ಕುಂವರ್‌ಸಿಂಗ್‌ನ ಸಾಹಸ

Updated on: 

ರಾಜಾ ಕುಂವರ್ ಸಿಂಗ್ ಭಾರತ ಸ್ವಾತಂತ್ರ್ಯ ಇತಿಹಾಸದಲ್ಲಿ ಮರೆಯಲಾಗದ ಹೆಸರು. ಅವನು ಬಿಹಾರದ ಜಗದೀಶಪುರದ ರಾಜನಾಗಿದ್ದ. ಷಹಜಹಾನನಿಂದ ಅವನ ಮನೆತನದವರಿಗೆ ರಾಜಾ ಎಂಬ ಬಿರುದು ಬಂದಿತ್ತು. ಜಗದೀಶಪುರದ ಸುತ್ತಮುತ್ತಲೂ ಅವನಿಗೆ ಒಳ್ಳೆಯ ಹೆಸರಿತ್ತು. ಆತನ ವೈಯಕ್ತಿಕ ಜೀವನ ಪರಿಶುದ್ಧವಾಗಿತ್ತು. ಅವನ ರಾಜ್ಯದಲ್ಲಿ ತಂಬಾಕು ಸೇವನೆ ನಿಷೇಧಿಸಲ್ಪಟ್ಟಿತ್ತು. ಅಲ್ಲದೆ ಅವನು ಸ್ವಾತಂತ್ರ ಪ್ರಿಯನೂ, ರಾಷ್ಟ್ರಭಕ್ತನೂ ಆಗಿದ್ದನು. ಹೀಗಾಗಿ ಇಂಗ್ಲಿಷರಿಗೆ ಕುಂವರ್‌ಸಿಂಗ್‌ನನ್ನು ಕಂಡರೆ ಆಗುತ್ತಿರಲಿಲ್ಲ. 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಆತನಿಗೆ ಆಗಲೇ 80 ವರ್ಷ ವಯಸ್ಸಾಗಿತ್ತು. ಆದರೆ ಹೋರಾಟದ ಮನೋಭಾವವನ್ನು ಬಿಟ್ಟಿರಲಿಲ್ಲ. ಬ್ರಿಟಿಷರ ವಶದಲ್ಲಿದ್ದ ಅರಾ ಕೋಟೆಯನ್ನು ವಶಪಡಿಸಿಕೊಂಡನು. ನಂತರ ನಡೆದ ಯುದ್ಧದಲ್ಲಿ ವಿಲ್ಮನ್ನನ ಸೈನ್ಯವನ್ನು ಸೋಲಿಸಿದನು. ನಂತರ ಎದುರಿಸಲು ಬಂದ ಲೆಗಾರ್ಡ್, ದೊಡ್ಡ ಸೈನ್ಯವನ್ನು ತೆಗೆದುಕೊಂಡು ಬಂದು ಸಿಂಗ್‌ನ ಮೇಲೆ ದಾಳಿ ಮಾಡಿದನು. ಆದರೆ, ಅವನಿಗೆ ರಾಜನ ಮೇಲೆ ಜಯಸಾಧಿಸಲಾಗಲಿಲ್ಲ. ನಂತರ ಲಾರ್ಡ್ ಮಾರ್ಕ್ ಮುಂತಾದವರೊಡನೆ ಹೋರಾಡಿ ಜಯಗಳಿಸಿದ. ಇದರಿಂದ ಇಂಗ್ಲಿಷರು ಅವನ ಮೇಲೆ ತುಂಬಾ ಕುಪಿತರಾಗಿದ್ದರು.
ಒಮ್ಮೆ ಅವನು ತನ್ನ ಸೈನ್ಯಸಮೇತ ಗಂಗಾನದಿಯನ್ನು ದಾಟುವಾಗ ಡಗ್ಲಸ್ ಎಂಬ ಆಂಗ್ಲ ಸೇನಾಧಿಪತಿ ಹೊಂಚು ಹಾಕಿ ಅವನನ್ನು ಹಿಡಿಯಲು ಸಂಚು ರೂಪಿಸಿದ್ದ. ಕುಂವರ್ ಸಿಂಹನ ಸೈನ್ಯವೆಲ್ಲಾ ಸುರಕ್ಷಿತವಾಗಿ ಗಂಗಾನದಿಯನ್ನು ದಾಟಿತು. ಆದರೆ ಕೊನೆ ದೋಣಿಯಲ್ಲಿ ಕುಳಿತು ಪಯಣ ಮಾಡುತ್ತಿದ್ದ ರಾಜನನ್ನು ನೋಡಿ ಇಂಗ್ಲಿಷರು ದಡದ ಮೇಲಿಂದ ಗುಂಡಿನ ಮಳೆಯನ್ನೇ ಸುರಿದರು. ಆದರೆ ಕಂಗಾಲಾಗದ ಕುಂವರ್ ಸಿಂಗ್ ಧೈರ್ಯವಾಗಿ ಇಂಗ್ಲಿಷರನ್ನು ಎದುರಿಸಿದ. ಈ ಘಟನೆಯಲ್ಲಿ ಅವನ ಬಲ ಮುಂಗೈಗೆ ಗುಂಡೊಂದು ಬಡಿದು ತೀವ್ರ ಘಾಸಿಯನ್ನುಂಟುಮಾಡಿತು. ಅದನ್ನು ಹಾಗೇ ಬಿಟ್ಟರೆ ಗುಂಡಿನ ವಿಷ ಮೈಯೆಲ್ಲಾ ಪಸರಿಸುವ ಅಪಾಯವಿದ್ದುದರಿಂದ ತನ್ನ ಎಡಗೈಯಲ್ಲಿ ಖಡ್ಗ ಹಿಡಿದುಕೊಂಡು ತನ್ನ ಬಲಗೈಯನ್ನು ಕತ್ತರಿಸಿ ಗಂಗಾನದಿಗೆ ಚೆಲ್ಲಿದ. ಇದನ್ನು ನೋಡಿದ ಇಂಗ್ಲಿಷ್ ಅಧಿಕಾರಿಗಳು ಭಯದಿಂದ ನಡುಗಿದರು. ಕೊನೆಗೆ ಒಂದೇ ಕೈಯಲ್ಲಿ ಹೋರಾಡಿ ತನ್ನ ಅರಮನೆಯನ್ನು ಸುರಕ್ಷಿತವಾಗಿ ಸೇರಿದ. ಆದರೆ ಅತಿಯಾದ ರಕ್ತಸ್ರಾವದಿಂದಾಗಿ ಮತ್ತು ವೃದ್ಧಾಪ್ಯದಿಂದಾಗಿ 1858ರಲ್ಲಿ ಮರಣಿಸಿದಾಗ ಶತ್ರುಗಳಾದ ಇಂಗ್ಲಿಷರು ಸಹ ಅವನ ಸಾಹಸಕ್ಕೆ ಬೆರಗಾಗಿ ಹೋದರು.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com