ತೆಲಂಗಾಣದಲ್ಲಿ ತಹತಹ

Updated on: 

ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆಯ ಸಂಬಂಧದಲ್ಲಿ ಅಂತಿಮ ತೀರ್ಮಾನವನ್ನು ಜನವರಿ 28ರ ಒಳಗಾಗಿ ಪ್ರಕಟಿಸುವ ನಿರ್ಧಾರದ ವಚನವನ್ನು ಕೇಂದ್ರ ಕಾಂಗ್ರೆಸ್ ಮುಖಂಡರು, ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕರಿಗೆ ನೀಡಿದ್ದು ಉಂಟು.
ಆ ಸಂದರ್ಭದಲ್ಲಿ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಆಂಧ್ರ ಪ್ರದೇಶದಲ್ಲೂ ಅದೇ ಪಕ್ಷದ ಸರ್ಕಾರ ಇದ್ದಿದ್ದರಿಂದ, ಆ ವಚನವನ್ನು ಸರ್ಕಾರವೇ ನೀಡಿದ್ದು ಎನ್ನುವ ಭಾವನೆ ತೆಲಂಗಾಣ ಸೀಮೆಯ ಜನನಾಯಕರಲ್ಲಿ ಮೂಡಿತ್ತು. ಈ ಬೆಳವಣಿಗೆಯಲ್ಲಿ ಆಂಧ್ರ ಪ್ರದೇಶದ ವ್ಯವಹಾರಗಳನ್ನು ಕಾಂಗ್ರೆಸ್ಸ್‌ನಲ್ಲಿ ನೋಡಿಕೊಳ್ಳುವ ಕೇಂದ್ರ ಸಚಿವ ಗುಲಾಂ ನಬೀ ಆಜಾದ್ ಹಾಗೂ ಗೃಹಮಂತ್ರಿ ಸುಶೀಲ ಕುಮಾರ ಶಿಂಧೆ ಅವರ ಪಾತ್ರ ನಿರ್ಣಾಯಕವಾಗಿತ್ತು.
ತೆಲಂಗಾಣ ರಾಜ್ಯದ ಸ್ಥಾಪನೆಯ ರಾಜಕೀಯ ಅವಶ್ಯಕತೆಯನ್ನು ಕಾಂಗ್ರೆಸ್ ಈಗ ಸ್ಪಷ್ಟವಾಗಿ ಮನಗಂಡಿದೆ. ಕೆಲವು ತಿಂಗಳ ಹಿಂದೆ ಆಂಧ್ರದಲ್ಲಿ ನಡೆದ ಹದಿನೆಂಟು ವಿಧಾನ ಸಭೆ ಕ್ಷೇತ್ರಗಳಲ್ಲಿನ ಮರು ಚುನಾವಣೆಯಲ್ಲಿ ಎಲ್ಲ ಕಡೆ ಕಾಂಗ್ರೆಸ್ ಸೋತಾಗಲೇ ಪಕ್ಷಕ್ಕೆ ಆಂಧ್ರದಲ್ಲಿ ತನ್ನ ಸ್ಥಿತಿ ಭದ್ರವಾಗಿಲ್ಲ ಎನಿಸಿದ್ದು.
ಉಪ ಚುನಾವಣೆಗಳ ಸೋಲಿಗೆ ವೈಎಸ್ಸಾರ್ ಕಾಂಗ್ರೆಸ್ಸಿನ ಜಗನ್ಮೋಹನ ರೆಡ್ಡಿ ಅವರ ಬಂಡಾಯದ ಜತೆಗೇ, ತೆಲಂಗಾಣದ ವಿಚಾರದಲ್ಲಿ ಕಾಂಗ್ರೆಸ್ ನಿರ್ದಿಷ್ಟವಾದ ನಿಲವನ್ನು ತಾಳಲಿಲ್ಲ ಎನ್ನುವುದೂ ಕಾರಣ.
ಈಗಲೂ ಅದೇ ಸ್ಥಿತಿ ಮುಂದುವರಿದಿದೆ. ತೆಲಂಗಾಣದಲ್ಲಂತೂ ಕಾಂಗ್ರೆಸ್ಸಿಗರೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಪ್ರತ್ಯೇಕ ರಾಜ್ಯದ ಪರವಾಗಿದ್ದರೆ, ರಾಯಲಸೀಮೆ ಹಾಗೂ ಕರಾವಳಿ ಆಂಧ್ರದಲ್ಲಿ ಕಾಂಗ್ರೆಸ್ ಬಿಟ್ಟು ಉಳಿದೆಲ್ಲ ಪಕ್ಷಗಳೂ ರಾಜ್ಯದ ವಿಭಜನೆಯನ್ನು ಅನಿವಾರ್ಯವೆಂದು ಒಪ್ಪಿವೆ.
ಅದಕ್ಕೆ ಬೇಕಾದಷ್ಟು ಕಾರಣಗಳಿರಬಹುದು. ಮೂಲಭೂತವಾಗಿ ತೀರ ಹಿಂದುಳಿದ ತೆಲಂಗಾಣದ ಗ್ರಾಮೀಣ ಪ್ರದೇಶಗಳಲ್ಲಿ ಆಗಬೇಕಾದ ಅಭಿವೃದ್ಧಿ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳ ಮಂದಗತಿಯೇ ಇದಕ್ಕೆ ಕಾರಣ. ಪ್ರಗತಿಯ ನಿಧಾನಗತಿ, ತೆಲಂಗಾಣದವರೇ ಆಗಿದ್ದ ಡಾ॥ ಚೆನ್ನಾರೆಡ್ಡಿ ಮುಖ್ಯಮಂತ್ರಿಯಾದಾಗಲೂ ಇತ್ತು.
ತೆಲಂಗಾಣ ರಾಜ್ಯ ನಿರ್ಮಾಣಕ್ಕೆ ಇರುವ ಬಹು ದೊಡ್ಡ ಅಡ್ಡಿ ಎಂದರೆ ಹೈದರಾಬಾದ್- ಸಿಕಂದರಾಬಾದ್‌ಗಳ ಸ್ಥಾನಮಾನದ ವಿಚಾರದಲ್ಲಿರುವ ಗೊಂದಲ. ಅದು ಸುಲಭವಾಗಿ ಬಗೆ ಹರಿಯುವ ಸಮಸ್ಯೆ ಅಲ್ಲ. ಮೊದಲಿನಿಂದಲೂ, ಈ ಸಮಸ್ಯೆಯನ್ನು ಕಾಂಗ್ರೆಸ್, ತನ್ನ ಪಕ್ಷದ ಸಮಸ್ಯೆ ಎನ್ನುವ ರೀತಿಯಲ್ಲೇ ಪರಿಗಣಿಸಿ, ಆಂಧ್ರದ ನಾಯಕರನ್ನು ಹಾಗೇ ನಡೆಸಿಕೊಂಡಿದೆ. ತೆಲಂಗಾಣದ ಸಮಸ್ಯೆ, ಕಾಂಗ್ರೆಸ್ ಸಮಸ್ಯೆ ಅಲ್ಲ. ಅದು 4 ಕೋಟಿ ತೆಲುಗು ಭಾಷೆ ಮಾತನಾಡುವ ಜನರ ಸಮಸ್ಯೆ. ಆಂಧ್ರ ಪ್ರದೇಶದ ನಾಯಕರು ತೆಲಂಗಾಣದ ಪ್ರಗತಿಗೆ ಕೊಡಬೇಕಾದಷ್ಟು ಗಮನವನ್ನು ಕೊಟ್ಟು, ರಾಜಕೀಯವಾಗಿ ಆ ಭಾಗದ ಜನ ಸಮುದಾಯಗಳ ಭಾವನೆಗಳನ್ನು ನಿಭಾಯಿಸುವ ಕೆಲಸವನ್ನು ಮಾಡಲೇ ಇಲ್ಲ. ತೆಲಂಗಾಣದ ಆರ್ಥಿಕ- ಸಾಮಾಜಿಕ- ರಾಜಕೀಯ ಸಮಸ್ಯೆಗಳು 1940-50ರ ದಶಕದಲ್ಲಿದ್ದ ಸ್ಥಿತಿಯಲ್ಲೇ ಈಗಲೂ ಇದ್ದಂತಿದೆ.
ಕಾಂಗ್ರೆಸ್ ತನ್ನ ಸಂಕಷ್ಟದ ಕಾಲದಲ್ಲಿ ತೆಲಂಗಾಣದಲ್ಲಿನ ಪ್ರಬಲ ರಾಜಕೀಯ ಶಕ್ತಿ ಎನಿಸಿಕೊಂಡಿರುವ ತೆಲಂಗಾಣ ರಾಷ್ಟ್ರ ಸಮಿತಿಯ ನೆರವನ್ನು ಪಡೆದು, ಅನಂತರ ಕೊಟ್ಟ ವಚನವನ್ನು ಈಡೇರಿಸದೇ ಹೋಗಿದ್ದು ಸರಿಯಲ್ಲ. ಇನ್ನೂ ಮಾತುಕತೆ ನಡೆಯಬೇಕೆನ್ನುವುದು ಅರ್ಥವಿಲ್ಲದ ಮಾತು. ತೆಲಂಗಾಣ ಚಳವಳಿಯ ನಾಯಕತ್ವ ಈಗ ರಾಜಕೀಯ ಪಕ್ಷಗಳ ಕೈ ತಪ್ಪಿ, ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖಂಡರ ಪಾಲಾಗಿದೆ. ಜನವರಿ 28ರಂದು ಯಾವುದಾದರೊಂದು ತೀರ್ಮಾನ ಪ್ರಕಟವಾಗುವ ನಿರೀಕ್ಷೆಯಲ್ಲಿದ್ದ ಜನರು ಹತಾಶರಾಗಿದ್ದಾರೆ. ಆ ದಿನಕ್ಕೇ ಕಾಯುತ್ತಿದ್ದವರಂತೆ ತೆಲಂಗಾಣದ ಯುವಜನಾಂಗವು ತನ್ನ ಆಕ್ರೋಶದ ಪ್ರದರ್ಶನವನ್ನು ಆರಂಭಿಸಿದೆ.
ಈಗ ತೆಲಂಗಾಣಕ್ಕೆ ತೆಲಂಗಾಣವೇ ತಹ-ತಹ ಎನ್ನುತ್ತಿರುವುದು ನಿಜ. ಅದನ್ನು ನಿಭಾಯಿಸುವ ಹೊಣೆ ಆಂಧ್ರದ ಹಾಗೂ ಕೇಂದ್ರದ ನಾಯಕರದ್ದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com