ಸುಂದರ ಲಾಲ್ ಬಹುಗುಣರ ಡೈರಿ

Updated on: 

ಉತ್ತರಾಖಾಂಡ್‌ನಲ್ಲಿ ದುರಂತ ಸಂಭವಿಸಬಹುದೆಂದು ಊಹಿಸಿ ಬಹುಹಿಂದೆಯೇ ಒಬ್ಬ ವ್ಯಕ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ತೆಹ್ರಿಯಲ್ಲಿ ಅಣೆಕಟ್ಟು ಕಟ್ಟುವುದರಿಂದ ಅಮೂಲ್ಯವಾದ ಕಾಡು ನಾಶವಾಗುವುದಲ್ಲದೆ, ಹರಿದ್ವಾರ ಋಷಿಕೇಶಗಳು ಮುಳುಗಿ ಅನಾಹುತವಾಗುತ್ತದೆ ಎಂದು ಭವಿಷ್ಯ ನುಡಿದಿದ್ದ ಆ ವ್ಯಕ್ತಿ ಸುಂದರ ಲಾಲ್ ಬಹುಗುಣ. ಅಂದು ಅವರ ಮಾತಿಗೆ ಮನ್ನಣೆ ಸಿಕ್ಕಿದ್ದರೆ, ಇಂದು ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲವೇನೋ. ತೆಹ್ರಿ ವಿರುದ್ಧ ಚಳವಳಿಯನ್ನೂ ನಡೆಸಿದಾಗ ಅವರಿಗೆ ದೊರೆತದ್ದು ಸೆರೆಮನೆವಾಸ. ಅಂದು ಪ್ರಧಾನಿಯಾಗಿದ್ದ ನರಸಿಂಹರಾವ್, ಮನೆಮಠ ಕಳೆದುಕೊಂಡವರಿಗೆ ಸಾಕಷ್ಟು ಪರಿಹಾರ ನೀಡುವುದಾಗಿ ತಿಳಿಸಿದಾಗ ಬಹುಗುಣ ನೇರವಾಗಿ ಅವರಿಗೆ ಕೇಳಿದ್ದರು, 'ನನ್ನ ಮನೆ ಹಾಗೂ ಜಮೀನನ್ನು ನಿರ್ಮಿಸಲು ನನ್ನ ಅಮ್ಮ ಕಲ್ಲುಮಣ್ಣು ಹೊತ್ತು ಸಾಗಿಸಿದ್ದಾಳೆ. ಅವಳ ಬೆವರಿಗೆ ಯಾವ ಪರಿಹಾರ ನೀಡುತ್ತೀರಿ?' ಈ ಚಿಪ್ಕೋ ಚಳುವಳಿಯ ನೇತಾರ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 4870 ಕಿಲೋಮೀಟರ್ ಪಾದಯಾತ್ರೆ ಮಾಡಿ ಪರಿಸರ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಿದ ಧೀಮಂತ ಹೋರಾಟಗಾರ. ಪದ್ಮಶ್ರೀ ಪ್ರಶಸ್ತಿ ನೀಡಿದಾಗ ಅದನ್ನು ನಯವಾಗಿ ತಿರಸ್ಕರಿಸಿ, 'ಎಲ್ಲಿಯವರೆಗೆ ನಮ್ಮ ಭಾರತದ ನೆಲದ ಮೇಲ್ಪದರ ಸಮುದ್ರಕ್ಕೆ ಸೇರುವುದು ಮುಂದುವರೆಯುತ್ತದೆಯೋ ಅಲ್ಲಿಯವರೆಗೆ ನಾನು ಆ ಪ್ರಶಸ್ತಿ ಪಡೆಯಲಾರೆ' ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಬಹುಗುಣ ಪರಿಸರಕ್ಕೆ ಸಮಬಂಧಿಸಿದ ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ಇವರು ಪದ್ಮವಿಭೂಷಣ, ರೈಟ್ ಲೈವ್ಲಿಹುಡ್ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಇಂತಹ ಬಹುಗುಣ ಅವರ ಬಳಿ ಒಂದು ಪುಟ್ಟ ಡೈರಿ ಇದೆ. ಇದು ಅವರ ಜೀವನ ಸಂಗಾತಿ. ಅವರ ಜೋಳಿಗೆಯಲ್ಲಿ ಕುಳಿತೂ ಕುಳಿತು ಸಾಕಷ್ಟು ಜೀರ್ಣಗೊಂಡಿದೆ. ಆದರೂ ಅದನ್ನುಬಿಟ್ಟು ಅವರು ಎಲ್ಲಿಗೂ ಹೋಗುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅವರು ಹೇಳುವ ಉತ್ತರ ತುಂಬಾ ಸ್ವಾರಸ್ಯಕರವಾಗಿದೆ. ತಮ್ಮ ಹೋರಾಟಕ್ಕೆ ಬೆಂಬಲಿಸುವವರ ಹೆಸರು ಮತ್ತು ವಿಳಾಸ ಅದರಲ್ಲಿದೆ. 'ಹೋರಾಟದಲ್ಲಿ ಸೋತಿದ್ದೇನೆ' ಎಂಬ ಆತಂಕ ಅವರಿಗೆ ಎದುರಾದಾಗಲೆಲ್ಲ ಆ ಡೈರಿಯನ್ನೊಮ್ಮೆ ತೆರದು ನೋಡುತ್ತಾರಂತೆ. ಆಗ ಅವರಿಗೆ ತಾನು ಒಂಟಿಯಲ್ಲ, ನನ್ನೊಂದಿಗೆ ಅದೆಷ್ಟು ಜನರಿದ್ದಾರೆ ಎಂಬ ಹೊಸ ಸ್ಫೂರ್ತಿ ಹುಟ್ಟುತ್ತದಂತೆ. ಆಗ ಅವರ ಮನಸ್ಸು ಹಸಿರಿನ ಉಳಿವಿಗೆ ಚಿಂತಿಸಿ ಹೊಸ ಹುರುಪು ಪಡೆಯುತ್ತದಂತೆ.

 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com