ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ವಿಶ್ವವಿದ್ಯಾನಿಲಯಕ್ಕೆ, ಟಿಪ್ಪುಸುಲ್ತಾನನ ಹೆಸರಿಡುವ ವಿಷಯದಲ್ಲಿ, ಸಾಕಷ್ಟು ವಾಗ್ವಾದಗಳು ಉಂಟಾಗಿರುವುದು ವಿಷಾದನೀಯ. ವಿಶ್ವವಿದ್ಯಾನಿಲಯದಂಥ ಬೌದ್ಧಿಕ ಶ್ರೇಷ್ಠ ಉನ್ನತ ಶಿಕ್ಷಣ ಸಂಸ್ಥೆಯ ಆರಂಭದಲ್ಲೇ ತಲೆಯೆತ್ತಿರುವ ಈ ರೀತಿಯ ಪರ ಮತ್ತು ವಿರುದ್ಧದ ವಾದ ಮತ್ತು ಪ್ರತಿವಾದಗಳು, ಯಾವ ದೃಷ್ಟಿಯಲ್ಲೂ ಸಮರ್ಥನೀಯವಲ್ಲ. ಅದರಲ್ಲೂ ಟಿಪ್ಪುಸುಲ್ತಾನ್ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವುದರಿಂದ, ದೇಶ ಮತ್ತೊಮ್ಮೆ ವಿಭಜನೆಗೆ ಕಾರಣವಾಗಬಹುದೆಂಬ ವಾದವಾಗಲಿ, ಅಥವಾ ಅದರಿಂದ ಹಿಂದೂ ಮುಸ್ಲಿಂ ದಂಗೆಗಳಿಗೆ ಕಾರಣವಾಗಬಹುದೆಂಬ ವಾದವಾಗಲಿ, ನಮ್ಮ ಸಂವಿಧಾನಕ್ಕೆ ವಿರುದ್ಧವಾದ ಆಲೋಚನೆಗಳು. ಅಷ್ಟೇ ಅಲ್ಲದೆ, ಈ ರೀತಿಯ ನಕಾರಾತ್ಮಕ ಆಲೋಚನೆಗಳನ್ನು ನಮ್ಮ ಪ್ರಜ್ಞಾವಂತ ನಾಗರಿಕರು ತಿರಸ್ಕರಿಸಬೇಕು. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸೃಷ್ಟಿಯಾಗಬಹುದಾದ ಯಾವುದೇ ರೀತಿಯ ಆರಾಜಕತೆಯ ದುಷ್ಟಶಕ್ತಿಗಳನ್ನು ನಿಯಂತ್ರಿಸುವ ಕಾನೂನಿನ ಶಕ್ತಿ ನಮ್ಮ ಸಂವಿಧಾನಕ್ಕೂ ಇದೆ, ದೇಶದ ನ್ಯಾಯಾಂಗಕ್ಕೂ ಇದೆ. ಆದ್ದರಿಂದ, ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ನೂತನ ವಿಶ್ವವಿದ್ಯಾನಿಲಯಕ್ಕೆ, "ಕಾವೇರಿ ವಿಶ್ವವಿದ್ಯಾನಿಲಯ" ಎಂದೇಕೆ ನಾಮಕರಣ ಮಾಡಬಾರದು? ಈ ಹೆಸರು ಧರ್ಮಾತೀತವೂ ಜಾತ್ಯತೀತವೂ ಆದುದಾಗಿದೆ. ಕೇಂದ್ರ ಸಚಿವರಾದ ರೆಹಮಾನ್ಖಾನ್ರನ್ನೂ ಮೊದಲುಗೊಂಡು, ಪ್ರಜ್ಞಾವಂತ ಜನವರ್ಗವು ಈ ಕುರಿತು ಆಲೋಚಿಸಲಿ. ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಒಂದು ನೂತನ ವಿಶ್ವವಿದ್ಯಾನಿಲಯಕ್ಕೆ, ಕಾವೇರಿಗಿಂತಲೂ ಶ್ರೇಷ್ಠವಾದ ಮತ್ತು ಅರ್ಥಪೂರ್ಣವಾದ ಹೆಸರು ಇರಲಾರದು.
-ಡಾ. ಮ.ನ.ಜವರಯ್ಯ, ಮೈಸೂರು
ವೀರ ಯೋಧರ ಜೀವಕ್ಕೆ ಬೆಲೆ ಇಲ್ಲವೇ?
ಅಂದು 1999ರ ಕಾರ್ಗಿಲ್ ಯುದ್ಧದ ಸಮಯ ಲೆಫ್ಟಿನೆಂಟ್ ಸೌರಭ ಕಾಲಿಯಾ ನೇತೃತ್ವದ ಐದು ಯೋಧರ ತಂಡವನ್ನು ಪಾಕಿಸ್ತಾನದ ಸೈನಿಕರು ವಶಕ್ಕೆ ತೆಗೆದುಕೊಂಡು ಹೋಗಿ ಅವರಿಗೆ ಚಿತ್ರಹಿಂಸೆ ಕೊಟ್ಟು ಅವರ ಅಂಗಾಂಗಳನ್ನು ವಿಕೃತಗೊಳಿಸಿ ಬೇರ್ಪಡಿಸಿ ಅವರ ಶವವನ್ನು ಭಾರತಕ್ಕೆ ಹಿಂದಿರುಗಿಸಿದ್ದರು. ಈಗ ಜನವರಿ 8 2013ರಂದು ಅದೇ ಪಾಪಿ ಪಾಕಿಸ್ತಾನ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ನಮ್ಮ ಇಬ್ಬರು ಯೋಧರನ್ನು ಕೊಂದದ್ದಲ್ಲದೇ ಒಬ್ಬ ಯೋಧನ ರುಂಡವನ್ನು ತೆಗೆದುಕೊಂಡು ಹೋಗಿರುವುದು ಒಂದು ಪೈಶಾಚಿಕ ಕೃತ್ಯವಾಗಿದೆ. ನಮ್ಮ ಯೋಧರ ಮೇಲೆ ಇಂತಹ ಘೋರ ಕೃತ್ಯ ನಡೆದಿದ್ದರೂ ನಮ್ಮ ಸರ್ಕಾರ, ನಮ್ಮ ಜನತೆ ಇದೊಂದು ಸಣ್ಣ ವಿಷಯ ಅನ್ನೋ ಹಾಗೇ ಮರೆತುಬಿಟ್ಟರು. ಕಳೆದ ತಿಂಗಳು ದೆಹಲಿಯ ಚಲಿಸುವ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಾಗ ದೆಹಲಿ ಸೇರಿದಂತೆ ದೇಶಾದ್ಯಂತ ಸರಣಿ ಪ್ರತಿಭಟನೆಗಳು ನಡೆದವು. ರಾಜಕೀಯ ನಾಯಕರು, ಸ್ವಯಂಘೋಷಿತ ಬುದ್ಧಿಜೀವಿಗಳು ಪ್ರತಿಭಟನೆಗಳಲ್ಲಿ ಸಾಥ್ ನೀಡಿದರು. ಯುವತಿಯ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆದರೆ ಗಡಿಯಲ್ಲಿ ಪ್ರಾಣದ ಹಂಗು ಬಿಟ್ಟು ನಮ್ಮನ್ನು ಕಾಯುತ್ತಿರುವ ವೀರ ಯೋಧರನ್ನು ಕ್ರೂರವಾಗಿ ಕೊಂದರೂ ನಮ್ಮ ದೇಶದಲ್ಲಿ ಅದರಲ್ಲೂ ಬಿಸಿರಕ್ತದ ಯುವಜನತೆಯಿಂದ ಒಂದೇ ಒಂದು ಪ್ರತಿಭಟನೆ ನಡೆಯದಿರುವುದು ನಾಚಿಕೆಗೇಡಿನ ಸಂಗತಿ. ಯಾವ ಬುದ್ಧಿಜೀವಿಯೂ ವೀರ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ. ಪ್ರತಿಭಟಿಸಲಿಲ್ಲ. ಈಗಿನ ಯುವಜನತೆ ಎತ್ತ ಸಾಗುತ್ತಿದೆ? ನಮ್ಮ ಜನತೆಯಲ್ಲಿ ದೇಶಪ್ರೇಮ, ಭಕ್ತಿ ಉಳಿದಿಲ್ಲವೇ?ಇನ್ನು ಮುಂದಾದರೂ ನಾವು ನಮ್ಮ ಯೋಧರಬೆನ್ನಿಗೆ ನಿಲ್ಲೋಣ. ಅವರ ನೋವಿಗೆ ಸ್ಪಂದಿಸೋಣ. ನಮ್ಮ ವೀರ ಯೋಧರ ಬಲಿದಾನವನ್ನು ಸ್ಮರಿಸೋಣ.
-ಡಾ. ಮಂಜುನಾಥ, ಚಿಕ್ಕಮಗಳೂರು