ಬಡವರಿಗಿಲ್ಲ ಟಿಕೆಟ್

Updated on: 

ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ನಾನಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳ ಆಯ್ಕೆಗೆ ಅಗತ್ಯವಾದ ಪ್ರಕ್ರಿಯೆಯನ್ನು ಆರಂಭಿಸಿವೆ. ನಿಜ. ದೊಡ್ಡ ಪಕ್ಷಗಳಲ್ಲಿ ಈಗಾಗಲೇ ಬಹುತೇಕ ಕ್ಷೇತ್ರಗಳಲ್ಲಿ ಸಂಭವನೀಯ ಅಭ್ಯರ್ಥಿಗಳು ಯಾರು ಎನ್ನುವುದರ ಸುಳಿವು ಆಯಾ ಪಕ್ಷಗಳವರಿಗೆ ಸಿಕ್ಕಿದೆ.
ಆದರೂ ಎಲ್ಲ ಕ್ಷೇತ್ರಗಳಲ್ಲೂ, ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆ ಮುಕ್ತ ಎನ್ನುವ ಭಾವನೆಯನ್ನು ಮೂಡಿಸಲು, ಅಭ್ಯರ್ಥಿಗಳಾಗ ಬಯಸುವವರಿಂದ ಪಕ್ಷಗಳು ಅರ್ಜಿಗಳನ್ನು ಆಹ್ವಾನಿಸಿದ್ದು ಸಂಪ್ರದಾಯದ ಪಾಲನೆಯ ದೃಷ್ಟಿಯಿಂದಲೇ.
ಇದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ. ಆದರೆ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾ ದಳಗಳಲ್ಲಿ ಈ ಬಾರಿ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಗೆ ಒಂದು ಹೊಸ ಆಯಾಮವನ್ನೇ ನೀಡಲಾಗಿದೆ. ಕಾಂಗ್ರೆಸ್ಸಿನಲ್ಲಿ ಅರ್ಜಿಯ ಬೆಲೆ 10,000 ರುಪಾಯಿಗಳಾದರೆ, ಜಾತ್ಯತೀತ ಜನತಾದಳದಲ್ಲಿ ಅದು 20,000 ರುಪಾಯಿ.
ಚುನಾವಣೆಯಲ್ಲಿ ಸ್ಪರ್ಧಿಸಲು ನಿಜವಾಗಿಯೂ ಆಸಕ್ತಿ ಇರುವವರು ಹಾಗೂ ಶಕ್ತಿ ಇರುವವರು ಮಾತ್ರ ಅರ್ಜಿ ಸಲ್ಲಿಸಬೇಕು ಎನ್ನುವ ಉದ್ದೇಶದಿಂದ ಶುಲ್ಕವನ್ನು ಹೆಚ್ಚಿನ ಮಟ್ಟದಲ್ಲೇ ಇಡಲಾಗಿದೆ ಎಂದು ಭಾವಿಸಬಹುದು. ಆದರೆ ಈ ಪ್ರಕ್ರಿಯೆಯನ್ನು ಪಕ್ಷದ ನಿಧಿ ಸಂಗ್ರಹಕ್ಕೆ ಒಂದು ಸಾಧನವನ್ನಾಗಿ ಬಳಸುವುದು ಸರಿಯಲ್ಲ. ನಿಜ. ಪರಿಶಿಷ್ಟ ಜಾತಿ ಪಂಗಡಗಳವರಿಗೆ, ಸ್ತ್ರೀಯರಿಗೆ ವಿನಾಯಿತಿ, ರಿಯಾಯಿತಿಗಳನ್ನೂ ನಿಯಮಗಳಲ್ಲಿ ಅಳವಡಿಸಲಾಗಿದೆ. ಭಾರಿ ಮೊತ್ತದ ಅರ್ಜಿ ಶುಲ್ಕದ ಹೊರೆಯನ್ನು ಹೊರುವ ಶಕ್ತಿ ಇಲ್ಲದವರಿಗೆ ಅಂದರೆ ಬಡವರಿಗೆ, ಪಕ್ಷದ ಟಿಕೆಟ್ ಇಲ್ಲ ಎಂದಾಯಿತು. ಇದು ಖಂಡಿತವಾಗಿಯೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com