ಅಟಲ್ ಬಿಹಾರಿ ವಾಜಪೇಯಿ ನಮ್ಮ ದೇಶ ಕಂಡ ಅಪ್ರತಿಮ ನಾಯಕ. ಪ್ರಖರ ವಾಗ್ಮಿ ಹಾಗೂ ಯಶಸ್ವಿ ಪ್ರಧಾನಮಂತ್ರಿಯಾಗಿ ಹೆಸರು ಮಾಡಿದವರು. ಅವರ ಮಾತುಗಳಲ್ಲಿ ಎಷ್ಟು ಮೊನಚಿತ್ತೋ, ಅಷ್ಟೇ ಮೃದು ಅವರ ಹೃದಯ. ಎಲ್ಲರೂ ಪಕ್ಷ ಭೇದವಿಲ್ಲದೆ ಅವರ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡಿರುವುದು ಅವರ ಹಿರಿಮೆಯನ್ನು ಸೂಚಿಸುತ್ತದೆ. ಅವರಿಗೆ ಕರ್ನಾಟಕವೆಂದರೆ ಪ್ರೀತಿ ಜಾಸ್ತಿ. ಹೀಗಾಗಿ ಅವರು ಅನೇಕಬಾರಿ ಕರ್ನಾಟಕಕ್ಕೆ ಬಂದಿದ್ದಾರೆ. ಬಿಡುವಿಲ್ಲದ ಅವರ ಪ್ರವಾಸ ಕಾರ್ಯಕ್ರಮಗಳಿಂದಾಗಿ ಅನೇಕ ಬಾರಿ ಊಟ ಮಾಡಲೂ ಸಮಯ ಸಿಗದೆ ಪರಿತಪಿಸಿದ್ದುಂಟು. ಒಮ್ಮೆಯಂತೂ ಮಧ್ಯರಾತ್ರಿ ಊಟವಿಲ್ಲದೆ ಹಸಿವಿನಿಂದ ಅವರು ಪರಿತಪಿಸುತ್ತಿದ್ದಾಗ ಯಾರೋ ಒಬ್ಬರು ಒಂದು ಚಪಾತಿಯನ್ನು ಕಾಗದದದಲ್ಲಿ ಸುತ್ತಿಕೊಂಡು ತಂದು ನೀಡಿದರು. ಅವರ ಜೊತೆಗೇ ಇದ್ದ, ಅವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದ ಡಿ.ಹೆಚ್.ಶಂಕರಮೂರ್ತಿಯವರಿಗೆ ಆ ಚಪಾತಿಯಲ್ಲಿ ಅರ್ಧ ಭಾಗವನ್ನು ನೀಡಿ ತಾವೂ ಅರ್ಧ ತಿಂದು ಮಾನವೀಯತೆ ಮೆರೆದ ಮಹಾಚೇತನ ಅಟಲ್ಜೀಯವರು. 1984ರಲ್ಲಿ ನಡೆದ ಚುನಾವಣೆಯಲ್ಲಿ ವಾಜಪೇಯಿ ಸೋತಿದ್ದರು. ಅದು ಅನೇಕರಿಗೆ ನೋವಿನ ಸಂಗತಿಯಾಗಿತ್ತು. ಭದ್ರಾವತಿಯ ಲಕ್ಷ್ಮೀನಾರಾಯಣ ಎಂಬ ಹದಿಹರೆಯದ, ವಾಜಪೇಯಿಯವರ ಕಟ್ಟಾ ಅಭಿಮಾನಿ ಬಡ ಹರಿಜನ ಯುವಕನಿಗೆ ವಾಜಪೇಯಿಯವರ ಈ ಸೋಲನ್ನು ಸಹಿಸಲಾಗಲಿಲ್ಲ. ರೇಡಿಯೋದಲ್ಲಿ ಸೋಲಿನ ಸುದ್ಧಿಯನ್ನು ಕೇಳಿದವನೇ 'ವಾಜಪೇಯಿಯವರನ್ನು ಸೋಲಿಸಿದ ದೇಶದಲ್ಲಿ ಇರಲಾರೆ' ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ. ಈ ಸುದ್ದಿಯನ್ನು ವಾಜಪೇಯಿಯವರಿಗೆ ತಿಳಿಸಿದಾಗ ಅವರಿಗೆ ತುಂಬಾ ನೋವಾಯಿತು. ನಂತರ ಒಮ್ಮೆ ಶಿವಮೊಗ್ಗಕ್ಕೆ ಬಂದಿದ್ದಾಗ ಭದ್ರಾವತಿಯಲ್ಲಿದ್ದ ಆ ಯುವಕನ ಗುಡಿಸಲಿಗೆ ತೆರಳಿ, ಮೃತನ ತಂದೆಯನ್ನು ತಬ್ಬಿಕೊಂಡು ಜೋರಾಗಿ ಅತ್ತುಬಿಟ್ಟರು. ಅವರ ಬಡತನ ಕಂಡು ಮರುಗಿದರು. ದೆಹಲಿಗೆ ಹಿಂತಿರುಗಿದವರೇ ಒಂದಷ್ಟು ಹಣವನ್ನು ಕಳುಹಿಸಿ ಅದನ್ನು ಬಳಸಿಕೊಳ್ಳಲು ತಿಳಿಸಿದರು. ಅದಕ್ಕೆ ಡಿ.ಹೆಚ್.ಶಂಕರಮೂರ್ತಿಯವರೂ ಸ್ವಲ್ಪ ಹಣ ಸೇರಿಸಿ, 'ಲಕ್ಷ್ಮೀನಾರಾಯಣ'ನ ಹೆಸರಿನಲ್ಲಿ ಟ್ರಸ್ಟ್ ರಚಿಸಿದರು. ಅದರಿಂದ ಬಂದ ಬಡ್ಡಿಯ ಹಣವನ್ನು ಆ ಮೃತ ಯುವಕನ ತಂಗಿ ಮತ್ತು ತಮ್ಮನ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲಾಯಿತು. ಇದರಿಂದ ಆ ಕುಟುಂಬ ಆರ್ಥಿಕವಾಗಿ ಸ್ವಲ್ಪ ಸ್ಥಿತಿವಂತವಾಯಿತು. ನಂತರ ಆ ಟ್ರಸ್ಟ್ನಲ್ಲಿ ಉಳಿದಿದ್ದ ಹಣವನ್ನು ಲಕ್ಷ್ಮೀನಾರಾಯಣ ಓದಿದ ಶಾಲೆಗೆ ನೀಡಲು ವಾಜಪೇಯಿಯವರು ಸಲಹೆ ನೀಡಿದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ