೇಶ್ವರ ಭಟ್