ಲಿಯೋ ಟಾಲ್ಸ್ಟಾಯ್ ಗಾಂಧೀಜಿ ಮತ್ತು ಟ್ಯಾಗೋರರಂತಹವರಿಗೆ ಸ್ಫೂರ್ತಿ ನೀಡಿದವರು. ಪ್ರಖ್ಯಾತ ರಷ್ಯನ್ ಕಾದಂಬರಿಕಾರರಾಗಿದ್ದ ಇವರು ವಾರ್ ಆ್ಯಂಡ್ ಪೀಸ್, ಕನ್ಫೆಷನ್, ದಿ ಡೆತ್ ಆಫ್ ಐವಾನ್ ಇಲ್ಯಿಚ್, ಅನ್ನಾ ಕರೆನಿನಾ ಮುಂತಾದ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ. ಸುಮಾರು ನಾಲ್ಕು ಸಾವಿರ ಎಕರೆಯಷ್ಟು ಜಮೀನಿಗೆ ಮಾಲೀಕರಾಗಿದ್ದ ಟಾಲ್ಸ್ಟಾಯ್ ಆಗರ್ಭ ಶ್ರೀಮಂತರಾಗಿದ್ದರು. ತಮ್ಮ ಜಮೀನಿನಲ್ಲಿ ಕೆಲಸಮಾಡುವ ರೈತರ ಬಗ್ಗೆ ಅವರಿಗೆ ಅಪಾರ ಪ್ರೀತಿಯಿತ್ತು. ಕಾರ್ಮಿಕರ ಮಕ್ಕಳಿಗಾಗಿ ಒಂದು ಆದರ್ಶ ಶಾಲೆಯನ್ನು ಪ್ರಾರಂಭಿಸಿ, ತಮ್ಮದೇ ಆದ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದಿದ್ದರು. ಕಾಲಕ್ರಮೇಣ ಎಲ್ಲ ಪ್ರಾಪಂಚಿಕ ಸುಖವನ್ನು ತ್ಯಜಿಸಿ, ವೈರಾಗ್ಯದ ಖನಿಯಾದರು. ಅದ್ವಿತೀಯ ವಿಚಾರವಂತರಾಗಿದ್ದ ಅವರು ತಮ್ಮ ಭೋಗ ಜೀವನಕ್ಕೆ ತಿಲಾಂಜಲಿ ನೀಡಿದರು. ಮೊದಲು ಬೇಟೆಯಾಡುವುದನ್ನು ನಿಲ್ಲಿಸಿದರು. ನಂತರ ಮದ್ಯಪಾನವನ್ನು ಮತ್ತು ಮಾಂಸಾಹಾರವನ್ನು ತ್ಯಜಿಸಿ ಸರಳ ಜೀವನ ಮಾಡತೊಡಗಿದರು. ಕ್ರಮೇಣ ತಂಬಾಕು ಸೇವನೆ ಮತ್ತು ಚಹಾಸೇವನೆಯನ್ನೂ ಬಿಟ್ಟರು. ತಮ್ಮ ಎಲ್ಲ ಸಂಪತ್ತನ್ನೂ ತ್ಯಜಿಸಿ, ಸನ್ಯಾಸಿಯಾದರು. ಕ್ರಿಸ್ತನ ಬೋಧನೆಗಳು, ಕ್ರಿಸ್ತನ ವಾಣಿಗಿಂತ ಭಿನ್ನವಾಗಿರುವುದನ್ನು ಮತ್ತು ಚರ್ಚು ಕ್ರೈಸ್ತ ಧರ್ಮವನ್ನು ಅನುಸರಿಸದೇ ಇದ್ದುದನ್ನು ಕಂಡು ಚರ್ಚನ್ನು ಧಿಕ್ಕರಿಸಿದರು. ಇದರಿಂದ ಕೆರಳಿದ ಸಂಪ್ರದಾಯಸ್ಥರು ಅವರನ್ನು ಧರ್ಮಬಹಿಷ್ಕೃತರನ್ನಾಗಿ ಮಾಡಿದರು. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮಗೆ ಸರಿ ಕಂಡುದನ್ನು ಧ್ಯೆರ್ಯವಾಗಿ ಹೇಳುವ ಪ್ರವೃತ್ತಿಯನ್ನು ಮುದುವರಿಸಿದರು. ಅವರ ನೀಳವಾದ ಗಡ್ಡ ಮತ್ತು ಹೊಳೆಯುವ ಕಣ್ಣುಗಳು ಅವರನ್ನು ಋಷಿಸದೃಶರಂತೆ ಮಾಡಿತ್ತು. ಅವರು ಸತ್ಯದ ಪ್ರಯೋಗಾಲಯದಲ್ಲಿ ಅಲೆದಾಡುತ್ತಿದ್ದ ಮಹರ್ಷಿಯಾಗಿದ್ದರು. ಇಂತಹ ಸರಳಜೀವಿಯ ಮನೆಗೊಮ್ಮೆ ಅವನ ಬಂಧುವೊಬ್ಬ ಬಂದ. ಆತ ಮಾರನೇ ದಿನ ಬೆಳಿಗ್ಗೆ ಉಪಹಾರಕ್ಕಾಗಿ ಕೋಳಿ ಅಡಿಗೆಯನ್ನು ಬಯಸಿದ ಮತ್ತು ಅದಕ್ಕಾಗಿ ಒತ್ತಾಯವನ್ನೂ ಮಾಡಿದ. ಆದರೆ ಅಹಿಂಸಾ ಮೂರ್ತಿಯಾಗಿದ್ದ ಟಾಲ್ಸ್ಟಾಯ್ರಿಗೆ ಇದು ಸರಿಕಾಣಲಿಲ್ಲ. ಮಾರನೇ ದಿನ ಆ ವ್ಯಕ್ತಿ ಎದ್ದಾಗ ಅವನ ತಲೆಯ ಕಡೆ ಒಂದು ಕೋಳಿ ಮರಿ, ಒಂದು ಚೀಟಿ ಮತ್ತು ಚಾಕು ಇತ್ತು. ಚೀಟಿಯಲ್ಲಿ ಹೀಗೆ ಬರೆದಿತ್ತು- 'ನಿನಗೆ ಚಿಕನ್ ಬೇಕಾದರೆ, ಈ ಕೋಳಿಮರಿಯನ್ನು ಕೊಯ್ಯಬಹುದು' ಎಂದು. ಅದನ್ನು ಓದಿ ಆ ಅತಿಥಿಗೆ ಪ್ರಾಣಿದಯೆಯ ಅರಿವುಂಟಾಗಿ ತನ್ನ ವರ್ತನೆಗೆ ನಾಚಿಕೆಯಾಯಿತು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com