ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಅನೇಕ ರೋಚಕ ಘಟನೆಗಳು ನಡೆದವು. ಸಹಸ್ರಾರು ಜನ ಅದರಲ್ಲಿ ಪಾಲ್ಗೊಂಡು ಸೆರೆಮನೆ ವಾಸ, ಕರಿನೀರಿನ ಶಿಕ್ಷೆ, ಮರಣದಂಡನೆ ಮುಂತಾದ ಕಷ್ಟಗಳನ್ನು ಅನುಭವಿಸಿದರೆ, ಮತ್ತೆ ಕೆಲವರು ಬ್ರಿಟಿಷರೊಡನೆ ಶಾಮೀಲಾಗಿ ದೇಶದ್ರೋಹದ ಕೆಲಸ ಮಾಡಿದರು. ಇನ್ನು ಕೆಲವರು ತಟಸ್ಥ್ಥರಾಗಿದ್ದರು. ಸ್ವಾತಂತ್ರಕ್ಕಾಗಿ ಹೋರಾಟ ಮಾಡುವುದು ವ್ಯರ್ಥ, ಅರ್ಥವಿಲ್ಲದ್ದು ಎನ್ನುವ ಭಾವನೆ ಅವರುಗಳದ್ದು. ಇಂತಹ ಮನೋಭಾವದ ಒಬ್ಬ ವೇದಾಂತಿಯೊಬ್ಬ ಕವಿ ರವೀಂದ್ರನಾಥ ಟಾಗೋರ್ ಅವರನ್ನು ಭೇಟಿ ಮಾಡಿ ಮಾತನಾಡುತ್ತಾ, 'ಈ ಭೂಮಿ ಜಡವಾಗಿದ್ದು, ಅದರ ವ್ಯಾಮೋಹದಲ್ಲಿ ಬಿದ್ದು ದೇಶಭಕ್ತಿಯ ಹೆಸರಿನಲ್ಲಿ ಹೀಗೆಲ್ಲಾ ಚಳವಳಿ ಮಾಡಿ ಗದ್ದಲ ಎಬ್ಬಿಸುವುದು ಸರಿಯೇ?' ಎಂದು ಪ್ರಶ್ನಿಸಿದ. ರವೀಂದ್ರರಿಗೆ ಅವನ ಅಜ್ಞಾನ ಕಂಡು ಮರುಕವುಂಟಾಯಿತು. ಅವನಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ನಿಶ್ಚಯಿಸಿ, 'ನಿಮಗೆ ತಾಯಿ ಇರುವರೆ?' ಎಂದು ಪ್ರಶ್ನಿಸಿದರು. ಅದಕ್ಕವನು ಹೌದೆಂದು ತಲೆಯಾಡಿಸಿದ. 'ಹಾಗಾದರೆ ಆಕೆಯ ತಲೆಯನ್ನು ಕತ್ತರಿಸಿ ತರಲು ಸಾಧ್ಯವೆ?' ಎಂದು ಪ್ರಶ್ನಿಸಿದರು. ಅದಕ್ಕೆ ಆ ಆಗಂತುಕ ಆವಕ್ಕಾದ. 'ಅದ್ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದ.
'ನಿಮ್ಮಿಂದಾಗದಿದ್ದರೆ ಬೇರೆಯವರಿಂದ ಆ ಕೆಲಸ ಮಾಡಿಸಬಹುದಲ್ಲ?' ಎಂದು ರವೀಂದ್ರರು ಹೇಳಿದರು. ಅವನಿಗೆ ಸಿಟ್ಟು ಬಂತು. 'ನನ್ನ ತಾಯಿಯ ಸುದ್ದಿಗೆ ಯಾರಾದರೂ ಬಂದರೆ ಬಿಡುತ್ತೇನೆಯೇ? ಹರಿದು ತಿಂದು ಬಿಡುತ್ತೇನೆ, ಜೀವ ಸಹಿತ ಬಿಡುವುದಿಲ್ಲ' ಎಂದಬ್ಬರಿಸಿದ. ಆಗ ರವೀಂದ್ರರು ನಗುತ್ತಾ ಹೇಳಿದರು 'ತಮ್ಮಾ, ದೇಶಭಕ್ತರಿಗೆ ತಮ್ಮ ತಾಯಿಯ ಮೇಲಿರುವಷ್ಟೇ ಭಕ್ತಿ, ಪ್ರೀತಿ, ತಾಯಿನಾಡಿನ ಮೇಲಿದೆ. ಅವರಿಗೆ ತಮ್ಮ ತಾಯಿ ಬೇರೆ ಅಲ್ಲ, ತಾಯ್ನಾಡು ಬೇರೆಯಲ್ಲ. ಇಂತಹ ಭವ್ಯ ಪರಂಪರೆಯುಳ್ಳ ಭಾರತದ ಮೇಲೆ ಎಲ್ಲಿಂದಲೋ ಬಂದವರು ದಬ್ಬಾಳಿಕೆ ಮಾಡಿದರೆ, ನೋಡಿದರೂ ನೋಡದಂತೆ ಇರಬೇಕೆ? ಅವಳ ಮೇಲೆ ದಾಳಿ ಮಾಡಿದರೆ ಕೋಟಿ ಕೋಟಿ ಮಕ್ಕಳು ಸುಮ್ಮನಿರಬೇಕೆ?' ಎಂದು ಪ್ರಶ್ನಿಸಿದರು. ಆಗ ದೇಶದ ಬಗೆಗಿನ ಆ ವೇದಾಂತಿಯ ಭಾವನೆಗಳು ಬದಲಾದುವು. ಕವಿವರ್ಯರ ಮಾತಿನಿಂದ ಪ್ರಭಾವಿತನಾಗಿ ಅಂದಿನಿಂದ ಅವನೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಹೋರಾಡಲು ನಿರ್ಧರಿಸಿದ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com