ಶಿವಪ್ಪನಾಯಕ ಅರಸನಾಗಿದ್ದ ಕಾಲ. ಶಿಸ್ತಿಗೆ ಹೆಸರಾಗಿದ್ದ ಶಿವಪ್ಪನಾಯಕ ನಮ್ಮ ನಾಡಿನ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾನೆ. ಬಿದನೂರನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಮಂಗಳೂರು, ಹೊನ್ನಾವರ ಮತ್ತು ಕುಂದಾಪುರ ಬಂದರುಗಳವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದನಾತ. ಅಲ್ಲಿನ ಬಂದರುಗಳು ಅವನ ವಶದಲ್ಲಿದ್ದವು. ಇಂತಹ ಕಾಲದಲ್ಲಿ ಗಣೇಶ ಮಹಾಲೆ ಎಂಬ ಹೊನ್ನಾವರದ ಒಬ್ಬ ವ್ಯಕ್ತಿ ರಾಜನ ಗಮನ ಸೆಳೆಯಲೆಂದೇ ಒಂದು ಅನಧಿಕೃತ ಸುಂಕದ ಕಟ್ಟೆಯನ್ನು ನಿರ್ಮಿಸಿ, ಸರಕುಗಳ ಮೇಲೆ ಆಮದು ಸುಂಕ ವಿಧಿಸಲು ಪ್ರಾರಂಭಿಸಿದ. ಈ ವಿಷಯ ಶಿವಪ್ಪನಾಯಕನ ಕಿವಿಗೆ ಮುಟ್ಟಿ ಮಹಾಲೆಯನ್ನು ತನ್ನ ಆಸ್ಥಾನಕ್ಕೆ ಕರೆಸಿ ವಿಚಾರಣೆ ನಡೆಸಿದ. ತಾನು ಆಡಳಿತದ ನಿರ್ಲಕ್ಷ್ಯವನ್ನು ರಾಜನ ಗಮನಕ್ಕೆ ತರುವ ಉದ್ದೇಶದಿಂದ ಮತ್ತು ಪ್ರಭುಗಳನ್ನು ಭೇಟಿಮಾಡುವ ಇರಾದೆಯಿಂದ ಹೀಗೆ ಮಾಡಿದೆನೆಂದು ಹೇಳಿದಾಗ ಸಂತುಷ್ಟನಾದ ನಾಯಕ ಅವನನ್ನು ತನ್ನ ಮಂತ್ರಿಯಾಗಿ ನೇಮಿಸಿಕೊಂಡ. ಅವನ ಮೊಮ್ಮಗ ಸಹ ಇದೇ ಹೆಸರಿನಿಂದ ಕರೆಯಲ್ಪಟ್ಟು ಭದ್ರಪ್ಪನಾಯಕನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ. ಅಲ್ಪ ಕಾಲ ರಾಜ್ಯವಾಳಿದ ಭದ್ರಪ್ಪನಾಯಕನಿಗೆ ತನ್ನ ದಟ್ಟವಾದ ಮೀಸೆಯ ಮೇಲೆ ಅಪಾರ ಪ್ರೀತಿ. ಸದಾ ಅದರ ಮೇಲೆ ಕೈಯಾಡಿಸುತ್ತಲೇ ಇದ್ದ. ಒಮ್ಮೆ ಹೀಗೆ ತನ್ನ ಮೀಸೆ ತಿರುವುತ್ತಿದ್ದಾಗ ಎರಡು ಕೂದಲು ಕೈಗೆ ಬಂದವು! ಅವನ್ನು ಹೊರಗೆ ಬಿಸಾಡಲು ಅಲ್ಲಿಯೇ ಇದ್ದ ತನ್ನ ಮಂತ್ರಿ ಗಣೇಶ ಮಹಾಲೆಗೆ ನೀಡಿದ. ಆದರೆ ಮಹಾಲೆ ಅದನ್ನು ಬಿಸಾಡದೆ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಒಂದು ರತ್ನ ಖಚಿತ ಕರಂಡಕದಲ್ಲಿ ಭದ್ರವಾಗಿಟ್ಟುಕೊಂಡ. ಎಷ್ಟೋ ದಿನಗಳ ನಂತರ ಅದನ್ನು ರಾಜನಿಗೆ ತೋರಿಸಿದಾಗ ರಾಜ ಸಂತುಷ್ಟಗೊಂಡು, ಅವನ ಸ್ವಾಮಿನಿಷ್ಠೆಗೆ ಪ್ರತಿಫಲವಾಗಿ 'ಏನು ಬೇಕು ಕೇಳು, ನೀಡುತ್ತೇನೆ' ಎಂದ. ಆಗ ಮಹಾಲೆ ತನಗೆ ಕೇವಲ ಒಂದೂವರೆ ಗಂಟೆಗಳಷ್ಟು ಕಾಲ ರಾಜ್ಯಾಧಿಕಾರ ನೀಡಬೇಕೆಂದು ವಿನಂತಿಸಿದ. ಅದಕ್ಕೆ ರಾಜನೂ ಸಮ್ಮತಿಸಿದ. ಕೇವಲ ಒಂದೂವರೆಗಂಟೆ ಆಡಳಿತದಲ್ಲಿ ಇವನೇನು ಮಾಡಿಯಾನು ಎಂಬ ಕುತೂಹಲವೂ ಅವನಿಗುಂಟಾಯಿತು. ಮಹಾಲೆ ಮಾಡಿದ ಒಂದೇ ಕೆಲಸವೆಂದರೆ ಹನ್ನೆರಡು ತಾಮ್ರಶಾಸನಗಳನ್ನು ಬರೆಸಿ ಹನ್ನೆರಡು ದೇವಾಲಯ ನಿರ್ಮಾಣಕ್ಕೆ ಆದೇಶಿಸಿದ. ಈ ಪಟ್ಟಿಯಲ್ಲಿ ಹೊನ್ನಾವರದಲ್ಲಿ ನಿರ್ಮಿಸಲಾದ ಕಿರಾತರೂಪಿ ಧನುರ್ಧಾರಿ ವೆಂಕಟರಮಣನ ದೇವಾಲಯವೂ ಸೇರಿದೆ. ದೊರೆತ ಅಲ್ಪ ಅವಧಿಯಲ್ಲಿ ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ ಪಾರಮಾರ್ಥಕ್ಕಾಗಿ ಬಳಸಿಕೊಂಡ ಗಣೇಶ ಮಹಾಲೆ ಇಂದಿಗೂ ನಮಗೆ ಆದರ್ಶ. ಇವರ ಮನೆತನದವರು ಇಂದಿಗೂ ಹೊನ್ನಾವರದಲ್ಲಿ ನೆಲೆಸಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ