ಎರಡನೆಯ ಇಬ್ರಾಹಿಂ ಅದಿಲ್ಶಹ 1580 ರಿಂದ 1626 ರವರೆಗೆ ಬಿಜಾಪುರದ ಸುಲ್ತಾನನಾಗಿದ್ದ. ಅದಿಲ್ಶಾಹಿ ಮನೆತನದ ಐದನೆಯ ಸುಲ್ತಾನನಾದ ಈತನಿಗೆ ಜಗದ್ಗುರ ಬಾದಶಹ ಎಂಬ ಅಭಿದಾನವಿತ್ತು. ಷಿಯಾ ಮತ್ತು ಸುನ್ನಿ ಮುಸಲ್ಮಾನರಲ್ಲಿ ಹಾಗೂ ಹಿಂದೂ ಮುಸಲ್ಮಾನರ ಒಗ್ಗಟ್ಟಿಗೆ ಸಂಗೀತದ ಮೂಲಕ ಶ್ರಮಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಬಿಜಾಪುರದಿಂದ ಏಳು ಕಿಲೋಮೀಟರ್ ದೂರದಲ್ಲಿ ಸುಂದರವಾದ ನವರಸಪುರ ಎಂಬ ಪಟ್ಟಣ, ಅರಮನೆ, ಹೂದೋಟ ಎಲ್ಲವನ್ನು ನಿರ್ಮಿಸಿ, ಅಲ್ಲಿ ತನ್ನ ರಾಜಧಾನಿಯನ್ನು ಸ್ಥಳಾಂತರಿಸುವ ಪ್ರಯತ್ನದಲ್ಲಿದ್ದ. ಆದರೆ ಅದು ಕೈಗೂಡಲಿಲ್ಲ. ಈಗ ಜಿಲ್ಲಾಡಳಿತ ಪ್ರತಿವರ್ಷ ಅದರ ಸ್ಮರಣಾರ್ಥ ನವರಸ ಉತ್ಸವವನ್ನು ಆಚರಿಸಿ ಪ್ರಖ್ಯಾತ ಕಲಾವಿದರನ್ನು ಕರೆಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಂದು ಈ ನವರಸಪುರ ಸರಿಯಾದ ರಕ್ಷಣೆಯಿಲ್ಲದೆ ಅಳಿವಿನ ಅಂಚಿನಲ್ಲಿದೆ. ಇಬ್ರಾಹಿಂ ಸಂಗೀತ ಪ್ರಿಯನಾಗಿದ್ದು, ಹಿಂದೂ ದೇವತೆಗಳ ಕುರಿತು ಅನೇಕ ಗೀತೆಗಳನ್ನು ರಚಿಸಿ, ಸಂಗೀತಕ್ಕೆ ಅಳವಡಿಸಿ ಹಾಡುತ್ತಿದ್ದ. ಅಲ್ಲದೆ ಸ್ವತಃ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದ. ಅವನ ಕಾಲದಲ್ಲಿ ದೂರದ ಊರುಗಳಿಂದ ಅನೇಕ ಸಂಗೀತ ವಿದ್ವಾಂಸರು ಆಗಮಿಸಿ, ರಾಜನ ಆಶ್ರಯ ಪಡೆದಿದ್ದರು. ಸರಸ್ವತಿ ಮತ್ತು ಗಣಪತಿ ಇವನಿಗೆ ಪ್ರಿಯವಾಗಿದ್ದ ದೇವರುಗಳು. ಅವನು ಸಂಗೀತದ ಬಗ್ಗೆ ಬರೆದ ಕೃತಿ ಕಿತಾಬ್-ಇ-ನವರಸ್ನ ಪ್ರಾರ್ಥನಾ ಶ್ಲೋಕದಲ್ಲಿ ಶಾರದೆಯನ್ನು ಸ್ತುತಿಸಿದ್ದಾನೆ. ಅದು ಹೀಗಿದೆ,
'ನೌರಸ ಸುರ ಜುಗ ಜಗಜ್ಯೋತಿ ಆ ನುಡ ಸರ್ವಗುಣಿ
ಯೋ ಸತತಸರಸುತಿ ಮಾತಾ ಇಬರಾಹೀಮ ಪರಸಾದ ಭೀ ದೂನಿ'
ಅಂದರೆ, ಹಿಂದುವಾದರೇನು, ಮುಸ್ಲಿಂ ಆದರೇನು, ಭಾಷೆ ಯಾವುದಾದರೇನು, ಭಾವನೆಗಳು ಒಂದೇ, ಓ ತಾಯಿ ಸರಸ್ವತಿ ಮಾತೆ, ಇಬ್ರಾಹಿಮನ ನವರಸ ಕೃತಿ ಚಿರಸ್ಥಾಯಿಯಾಗಲೆಂದು ಹರಸು. ಕನ್ನಡ, ಉರ್ದು, ದಖ್ಖನಿ ಮತ್ತು ಮರಾಠಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಇಬ್ರಾಹಿಂ ಅನೇಕ ಹಿಂದುಗಳಿಗೆ ತನ್ನ ಸರ್ಕಾರದಲ್ಲಿ ಉನ್ನತ ಸ್ಥಾನ ನೀಡಿದ್ದ. ವಿಜಾಪುರದ ರುಕ್ಮಾಂಗದ ಪಂಡಿತರ ಪ್ರಭಾವದಿಂದಾಗಿ ಒಮ್ಮೆ ಇಬ್ರಾಹಿಂ ಅದಿಲ್ ಶಾಹ್ನ ಅರಮನೆಯಲ್ಲಿ ಸರಸ್ವತಿ ಪೂಜೆಯನ್ನು ಮಾಡಿ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಬಾದಶಹನ ಸರಸ್ವತಿಯ ಬಗೆಗಿನ ಹುಚ್ಚನ್ನು ಬಿಡಿಸಲು ಮುಸ್ಲಿಮರು ಅಜ್ಮೀರದಿಂದ ಅಬುಲ್ ಹಸನ್ ಖಾದ್ರಿ ಅವರನ್ನು ಬರಮಾಡಿಕೊಂಡರೆಂದು ರಿಚರ್ಡ್ ಈಟನ್ ತಮ್ಮ 'ಸೂಫೀಸ್ ಆಫ್ ಬಿಜಾಪುರ್' ಕೃತಿಯಲ್ಲಿ ನಮೂದಿಸಿದ್ದಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ