ರಾಜಕಾರಣ ಮಕ್ಕಳಾಟವಲ್ಲ

Updated on: 

ಕಳೆದ ಕೆಲವು ವಾರಗಳಿಂದಲೂ ರಾಜ್ಯಾಡಳಿತದಲ್ಲಿ ಗೊಂದಲ ಮೂಡಿಸುವಂತಹ ಒಂದಲ್ಲ ಒಂದು ಘಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿರುವ ಬಿಜೆಪಿ ಶಾಸಕರ ರಾಜಿನಾಮೆ ಕುರಿತ ಹೇಳಿಕೆಗಳು, ಬುಧವಾರ ವಿಧಾನಸೌಧದಲ್ಲಿ ಸ್ಪೀಕರ್ ಬೋಪಯ್ಯ ಅವರ ಕಾರ್ಯಾಲಯದ ಮುಂದೆ ಕಂಡು ಬಂದ ನಾಟಕೀಯ ಬೆಳವಣಿಗೆಗಳನ್ನು ಒಂದು ಪ್ರಹಸನವೆಂದು ಕರೆಯದೇ ಇನ್ನೇನು ಹೇಳಬೇಕೋ ಗೊತ್ತಾಗುತ್ತಿಲ್ಲ.
ಬುಧವಾರ ಹದಿಮೂರು ಮಂದಿ ಚುನಾಯಿತ ವಿಧಾನ ಸಭೆ ಸದಸ್ಯರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಲು ಸ್ಪೀಕರ್ ಬೋಪಯ್ಯ ಅವರ ಕಾರ್ಯಾಲಯಕ್ಕೆ ಹೋದಾಗ ಅಲ್ಲಿ ಅವರೇ ಇರಲಿಲ್ಲ.
ಸ್ಪೀಕರ್ ಬೋಪಯ್ಯ ವಿದೇಶ ಪ್ರವಾಸದಲ್ಲಿದ್ದಾರೆನ್ನುವ ವದಂತಿಗಳು ಹಬ್ಬಿದ್ದವು. ಗುರುವಾರ ಸ್ಪೀಕರ್ ಬೋಪಯ್ಯ ಅವರು ಒಂದು ಹೇಳಿಕೆಯಲ್ಲಿ ತಾವು ಎಲ್ಲೂ ಹೋಗಿಲ್ಲ ಖಾಸಗಿ ಕಾರ್ಯಕ್ಕೆ ಗಮನ ಕೊಡಬೇಕಾಗಿದ್ದರಿಂದ ಕಾರ್ಯಾಲಯಕ್ಕೆ ಬರಲಾಗಲಿಲ್ಲ ಎಂದು ತಿಳಿಸಿದ್ದಾರೆ. ಅದು ಅವರ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಚಾರ. ಆದರೆ ಕಳೆದ ಹಲವಾರು ದಿನಗಳಿಂದಲೂ ಶಾಸಕರ ರಾಜಿನಾಮೆಯ ಪ್ರಸ್ತಾಪ ಕುರಿತಂತೆ ಪ್ರಚಾರ ಸಾಕಷ್ಟು ನಡೆದಿದ್ದರೂ ಅಧಿಕೃತವಾಗಿ ಯಾವ ಶಾಸಕರೂ ಸ್ಪೀಕರ್‌ಗೆ ಏನನ್ನೂ ತಿಳಿಸಿರಲಿಲ್ಲವಾದ್ದರಿಂದ ಈ ವಿಚಾರದಲ್ಲಿ ಸ್ಪೀಕರ್ ಯಾವ ಕ್ರಮವನ್ನೂ ಕೈಗೊಳ್ಳುವ ಅಗತ್ಯವಿರಲಿಲ್ಲ ಎನ್ನುವುದು ನಿಜ.
ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ, ಇನ್ನೂ ಬಿಜೆಪಿಯಲ್ಲೇ ಉಳಿದಿರುವ ಯಡಿಯೂರಪ್ಪ ಬೆಂಬಲಿಗ ಶಾಸಕರು ಹಾಗೂ ಮಂತ್ರಿಗಳು, ತಮ್ಮ ರಾಜಿನಾಮೆ ಕುರಿತಂತೆ ಸ್ಪಷ್ಟವಾದ ಹಾಗೂ ಗಂಭೀರವಾದ ರೀತಿಯಲ್ಲಿ ನಡೆದುಕೊಳ್ಳದೇ ಇರುವುದು. ಈಗಲೂ ಅವರ ನಿಲವಿನಲ್ಲಿ ಸ್ಪಷ್ಟತೆ ಇಲ್ಲ.
ರಾಜಿನಾಮೆಯ ವಿಚಾರವನ್ನು ಪ್ರತಿನಿತ್ಯ ಪ್ರಸ್ತಾಪಿಸುತ್ತಿರುವುದನ್ನು ರಾಜ್ಯಪಾಲ ಹಂಸರಾಜ ಬಾರಧ್ವಾಜ್ ಅವರು 'ಮಕ್ಕಳಾಟದಂತಿದೆ' ಎಂದು ವರ್ಣಿಸಿರುವುದು ನಿಜವಾಗಲೂ 'ಯಥಾಸ್ಥಿತಿಯೇ'. ಯಡಿಯೂರಪ್ಪ ಅವರಿಗೆ ಜಗದೀಶ ಶೆಟ್ಟರ್ ಸರ್ಕಾರವನ್ನು ಪತನಗೊಳಿಸುವ ಅಪೇಕ್ಷೆ ಇರಬಹುದು. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಜೆಟ್ ಮಂಡನೆಯ ವಿಧಾನವನ್ನು ಮುಗಿಸುವುದು ಅವರ ವಿರೋಧಿ ಗುಂಪಿಗೆ ಬೇಕಾಗಿಲ್ಲ. ಅದು ಅರ್ಥವಾಗುವಂತಹದ್ದು. ರಾಜ್ಯಪಾಲರೂ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರಿಗೆ ಜಗದೀಶ ಶೆಟ್ಟರ್ ಅವರು ತಮ್ಮ ಬಹುಮತವನ್ನು ಪ್ರದರ್ಶಿಸಲೇ ಬೇಕಾಗುತ್ತದೆ ಎಂದು ಹೇಳಿರುವುದೂ ಅರ್ಥವಾಗುವಂತಹದ್ದೇ.
ಸರ್ಕಾರದ ಅಳಿವು - ಉಳಿವಿನ ವಿಚಾರದಲ್ಲಿ ಇಷ್ಟೆಲ್ಲ ಗೊಂದಲವನ್ನು ಸೃಷ್ಟಿಸಿರುವ ಯಡಿಯೂರಪ್ಪ ಬೆಂಬಲಿಗರು ಹಂತ - ಹಂತಗಳಲ್ಲಿ ರಾಜಿನಾಮೆ ನೀಡುವ ಮಾತನ್ನು ಕೈ ಬಿಟ್ಟು ಕ್ರಮವಾಗಿ, ನಿಯಮ ಬದ್ಧವಾಗಿ, ಶಾಸಕರ ಸ್ಥಾನದ ಗೌರವ ಉಳಿಯುವ ರೀತಿಯಲ್ಲಿ ಈಗ ವರ್ತಿಸಬೇಕು. ಈಗಿನ ಡೋಲಾಯಮಾನದ ವರ್ತನೆ ಬೇಕಾಗಿರಲಿಲ್ಲ. ಇನ್ನು ಸೋಮವಾರದವರೆಗೂ ವಿಧಾನಸೌಧದಲ್ಲಿನ ಕಾರ್ಯಾಲಯಕ್ಕೆ ಸ್ಪೀಕರ್ ಬೋಪಯ್ಯ ಬರುವುದಿಲ್ಲ. ಸೋಮವಾರದ ಅನಂತರವಾದರೂ ಈಗಿನ ಅನಿಶ್ಚಿತತೆ ಪರಿಸ್ಥಿತಿ ಅಂತ್ಯವಾಗಲೇ ಬೇಕು.
ಶಾಸಕರ ರಾಜಿನಾಮೆಯ ಪ್ರಹಸನದ ಸಮಯದಲ್ಲಿ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ವರ್ತನೆಯನ್ನು ಟೀಕಿಸುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಳಸಿರುವ ಬೈಗುಳದ ಪದಗಳು ಖಂಡಿತವಾಗಲೂ ನಾಡಿನ ಸಾರ್ವಜನಿಕ ಜೀವನದ ಮೌಲ್ಯಗಳನ್ನು ಹೆಚ್ಚಿಸುವುದಿಲ್ಲ.
ನಿಜ. ಯಡಿಯೂರಪ್ಪ ಅವರ ಆಕ್ರೋಶಕ್ಕೆ ಕಾರಣಗಳಿರಬಹುದು. ಏನೇ ಆದರೂ ಸಂಯಮವನ್ನು ಕಳೆದುಕೊಂಡು ಎದುರಾಳಿಯನ್ನು, ಅದರಲ್ಲೂ ಮುಖ್ಯಮಂತ್ರಿ ಸ್ಥಾನದಲ್ಲಿರುವವರನ್ನು ಹಿಯಾಳಿಸುವುದು ರಾಜಕೀಯ ಪ್ರಬುದ್ಧತೆಯ ಲಕ್ಷಣವಲ್ಲ. ರಾಜಕೀಯ ಸೆಣಸಾಟದಲ್ಲಿ ಸಜ್ಜನಿಕೆ ಬಲಿಯಾಗಬಾರದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com