ಎನ್.ಬಸವಾರಾಧ್ಯರು ಖ್ಯಾತ ನಿಘಂಟು ತಜ್ಞರು. ಕನ್ನಡ ಸಾಹಿತ್ಯ ಪರಿಷತ್ತಿನ ಕನಸಿನ ಯೋಜನೆ ಕನ್ನಡ-ಕನ್ನಡ ನಿಘಂಟು ಯೋಜನೆಯ ಮುಖ್ಯ ಸಂಪಾದಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಸ್ನಾತಕ ವಿಶೇಷಜ್ಞರಾಗಿ, ಸಂಶೋಧಕರಾಗಿ ಹೆಸರು ಮಾಡಿದವರು. ಮೂವತ್ತಕ್ಕೂ ಹೆಚ್ಚು ಸಂಪಾದಿತ ಕೃತಿಗಳನ್ನೂ, ಇನ್ನೂರಕ್ಕೂ ಹೆಚ್ಚು ಮೌಲಿಕ ಲೇಖನಗಳನ್ನು ಬರೆದು ಪ್ರಸಿದ್ಧರಾದವರು. ಅನೇಕ ಮಕ್ಕಳ ಸಾಹಿತ್ಯ ಕೃತಿಗಳನ್ನೂ ರಚಿಸಿದ್ದಾರೆ. ಉಪಾಯನ, ದೇವಗಂಗೆ ಮತ್ತು ಅಮರವಾಣಿ ಇವರಿಗೆ ಅರ್ಪಿಸಿದ ಸಂಭಾವನಾ ಗ್ರಂಥಗಳಾಗಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಭಾರತ ಭೂಷಣ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಪಾತ್ರರಾದವರು.
ಬಸವಾರಾಧ್ಯರು ತೀನಂಶ್ರೀ ಅವರ ಅಧ್ಯಕ್ಷತೆಯಲ್ಲಿ ನಿಘಂಟು ಕಾರ್ಯಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಎರವಲು ಸೇವೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ನೇಮಕವಾಗಿದ್ದವರು. ಆಗ ಅವರಿಗೆ ತಮ್ಮ ಸಂಬಳದ ಜೊತೆ ತಿಂಗಳಿಗೆ ಎಪ್ಪತೈದು ರು.ಗಳನ್ನು ವಿಶೇಷ ಭತ್ಯೆಯಾಗಿ ನೀಡಲಾಗುತ್ತಿತ್ತು. ಹಗಲಿರುಳೆನ್ನದೆ ದಿನದ ಬಹುಭಾಗವನ್ನು ನಿಘಂಟು ಕಾರ್ಯಕ್ಕೆ ಮೀಸಲಾಗಿಟ್ಟು, ತನ್ಮಯತೆಯಿಂದ ಕೆಲಸ ಮಾಡುತ್ತಿದ್ದ ಬಸವಾರಾಧ್ಯರನ್ನು ಕಂಡರೆ ತೀನಂಶ್ರೀ ಅವರಿಗೆ ತುಂಬಾ ಗೌರವ. ಒಮ್ಮೆ ಕ.ಸಾ.ಪ. ಅಧ್ಯಕ್ಷರೊಡನೆ ತೀನಂಶ್ರೀಯವರು ಬಸವಾರಾಧ್ಯರನ್ನು ಕರೆದುಕೊಂಡು ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ ಬಳಿ ಕರೆದೊಯ್ದರು. ನಿಘಂಟು ಕಾರ್ಯದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಬಸವಾರಾಧ್ಯರಿಗೆ ಕನಿಷ್ಟ ರೀಡರ್ ಸಂಬಳವನ್ನಾದರೂ ನೀಡಬೇಕೆಂದು ಮನವಿ ಸಲ್ಲಿಸಿದರು. ಅದಕ್ಕೆ ಎಸ್ಸೆನ್ 'ಇಷ್ಟು ಸಣ್ಣ ಕೆಲಸಕ್ಕೆ ನನ್ನ ಬಳಿ ಬರಬೇಕಾಯಿತೆ?' ಎಂದು ನೊಂದುಕೊಂಡು ತಮ್ಮ ಕಾರ್ಯದರ್ಶಿಯನ್ನು ಕರೆದು ಬಸವಾರಾಧ್ಯರಿಗೆ ರೀಡರ್ ಸಂಬಳ ನಿಗದಿ ಪಡಿಸಬೇಕೆಂದು ಆದೇಶಿಸಿದರು. ಆದರೆ ಆ ಅಧಿಕಾರಿ ನಿಯಮಾನುಸಾರ ಹಾಗೆ ನೀಡಲು ಬರುವುದಿಲ್ಲವೆಂದು ಟಿಪ್ಪಣಿ ಬರೆದರು. ಬೇಸರಗೊಂಡ ಬಸವಾರಾಧ್ಯರು ಒಂದು ದಿನ ತೀ.ನಂ.ಶ್ರೀ.ಯವರಿಗೆ ರಾಜಿನಾಮೆ ಪತ್ರ ಸಲ್ಲಿಸಿ, ದಯವಿಟ್ಟು ನನ್ನ ರಾಜಿನಾಮೆ ತೆಗೆದುಕೊಂಡು, ಮಾತೃ ಸಂಸ್ಥೆಗೆ ಕಳಿಸಿಬಿಡಿ ಎಂದು ಕೇಳಿಕೊಂಡರು. ಅದಕ್ಕೆ ತೀ.ನಂ.ಶ್ರೀಯವರು ಬಸವಾರಾಧ್ಯರಿಗೆ ಇನ್ನರ್ಧ ಹಾಳೆ ತರಲು ಹೇಳಿದರು. ಏಕೆ ಎಂದು ಕೇಳಿದಾಗ, ನೋಡು, ನಿನ್ನ ರಾಜಿನಾಮೆ ಜೊತೆ ನನ್ನ ರಾಜಿನಾಮೆಯನ್ನೂ ಸಲ್ಲಿಸುತ್ತೇನೆ ಎಂದರು. ವಿಷಯ ರಂ.ಶ್ರೀ.ಮುಗಳಿಯವರಿಗೆ ತಿಳಿದಾಗ ಕನ್ನಡಕ್ಕಾಗಿ ನಾವು ಅಲ್ಪಸ್ವಲ್ಪ ತ್ಯಾಗ ಮಾಡಬೇಕಾಗುತ್ತದೆ ಎಂದು ಬಸವಾರಾಧ್ಯರನ್ನು ಸಮಾಧಾನಪಡಿಸಿದರು. ಇದಕ್ಕೆ ಪರಿಹಾರವೋ ಎಂಬಂತೆ, ತೀ.ನಂ.ಶ್ರೀ.ಯವರು ಬಸವಾರಾಧ್ಯರಿಂದ ಕನ್ನಡ ಗದ್ಯ ಮೀಮಾಂಸೆ ಮತ್ತು ಕನ್ನಡ ಗದ್ಯಾವಲೋಕನ ಎಂಬ ಎರಡು ಕೃತಿಗಳನ್ನು ಸಂಪಾದನೆ ಮಾಡಿಸಿ, ಅವನ್ನು ಪದವಿ ತರಗತಿಗೆ ಪಠ್ಯ ಪುಸ್ತಕವನ್ನಾಗಿ ಮಾಡಿಸಿದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ