ಮಾಳಮಡ್ಡಿ ಗಾಂಧಿ ಮತ್ತು ಅವರ ಶಿಷ್ಯ

Updated on: 

1964-65ರ ಸಮಯ. ಧಾರವಾಡದ ಕೆ.ಇ. ಬೋರ್ಡ್‌ನ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ರುದ್ರಪ್ಪ ರಾಮಪ್ಪ ಪತ್ತಾರ ಎಂಬ ಶಿಕ್ಷಕರಿದ್ದರು. ಅವರು ಶಾಲೆಯ ಮುಖ್ಯಗುರುಗಳಾಗಿ ಎಲ್ಲ ಮಕ್ಕಳ ಮತ್ತು ಸಹೋದ್ಯೋಗಿಗಳ ಪ್ರೀತಿ-ಗೌರವಗಳಿಗೆ ಪಾತ್ರರಾಗಿದ್ದರು. ಅದರಲ್ಲೂ ಬಡಮಕ್ಕಳನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಎಷ್ಟೋ ಮಕ್ಕಳು  ಶುಲ್ಕ ಕಟ್ಟಲು ಪರದಾಡುತ್ತಿದ್ದರೆ, ಅವರಿಗೆ ತಾವೇ ಫೀ ತುಂಬಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದರು. ಶಿಸ್ತಿನ ಸಿಪಾಯಿಯಾಗಿ, ಮೊದಲಿನಿಂದಲೂ ಗಾಂಧೀಜಿಯವರ ಅನುಯಾಯಿಯಾಗಿ, ಅವರ ತತ್ವಗಳ ಪರಿಪಾಲಕರಾಗಿ, ಗಾಂಧಿ ಮಾರ್ಗದಲ್ಲಿ ನಡೆಯುತ್ತಿದ್ದ ಸರಳಜೀವಿ, ಪತ್ತಾರ ಮಾಸ್ತರರು. ಕಾಲಿಗೆಂದೂ ಪಾದರಕ್ಷೆಗಳನ್ನು ಧರಿಸದೆ, ತಾವೇ ನೂತು ತಯಾರಿಸಿದ ಖಾದಿ ಬಟ್ಟೆಯನ್ನು ಧರಿಸುತ್ತಿದ್ದು ಅವರ ವೈಶಿಷ್ಟ್ಯವಾಗಿತ್ತು. ಅವರು ರಸ್ತೆಯಲ್ಲಿ ನಡೆಯುತ್ತಿದ್ದರೆ, ಜನ ತಾವಾಗಿಯೇ ಕೈಎತ್ತಿ ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೀಗಾಗಿ ಎಲ್ಲರೂ ಅವರನ್ನು ಮಾಳಮಡ್ಡಿ ಗಾಂಧಿ ಎಂದೇ ಕರೆಯುತ್ತಿದ್ದರು.
ಒಮ್ಮೆ ಅವರ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಪಾಠಮಾಡುವಾಗ ಮಾತನಾಡುತ್ತಿದ್ದುದು ಅವರ ಗಮನಕ್ಕೆ ಬಂತು. ಅಶಿಸ್ತನ್ನು ಎಂದಿಗೂ ಸಹಿಸದ ಪತ್ತಾರ ಮಾಸ್ತರರಿಗೆ ಹುಡುಗನ ವರ್ತನೆ ಕಂಡು ಸಿಟ್ಟುಬಂತು. ಒಂದೆರಡು ಬಾರಿ ಎಚ್ಚರಿಸಿದರೂ ಆ ಬಾಲಕ ಮಾತನಾಡುವುದನ್ನು ಬಿಡಲಿಲ್ಲ.  ಕೊನೆಗೆ ತಾಳಲಾರದೆ ಬೆತ್ತದಿಂದ ಆ ಹುಡುಗನಿಗೆ ಹಿಗ್ಗಾಮುಗ್ಗ ಬಾರಿಸಿದರು. ಆಗಲೇ ಅವರಿಗೆ ಸಮಾಧಾನವಾದದ್ದು. ಮರುದಿನ ನೋಡಿದರೆ ಆ ಹುಡುಗ ಶಾಲೆಗೆ ಗೈರು ಹಾಜರು. ಏಕೆಂದು ವಿಚಾರಿಸಲು ಬಾಲಕನ ಮನೆಗೆ ಹೋದಾಗ ಹೊಡೆತ ತಿಂದ ಅವನು ಜ್ವರದಿಂದ ನರಳುತ್ತಿದ್ದ. ತಾನು ಹೊಡೆದಿದ್ದರಿಂದಲೇ ಹೀಗಾಗಿದೆಯೆಂದು ಮಾಸ್ತರರಿಗೆ ತಿಳಿಯಿತು. ತಮ್ಮ ವರ್ತನೆಯ ಬಗ್ಗೆ ಅವರಿಗೆ ತುಂಬಾ ಬೇಸರವಾಯಿತು. ಮರುದಿನ ಆ ಬಾಲಕ ಶಾಲೆಗೆ ಬಂದಾಗ ಒಂದು ಸ್ಲೇಟಿನ ಮೇಲೆ ತಾವು ಹುಡುಗನನ್ನು ಹೊಡೆದಿದ್ದಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿ ಬರೆದ ಫಲಕ ಮತ್ತು ನೆಲದ ಮೇಲೆ ಕುಳಿತು ಇಡೀ ದಿನ ಉಪವಾಸ ಸತ್ಯಾಗ್ರಹ ಮಾಡಿ ಪ್ರಾಯಶ್ಚಿತ್ತ ಮಾಡಿಕೊಂಡರು. ಅಂದೇ ತಮ್ಮ ಬೆತ್ತವನ್ನು ಬಿಸಾಕಿದ್ದಲ್ಲದೆ, ಇನ್ನೆಂದೂ ಅವರ ಮಕ್ಕಳ ಮೇಲೆ ಕೈ ಎತ್ತಲಿಲ್ಲ. ಆ ಹುಡುಗನೇ ಈಗ ದೂರದರ್ಶನದ ಹೆಚ್ಚುವರಿ ನಿರ್ದೇಶಕರಾಗಿ, ಹಲವಾರು ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳಿಂದ ಹೆಸರು ಗಳಿಸಿರುವ ನಾಡೋಜ ಮಹೇಶ್ ಜೋಷಿಯವರು. ಈ ಘಟನೆಯ ಬಗ್ಗೆ ಹೇಳುವಾಗ ಈಗಲೂ ಅವರ ಕಣ್ಣಾಲಿಗಳು ತುಂಬಿ ಬರುತ್ತವೆ. ತಮ್ಮ ಪ್ರಾಥಮಿಕ ಶಾಲೆಯ ಶಿಕ್ಷಕರ ಬಗ್ಗೆ ಗೌರವ - ಅಭಿಮಾನ ಅವರ ಕಣ್ಣುಗಳಲ್ಲಿ ಉಕ್ಕಿ ಹರಿಯುತ್ತದೆ.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com