ಮಹಾತ್ಮ ಗಾಂಧಿಯವರು ಹಿಂದು-ಮುಸ್ಲಿಂ ಏಕತೆಗಾಗಿ ದುಡಿದ ವ್ಯಕ್ತಿ. ಭಾರತ ಮೊದಲ ಸ್ವಾತಂತ್ರೋತ್ಸವವನ್ನು ಆಚರಿಸುವಾಗ ತಾವು ಮಾತ್ರ ಕಲ್ಕತ್ತೆಯಲ್ಲಿದ್ದು ಹಿಂದು ಮುಸ್ಲಿಂ ಏಕತೆಗಾಗಿ ಪ್ರಯತ್ನಿಸುತ್ತಿದ್ದರು. ದೆಹಲಿಗೆ ಹೋಗಿ ಆ ಸಂತೋಷದ ಕ್ಷಣದಲ್ಲಿ ಭಾಗವಹಿಸಲಿಲ್ಲ. ಬದಲಾಗಿ ಇದ್ದಲ್ಲಿಂದಲೇ ನೆಹರೂ ಮತ್ತು ಪಟೇಲರಿಗೆ ಶುಭ ಹಾರೈಸಿದರು. ಅದೇ ರೀತಿ ನೌಖಾಲಿಯಲ್ಲಿಯೂ ಸಹ. ಹೀಗೆಯೇ ಒಂದು ಸಲ ಯಾವುದೋ ಒಂದು ಕುಗ್ರಾಮದಲ್ಲಿ ನೆಲಸಿ, ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆಗ ಸಂಪ್ರದಾಯಿ ಮುಸ್ಲಿಂ ಒಬ್ಬನು ಏಕಾಏಕಿ ಒಳನುಗ್ಗಿದವನೇ ಗಾಂಧೀಜಿಯವರನ್ನು ಸಮೀಪಿಸಿ ಅವರ ಕುತ್ತಿಗೆಯನ್ನು ತನ್ನ ಬಲಗೈಯಲ್ಲಿ ಬಲವಾಗಿ ಹಿಡಿದು ಅಮುಕತೊಡಗಿದ. ಆಜಾನುಬಾಹು ಮುಸ್ಲಿಂನಿಂದ ಬಿಡಿಸಿಕೊಳ್ಳುವುದು ಪಾಪ ತೆಳುದೇಹದ ಗಾಂಧಿಗೆ ಹೇಗೆ ಸಾಧ್ಯ. ಇನ್ನೇನು ತನ್ನ ಗತಿ ಮುಗಿಯಿತು ಅನ್ನುವಾಗ ಗಾಂಧೀಜಿಯವರು ಖುರಾನ ಶರೀಫನ ಪಠಣವನ್ನು ಜೋರಾಗಿ ಹೇಳಲು ಪ್ರಾರಂಭಿಸಿದರು. ಯಾವಾಗ ಈ ಶ್ಲೋಕಗಳು ಆ ಮುಸ್ಲಿಮನ ಕಿವಿಗೆ ಬಿದ್ದಿತೋ ಆಗ ಅವನ ಕೈ ಸಡಿಲವಾಯಿತು. ತಾನು ಮಾಡುತ್ತಿರುವುದು ಕುಕೃತ್ಯ ಎಂದವನಿಗೆ ಅರಿವಾಯಿತು. ಅವನು ತಾನು ಮಾಡಿದ ಕಾರ್ಯಕ್ಕೆ ಪಶ್ಚಾತ್ತಾಪ ಪಟ್ಟು ಗಾಂಧೀಜಿಯವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಕಣ್ಣುಗಳಲ್ಲಿ ಪ್ರವಹಿಸುತ್ತಿದ್ದ ನೀರನ್ನು ಒರೆಸಿಕೊಳ್ಳುತ್ತಾ, ತಾನೆಂತಹ ಪಾಪಕಾರ್ಯವನ್ನು ಮಾಡುತ್ತಿದ್ದೆ, ಅಲ್ಲಾಹುವು ತನ್ನನ್ನು ಕಾಪಾಡಿದ ಎಂದು ತನಗೆ ತಾನೇ ಹೇಳಿಕೊಂಡ. ಅದಕ್ಕಾಗಿ ದೇವರಿಗೆ ಕೃತಜ್ಞತೆಗಳನ್ನರ್ಪಿಸಿ, ನಂತರ ಗಾಂಧೀಜಿಯವರ ಸೇವೆಯನ್ನು ಸಾಯುವವರೆಗೂ ಮಾಡುವುದಾಗಿಯೂ, ಅದೇ ತಾನು ಮಾಡಿದ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ, ಅದಕ್ಕೆ ಅವಕಾಶ ಮಾಡಿಕೊಡಬೇಕೆಂದು ಗೋಗರೆದ. ಅದಕ್ಕೆ ಗಾಂಧೀಜಿ ನಗತ್ತಾ ಹೀಗೆ ಹೇಳಿದರು, 'ತಮ್ಮಾ, ನೀನು ಮಾಡಬೇಕಾದ ಒಂದೇ ಒಂದು ಕೆಲಸವೆಂದರೆ, ಇಲ್ಲಿ ನಡೆದ ಘಟನೆಯನ್ನು ಯಾರೊಂದಿಗೂ ಹೇಳಬೇಡ. ಹಾಗೇನಾದರೂ ನೀನು ಹೇಳಿದ್ದೇ ಆದರೆ ಮತ್ತೆ ಹಿಂದು-ಮುಸ್ಲಿಂ ಗಲಾಟೆಯಾದೀತು ಮತ್ತು ಅದಕ್ಕೆ ನೀನೇ ಹೊಣೆಗಾರನಾಗುತ್ತೀ'.
ಇದು ಪೂಜ್ಯ ಗಾಂಧಿಯವರ ಕ್ಷಮಾಗುಣವನ್ನು ತೋರಿಸುತ್ತದೆ. ಈ ಘಟನೆಯನ್ನು ಆ ಕಾಲದ ಪ್ರಸಿದ್ಧ ಪತ್ರಕರ್ತ ಹೊರಾಸ್ ಅಲೆಕ್ಸಾಂಡರ್ ಒಂದೆಡೆ ಪ್ರಸ್ತಾಪಿಸಿ, ಗಾಂಧೀಜಿಯವರ ವ್ಯಕ್ತಿತ್ವ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ