ನಮಗೆಲ್ಲಾ ತಿಳಿದಂತೆ ಅಕ್ಬರನ ಆಸ್ಥಾನದಲ್ಲಿ ನವರತ್ನಗಳೆಂದು ಪ್ರಸಿದ್ಧಿಯಾಗಿದ್ದ ಒಂಭತ್ತು ಪುರುಷೋತ್ತಮರಿದ್ದರು. ಅವರುಗಳೆಂದರೆ, ಬೀರ್ಬಲ್, ತೋದರ್ಮಲ್, ಮಾನ್ಸಿಂಗ್, ಅಬುಲ್ ಫಜಲ್, ಫೈಜಿ, ತಾನ್ಸೇನ್, ಅಬ್ದುಲ್ ರಹೀಂಖಾನ್, ಫಕೀರ್ ಅಜಾಯೋ ದಿನ್ ಮತ್ತು ಮುಲ್ಲಾ ದೋಪಾಜಾ. ಅವರೆಲ್ಲರನ್ನು ಕಂಡರೆ ಅಕ್ಬರನಿಗೆ ತುಂಬಾ ಅಕ್ಕರೆ. ಅವರಲ್ಲಿ ರಹೀಂ ಖಾನ್ ವಿಶಿಷ್ಟ ಗುಣಗಳನ್ನು ಹೊಂದಿದ್ದಾತ. ಅವನನ್ನು ಅಬ್ದುಲ್ ರಹೀಂ ಎಂದೂ ಕರೆಯುತ್ತಿದ್ದರು. ಅವನಿಗೆ ಅರಬ್ಬೀ, ತುಕರ್, ಫಾರಸೀ, ಹಿಂದಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ಆ ಭಾಷೆಗಳಲ್ಲಿ ಕಾವ್ಯವನ್ನು ರಚಿಸುವಷ್ಟು ಅವನಿಗೆ ಪಾಂಡಿತ್ಯವಿತ್ತು. ಅವನಿಗೆ ಖಾನ್-ಐ-ಖಾನಾ ಎಂಬ ಬಿರುದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸಂಸ್ಕೃತಾಭ್ಯಾಸ ಮಾಡುವಾಗ ಅವನು ಹಿಂದು ಪುರಾಣಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡ. ಅಪ್ರತಿಮ ವೀರನೂ ಆಗಿದ್ದ ರಹೀಮನು ಗುಜರಾತ್ನ ಯುದ್ಧದಲ್ಲಿ ಪಾಲ್ಗೊಂಡು ಜಯವನ್ನು ತಂದಿತ್ತ. ಹೀಗಾಗಿ ಅವನನ್ನು ಗುಜರಾತಿನ ಸುಬೇದಾರನನ್ನಾಗಿ ಮಾಡಲಾಯಿತು. ಸಂಸ್ಕೃತದ ಬಗ್ಗೆ ಅಪಾರ ಮೋಹವಿದ್ದ ರಹೀಂ ಅನೇಕ ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸಿದ್ದಾನೆ. ಅವೆಲ್ಲಾ ಪಂಡಿತರ ಪರಾಮರ್ಶೆಗೊಳಪಟ್ಟು ಮೆಚ್ಚುಗೆ ಗಳಿಸಿವೆ. ಶಿವ ಮತ್ತು ಕೃಷ್ಣರ ಬಗ್ಗೆ ಭಕ್ತಿ ಮತ್ತು ಪ್ರೀತಿ ಅವನಿಗಿತ್ತು. ತನ್ನ ಒಂದು ಸಂಸ್ಕೃತ ಕೃತಿಯಲ್ಲಿ ಶ್ರೀಕೃಷ್ಣನ ಬಗ್ಗೆ ಬರೆಯುತ್ತಾ, 'ನಿನ್ನ ಮನರಂಜನೆಗಾಗಿ ಅನೇಕ ವೇಷಗಳಿಂದ ಕುಣಿಯುವಂತೆ ಮಾಡಿದೆ. ಪ್ರತಿಸಲವೂ ನಾನು ಕೇಳಿದುದನೆಲ್ಲ ಕೊಟ್ಟು ಅನುಗ್ರಹಿಸಿದೆ. ನನ್ನ ಈ ಬದುಕು ನಿನಗೆ ಸಂತೋಷವನ್ನುಂಟು ಮಾಡಿದಲ್ಲಿ ಇನ್ನು ಒಂದೇ ಒಂದು ಸಲ ಅನುಗ್ರಹಿಸು. ಈ ನರಜನ್ಮದಿಂದ ಶಾಶ್ವತ ಮುಕ್ತಿ ಕೊಡು' ಎಂದು ಪ್ರಾರ್ಥಿಸಿದ್ದಾನೆ. ಇದನ್ನು ಓದಿದಾಗ ಯಾರೋ ಸಂಸ್ಕೃತ ಪಂಡಿತ ಬರೆದಿರಬಹುದೆಂದು ಗೋಚರಿಸಿದರೂ ಇದನ್ನು ಬರೆದದ್ದು ಕಟ್ಟಾ ಮುಸ್ಲಿಂ ಆಗಿದ್ದ ರಹೀಂ. 'ಖೇಟ ಕೌಟುಕಂ' ಎಂಬುದು ಸಂಸ್ಕೃತದಲ್ಲಿ ಬರೆದ ಕೃತಿ. ಅದೇರೀತಿ, 'ರಹಿಮಾರ ಸಾಕುಲ್ಯ' ಅವನ ಇನ್ನೊಂದು ಸಂಸ್ಕೃತ ಕೃತಿ. ಅದೇ ರೀತಿ ಪವಿತ್ರ ಗಂಗೆಯನ್ನು ಮತ್ತು ಶಿವನನ್ನು ಕುರಿತು ಶ್ಲಾಘಿಸುವ ಅನೇಕ ಶ್ಲೋಕಗಳೂ ಇವೆ. ಜಗನ್ನಾಥ ಪಂಡಿತನು ತನ್ನ ಪರಮಾಪ್ತ ಮಿತ್ರನೆಂದೂ ತಾವಿಬ್ಬರೂ ಸಮಕಾಲೀನರೆಂದೂ ಹೇಳಿಕೊಂಡ ಈ ಕವಿಯು ಅವರಿಬ್ಬರ ನಡುವೆ ನಡೆದ ಸಂಸ್ಕೃತ ಸಂವಾದಗಳನ್ನೂ ಬರೆದಿಟ್ಟುಕೊಂಡಿದ್ದಾನೆ. ಆತ ಹಿಂದಿಯಲ್ಲಿ ರಚಿಸಿದ ಅನೇಕ ದ್ವಿಪದಿಗಳನ್ನು ಇಂದಿಗೂ ಉತ್ತರ ಭಾರತದ ಜನಸಾಮಾನ್ಯರ ನಾಲಿಗೆಯ ಮೇಲೆ ನಲಿದಾಡುತ್ತಿವೆಯೆಂದರೆ ಅವನೆಷ್ಟು ಜನಪ್ರಿಯನಾಗಿದ್ದ ಎಂಬುದು ತಿಳಿದುಬರುತ್ತದೆ. ಅಂತಹ ಒಂದು ದ್ವಿಪದಿ ಹೀಗಿದೆ.
'ಪ್ರೀತಿಯದಾರವ ಕಡಿಯದಿರೈ, ಕೂಡಿಸಲಾಗದು ಬಳಿಕ
ಕೂಡಿಸಿದರು ಅದು ಗಂಟಾಗುವುದು, ಎಂದೆಂದಿಗೂ ಅದು ಗಂಟೇ, ರಹೀಮ ಎಂದೆಂದಿಗೂ ಅದು ಗಂಟೇ...'
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ