ತಪ್ಪಾಯ್ತು ತಿದ್ಕೋತೀವಿ

Updated on: 

ಅಥಣಿಯಿಂದ ರವಿ ಶಿವಪ್ಪ ಕೋರೆ ಅವರು ಬರೆಯುತ್ತಾರೆ- 'ಡಿ.27ರಂದು ಮುಖಪುಟದಲ್ಲಿ ಚೀನಾದ ಹೊಸ ರೈಲು ಮಾರ್ಗದ ಬಗ್ಗೆ ಹೇಳುವಾಗ 'ವಿಶ್ವದ ಅತಿ ಉದ್ದದ ರೈಲು ಮಾರ್ಗ' ಎಂದು ಮುದ್ರಿಸಲಾಗಿದೆ. ಆದರೆ ಅದು ವಿಶ್ವದ ಅತಿ ಉದ್ದದ ಹೈಸ್ಪೀಡ್ ರೈಲು ಮಾರ್ಗ ಎಂದು ಇರಬೇಕಿತ್ತು. ಯಾಕೆಂದರೆ ಟ್ರಾನ್ಸ್ ಸೈಬೀರಿಯನ್ ರೈಲು ಮಾರ್ಗ ವಿಶ್ವದ ಅತಿ ಉದ್ದದ ರೈಲು ಮಾರ್ಗ. 14ನೇ ಪುಟದಲ್ಲಿರುವ ವರದಿ ಸರಿಯಾಗೇ ಇದೆ. ಕೇವಲ ಮುಖಪುಟದಲ್ಲಿ ಮಾತ್ರ ತಪ್ಪಾಗಿದೆ' ಎಂದಿದ್ದಾರೆ.
ಸುಧೀಂದ್ರ ಕಂಚಿತೋಟ ಅವರು ಎಸ್‌ಎಂಎಸ್ ಕಳುಹಿಸಿದ್ದಾರೆ. 'ಕ್ರೀಡಾಪುಟದಲ್ಲಿನ ತಪ್ಪುಗಳು ಅಸಹನೀಯವಾಗಿರುತ್ತವೆ. ತಪ್ಪಿಲ್ಲದ ಕ್ರೀಡಾಪುಟ ನೋಡುವುದೇ ಅಪರೂಪವಾಗಿದೆ. ಕ್ರೀಡಾಪುಟ ತೆರೆದರೆ ಇವತ್ತೇನು ತಪ್ಪಿದೆಯಪ್ಪಾ ಅಂತ ನೋಡುವಂತಾಗಿದೆ. 'ಕನ್ನಡ ಪ್ರಭ'ದಿಂದ ನಾವು ಇಂತಹ ಕ್ರೀಡಾಪುಟವನ್ನು ನಿರೀಕ್ಷಿಸಿರಲಿಲ್ಲ. ಜ.16ರಂದು ಕ್ರೀಡಾಪುಟದಲ್ಲಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಸುದ್ದಿಯ ಕೊನೇ ಪ್ಯಾರಾದಲ್ಲಿ 'ಅಮೆರಿಕದ ಖ್ಯಾತ ಬ್ಯಾಡ್ಮಿಂ ಟನ್ ತಾರೆ ಸೆರೆನಾ ವಿಲಿಯಮ್ಸ್‌' ಎಂದು ಬರೆಯಲಾಗಿದೆ. ಸೆರೆನಾ ವಿಲಿಯಮ್ಸ್ ಬ್ಯಾಡ್ಮಿಂಟನ್ ಆಡಲು ಶುರುಮಾಡಿದ್ದು ಯಾವಾಗ?' ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಹೇಮಲತಾ ಮುರಳಿ ಅವರು ಬರೆಯುತ್ತಾರೆ- 'ಜ.15ರಂದು ಬೆಂಗಳೂರು ಆವೃತ್ತಿಯ ಪತ್ರಿಕೆಯಲ್ಲಿ (ಪುಟ 4) 'ಸಂಕ್ರಾಂತಿಯಂದೂ ನಗರ ಪ್ರದಕ್ಷಿಣೆ ನಡೆಸಿದ ಆಯುಕ್ತ' ಸುದ್ದಿಯಲ್ಲಿ, 'ಚಾಮರಾಜಪೇಟೆ, ಪಾದರಾಯನಪುರ, ವಿಜಯನಗರ ಮತ್ತಿತರ ಕಡೆಯಲ್ಲಿ ಸಮಸ್ಯೆಗಳನ್ನು ಗುರುತಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು' ಎಂದಿದೆ. ನಂತರ 'ಚಾಮರಾಜನಗರದಲ್ಲಿ ಸಮಸ್ಯೆ ತೀವ್ರಗೊಂಡಿದ್ದು, ಸ್ಥಳೀಯ ಎಂಜಿನಿಯರ್ ವಿರುದ್ಧ ಗುಡುಗಿದ ಅವರು, ಕೂಡಲೇ ಸಮಸ್ಯೆ ಪರಿಹರಿಸಬೇಕೆಂದರು' ಎಂದಿದೆ. ಆಯುಕ್ತರು ಚಾಮರಾಜನಗರಕ್ಕೆ ಹೋಗಿದ್ದಾರೆಯೇ? ಅವರು ಅಲ್ಲಿಯ ಸಮಸ್ಯೆಗಳ ಕುರಿತೂ ಗಮನಹರಿಸುತ್ತಿದ್ದಾರಾ? ಅಥವಾ ಆ ಎಂಜಿನಿಯರ್ ಆ ಊರಲ್ಲೂ ಸಮಸ್ಯೆ ಪರಿಹರಿಸಬೇಕಿತ್ತಾ? ಗೊಂದಲ ಉಂಟುಮಾಡುವಂತಹ ತಪ್ಪು ತೀವ್ರ ಸ್ವರೂಪದ್ದಲ್ಲವೇ? ಚಾಮರಾಜಪೇಟೆ ಹೋಗಿ ಚಾಮರಾಜನಗರ ಎಂದು ಮುದ್ರಿಸಿದ್ದೀರಿ. ಇದು ಅತಿಯಾದ ಕೆಲಸದ ಒತ್ತಡದಿಂದಾಗಿರುವುದೇ?' ಎಂದು ಪ್ರಶ್ನಿಸಿದ್ದಾರೆ.
ಪತ್ರಕರ್ತರು ದಿನವೂ ಒತ್ತಡದಲ್ಲೇ ಕೆಲಸ ಮಾಡುತ್ತಾರೆ. ಬಹುತೇಕ ಪತ್ರಕರ್ತರು ಉತ್ತಮವಾಗಿ ಕೆಲಸ ಮಾಡುವುದು ಒತ್ತಡದಲ್ಲಿ ಮಾತ್ರ ಎಂಬ ಮಾತೂ ಚಾಲ್ತಿಯಲ್ಲಿದೆ. ಆದ್ದರಿಂದ ಒತ್ತಡದಲ್ಲಿ ಕೆಲಸ ಮಾಡಿದ್ದರಿಂದ ತಪ್ಪಾಯಿತು ಎಂಬ ಸಮಜಾಯಿಷಿ ಪತ್ರಕರ್ತರಿಗೆ ಸರಿಹೊಂದುವುದಿಲ್ಲ. ಒತ್ತಡ ಎಷ್ಟೇ ಇರಲಿ, ಮಾಡುತ್ತಿರುವ ಕೆಲಸದತ್ತ ಏಕಾಗ್ರತೆ ಇದ್ದರೆ ತಪ್ಪುಗಳಾಗುವುದಿಲ್ಲ.

-ವಿಶ್ವೇಶ್ವರಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com