ಒಬ್ಬ ನೌಕರನ ನಿವೃತ್ತಿ ವಯಸ್ಸು ಎಷ್ಟಿರಬಹುದು? ಅಬ್ಬಬ್ಬಾ ಎಂದರೆ 58? 60? 65? ಊಂಹೂಂ ಇನ್ನು ಮುಂದಿರಲು ಸಾಧ್ಯವೇ ಇಲ್ಲ. ಆದರೆ ಗಾರ್ಡಿಯನ್ ಪತ್ರಿಕೆಯ ಒಂದು ವರದಿ ನಿಜಕ್ಕೂ ಅಚ್ಚರಿತರಿಸುವಂತಿದೆ. ಮೆಕ್ಸಿಕೋದ ಶಿಕ್ಷಕಿಯೊಬ್ಬರು ನಿವೃತ್ತರಾದಾಗ ಅವರ ವಯಸ್ಸು 102! ಮೆಕ್ಸಿಕನ್ ಕ್ರಾಂತಿ 1917ರಲ್ಲಿ ಸಂಭವಿಸಿದಾಗ ಈಕೆ ಶಾಲಾಶಿಕ್ಷಕಿಯಾಗಿ ನೇಮಕಗೊಂಡಳು. ನಂತರದಲ್ಲಿ ಅಧಿಕಾರಕ್ಕೆ ಬಂದ ಕ್ರಾಂತಿಕಾರಿ ಸರ್ಕಾರ ಏಳು ದಶಕಗಳ ಕಾಲ ಆಡಳಿತ ನಡೆಸಿದಾಗಲೂ ಕ್ರೂಸಸ್ ನಿವೃತ್ತಳಾಗಲಿಲ್ಲ. ಸರ್ಕಾರಿ ನೌಕರಿಯಿಂದ ಬಿಡುಗಡೆಹೊಂದಿದರೂ ಅವಳ ಪ್ರೀತಿಪಾತ್ರ ಮಕ್ಕಳು ಮತ್ತು ಪೋಷಕರ ಒತ್ತಾಸೆಯ ಮೇಲೆ ಅದೇ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಮುಂದುವರಿಯಬೇಕಾಯಿತು. ಆದರೆ ವೃದ್ಧಾಪ್ಯದಿಂದಾಗಿ ಉಸಿರಾಟದ ತೊಂದರೆ ಮತ್ತು ಸೊಂಟದ ನೋವಿನಿಂದಾಗಿ ಅನಿವಾರ್ಯವಾಗಿ ಆಕೆ ತನ್ನ ವೃತ್ತಿಗೆ ವಿದಾಯ ಹೇಳಲೇಬೇಕಾಯಿತು. ಆಗ ಅವಳ ವಯಸ್ಸು 102. ಒಟ್ಟು 87 ವರ್ಷ ಶಿಕ್ಷಕಿಯಾಗಿ ಸೇವೆಸಲ್ಲಿಸಿದ್ದಳು. ಆಕೆ ನಿವೃತ್ತಿ ಹೊಂದಿದಾಗ ಅಪಾರ ಶಿಷ್ಯ ವರ್ಗ ಸೇರಿ ಆತ್ಮೀಯವಾಗಿ ಬೀಳ್ಕೊಟ್ಟಿತು. ಮಕ್ಕಳ ಪ್ರೀತಿ ತನ್ನನ್ನು ಇಷ್ಟು ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಕಾರಣವಾಯಿತು, ಮುಂದಿನ ಜನ್ಮದಲ್ಲೂ ಶಿಕ್ಷಕಿಯಾಗಿಯೇ ಸೇವೆಸಲ್ಲಿಸುವ ಆಸೆಯಿದೆ ಎಂದಾಕೆ ಹೇಳಿದಾಗ, ನೆರೆದಿದ್ದ ಅಪಾರ ಶಿಷ್ಯವರ್ಗ ಮತ್ತು ಅಭಿಮಾನಿಗಳ ಕರತಾಡನ ಮುಗಿಲು ಮುಟ್ಟಿತ್ತು. 1907 ರಲ್ಲಿ ಮಧ್ಯ ಮೆಕ್ಸಿಕೋದಲ್ಲಿ ಕ್ರೂಸಸ್ ಜನಿಸಿದಳು. ಚಿಕ್ಕವಯಸ್ಸಿನಿಂದಲೇ ತನ್ನ ಶಿಕ್ಷಕರ ಪ್ರಭಾವದಿಂದ ತಾನೂ ಶಿಕ್ಷಕಿಯಾಗುವ ಕನಸು ಕಂಡಳು. ಅತ್ಯಂತ ಜನಪ್ರಿಯ ಶಿಕ್ಷಕಿಯಾದುದರಿಂದ ಅವಳ ಸೇವೆಯನ್ನು ಸರ್ಕಾರ ಮುಂದುವರೆಸುತ್ತಲೇ ಬಂದಿತು. ಈಕೆಯ ಬೀಳ್ಕೊಡುಗೆ ಸಮಾರಂಭದಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳೂ ಭಾಗವಹಿಸಿದ್ದರು. ಆ ಭಾವಪೂರ್ಣ ವಾತಾವರಣದಲ್ಲಿ ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಮೌನವಾಗಿ ದುಃಖಿಸುತ್ತಿದ್ದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com