ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಅನೇಕರು ತಮ್ಮ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು, ತಮ್ಮ ಜೀವವನ್ನೇ ಅರ್ಪಿಸಿ ಅಮರರಾಗಿದ್ದಾರೆ. ಅವರೆಲ್ಲರೂ ಪೂಜ್ಯ ಗಾಂಧೀಜಿಯವರ ಪ್ರಭಾವಕ್ಕೆ ಒಳಪಟ್ಟಿದ್ದವರೇ. ಇಂತಹ ಒಬ್ಬ ವ್ಯಕ್ತಿ, ಮಹಾರಾಷ್ಟ್ರದ ಒಂದು ಹಳ್ಳಿಯ 'ಪಂಚ ಪಟೇಲ ಕಾಕಾ' ಎಂಬುವನು. ಅವನು ಪಕ್ಕಾ ಗಾಂಧೀಜಿಯವರ ಅನುಯಾಯಿಯಾಗಿ ಕರನಿರಾಕರಣ ಚಳವಳಿ ಮತ್ತು ಉಪ್ಪಿನ ಸತ್ಯಾಗ್ರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ. ಇದರಿಂದ ಬ್ರಿಟಿಷ್ ಸರ್ಕಾರ ಆತನನ್ನು ಸೆರೆಮನೆಗೆ ತಳ್ಳಿದ್ದೂ ಅಲ್ಲದೆ, ಹೇರಳ ಆಸ್ತಿಪಾಸ್ತಿಗಳನ್ನೂ ವಶಪಡಿಸಿಕೊಂಡಿತು. ಅದರಿಂದ ಎದೆಗುಂದದೆ, ತಾನು ರಾಷ್ಟ್ರಕ್ಕೆ ಇಷ್ಟಾದರೂ ಸೇವೆ ಸಲ್ಲಿದೆನಲ್ಲಾ ಎಂಬ ಧನ್ಯತಾಭಾವ ಅವನಲ್ಲಿ ಮನೆಮಾಡಿತ್ತು. 1937ರಲ್ಲಿ ಶಿಕ್ಷೆ ಮುಗಿಸಿ ಹೊರಬಂದಾಗ ಮುಂಬಯಿ ಪ್ರಾಂತದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು ಮತ್ತು ಬಿ.ಜಿ.ಖೇರರು ಮುಖ್ಯಮಂತ್ರಿಯಾಗಿದ್ದರು. ಅವರು ಕಾಕಾನಿಗೆ ಸಂದೇಶವೊಂದನ್ನು ಕಳುಹಿಸಿ, ಬ್ರಿಟಿಷರು ಜಪ್ತಿ ಮಾಡಿದ ಸಮಸ್ತ ಆಸ್ತಿಪಾಸ್ತಿಯೆಲ್ಲವನ್ನೂ ವಾಪಸ್ಸು ನೀಡುವುದಾಗಿ ತಿಳಿಸಿದರು. ಆದರೆ ಸ್ವಾಭಿಮಾನಿಯಾದ ಕಾಕಾ ತಾವಿನ್ನೂ ಗಾಂಧೀಜಿಯವರ ಕನಸಾದ, ಸ್ವಾತಂತ್ರ್ಯ ಭಾರತದಲ್ಲಿ ಇಲ್ಲವಾದ್ದರಿಂದ ಆ ಆಸ್ತಿಯನ್ನು ಹಿಂಪಡೆಯುವುದಿಲ್ಲವೆಂದು ಉತ್ತರಿಸಿದರು. ಮುಂದೆ ಭಾರತ 1947ರಲ್ಲಿ ಸಂಪೂರ್ಣ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ ಮೇಲೆ ಸರ್ಕಾರ ಕಾಕಾನಿಗೆ ಮತ್ತೆ ಅವನ ಆಸ್ತಿಯನ್ನು ಹಿಂಪಡೆಯುವಂತೆ ಹೇಳಿಕಳುಹಿಸಿತು. ಆಗ ಅವನು ಗಾಂಧೀಜಿಯವರ ಬಳಿ ಹೋಗಿ, 'ಬಾಪೂ, ತಮ್ಮ ಕನಸಿನ ಸ್ವಾತಂತ್ರ್ಯ ನನಸಾಗಿದೆಯೇ?' ಎಂದು ಪ್ರಶ್ನಿಸಿದನು. ಅದಕ್ಕೆ ಗಾಂಧೀಜಿ 'ಇಲ್ಲವೆಂದು' ತಲೆಯಾಡಿಸಿದರು. ತಕ್ಷಣ ಪಂಚಕಾಕಾ ತನ್ನ ಆಸ್ತಿಪಾಸ್ತಿಯನ್ನು ಹಿಂಪಡೆಯುವುದಿಲ್ಲವೆಂದೂ, ಆ ವಿಷಯದಲ್ಲಿ ಬಲವಂತ ಮಾಡಬಾರದೆಂದೂ ಮಾರುತ್ತರ ಕಳುಹಿಸಿದನು. ಆಗ ಕೆಲವು ಕುಹಕಿಗಳು, ಕಾಕಾನನ್ನು ಕೆಣಕುತ್ತಾ, 'ನೀವೇನೋ ಬೇಡವೆಂದು ನಿರಾಕರಿಸಿದಿರಿ, ಆದರೆ ನಿಮ್ಮ ಅವಸಾನದ ನಂತರ ನಿಮ್ಮ ಹೆಂಡತಿ ಮಕ್ಕಳು ನಿಮ್ಮನ್ನು ಶಪಿಸುವುದಿಲ್ಲವೆ?' ಎಂದು ಕೇಳಿದರು. ಅದಕ್ಕೆ ಕಾಕಾ 'ಆ ರೀತಿಯ ಸಮಸ್ಯೆ ಒಂದಲ್ಲಾ ಒಂದು ದಿನ ಬಂದೇ ಬರುತ್ತದೆ ಎಂದು ಗೊತ್ತಿದ್ದುದರಿಂದಲೇ ನಾನು ವಿವಾಹವನ್ನೇ ಮಾಡಿಕೊಳ್ಳದೆ ಬ್ರಹ್ಮಚಾರಿಯಾಗಿ ಉಳಿದಿದ್ದೇನೆ' ಎಂದು ಉತ್ತರಿಸಿದನು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ