ಜಯಚಾಮರಾಜ ಒಡೆಯರ್ ಕನ್ನಡದಲ್ಲಿ ಪಾಸಾದದ್ದು!

Updated on: 

1936ರ ಸಮಯ. ಮೈಸೂರಿನ ಯುವರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಓದುತ್ತಿದ್ದರು. ಆ ವರ್ಷದ ಪರೀಕ್ಷೆಯಲ್ಲಿ ಒಡೆಯರ್ ಅವರು ಕನ್ನಡದಲ್ಲಿ ಫೇಲಾದರು. ಆಗ ಕನ್ನಡ ವಿಭಾಗವನ್ನು ನೋಡಿಕೊಳ್ಳುತ್ತಿದ್ದವರು ಟಿ.ಎಸ್.ವೆಂಕಣ್ಣಯ್ಯನವರು. ಆಗ ಅನೇಕರು ಈ ಬಗ್ಗೆ ಚರ್ಚಿಸತೊಡಗಿದರು. ಯುವರಾಜರನ್ನು ಫೇಲ್ ಮಾಡಿದ್ದಕ್ಕೆ ಕೆಲವರು ಆಕ್ಷೇಪಿಸಿದರೆ, ಮತ್ತೆ ಕೆಲವರು ಇನ್ನು ವೆಂಕಣ್ಣಯ್ಯನವರ ಗತಿ ಮುಗಿಯಿತು, ಮಹಾರಾಜರ ಅವಕೃಪೆಯಿಂದ ಏನಾಗುತ್ತದೋ ಎಂದು ಮರುಗಿದರು. ಅವರ ಗೆಳೆಯರು, ಬಂಧುಗಳು ವೆಂಕಣ್ಣಯ್ಯನವರ ಬಳಿ ಬಂದು ಯುವರಾಜರನ್ನೇಕೆ ಫೇಲ್ ಮಾಡಿದಿರಿ ಎಂದು ಕೇಳತೊಡಗಿದರು. ಅದಕ್ಕೆ ವೆಂಕಣ್ಣಯ್ಯನವರು ತಾವು ಫೇಲ್ ಮಾಡಲಿಲ್ಲ ಅವರೇ ಫೇಲ್ ಆದರು ಎಂದು ಮಾರುತ್ತರ ನೀಡಿದರು. ಎಲ್ಲರಲ್ಲೂ ಆತಂಕದ ಛಾಯೆ ಮೂಡಿತ್ತು. ಆಷ್ಟರಲ್ಲಿ ವೆಂಕಣ್ಣಯ್ಯನವರಿಗೆ ಮಹಾರಾಜ ಕೃಷ್ಣರಾಜ ಒಡೆಯರ್ರಿಂದ ಬುಲಾವ್ ಬಂತು. ಅವರನ್ನು ಕರೆತರಲು ಕಾರ್ ಸಹ ಅರಮನೆಯಿಂದ ಬಂದಿತ್ತು. ವೆಂಕಣ್ಣಯ್ಯನವರು ಮಹಾಸ್ವಾಮಿಯವರು ಕಳುಹಿಸಿದ ವಾಹನದಲ್ಲಿ ಅರಮನೆಗೆ ಹೋಗಿ ಬೈಠಕ್ ಖಾನೆಯಲ್ಲಿ ಕುಳಿತರು. ಮಹಾರಾಜರು ಆಗಮಿಸಿದ ಕೂಡಲೇ ವೆಂಕಣ್ಣಯ್ಯನವರು ಎದ್ದು ನಿಂತು ನಮಸ್ಕರಿಸಿದರು. ಅವರಿಗೆ ಕುಳಿತು ಕೊಳ್ಳಲು ಹೇಳಿ, ಅವರ ಕ್ಷೇಮ ಸಮಾಚಾರ ವಿಚಾರಿಸಿದರು. ನಂತರ ಯುವರಾಜರು ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಫೇಲಾದ ವಿಷಯ ಚರ್ಚೆಗೆ ಬಂತು. ಮುಂದೆ ಏನು ಮಾಡಬೇಕು ಎಂದು ಮಹಾರಾಜರು ವೆಂಕಣ್ಣಯ್ಯನವರನ್ನು ಕೇಳಿದರು. ಅದಕ್ಕೆ ವೆಂಕಣ್ಣಯ್ಯನವರು ಇನ್ನೊಮ್ಮೆ ಪರೀಕ್ಷೆಗೆ ಕುಳಿತುಕೊಳ್ಳಬಹುದೆಂಬ ಸಲಹೆ ನೀಡಿದರು. ಪುನಃ ಫೇಲಾಗದಂತೆ ಯುವರಾಜರಿಗೆ ಅರಮನೆಗೆ ಬಂದು ಪಾಠ ಹೇಳಬೇಕೆಂದು ವೆಂಕಣ್ಣಯ್ಯನವರಲ್ಲಿ ವಿನಂತಿಸಿದರು. ಆದರೆ ತಾವು ಖಾಸಗಿ ಪಾಠ ಮಾಡುವುದಿಲ್ಲವೆಂದು ಮಹಾರಾಜರ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದರು. ಕೊನೆಗೆ ತಮ್ಮ ವಿದ್ಯಾರ್ಥಿ ಪುಟ್ಟಪ್ಪ(ಕುವೆಂಪು) ಅವರನ್ನು ಯುವರಾಜರಿಗೆ ಪಾಠ ಮಾಡಲು ಕಳುಹಿಸುವುದಾಗಿ ತಿಳಿಸಿದರು. ಸಂತುಷ್ಟರಾದ ಮಹಾರಾಜರು ಒಂದು ಬೆಳ್ಳಿ ತಟ್ಟೆಯಲ್ಲಿ ಫಲತಾಂಬೂಲಗಳನ್ನಿಟ್ಟು ವೆಂಕಣ್ಣಯ್ಯನವರಿಗೆ ನೀಡಿದರು. ಯುವರಾಜರನ್ನು ಫೇಲ್ ಮಾಡಿದ್ದಕ್ಕೆ ಬೆಳ್ಳಿತಟ್ಟೆ ದೊರೆಯಿತೆಂದು ಎಲ್ಲರೂ ತಮಾಷೆ ಮಾಡುತ್ತಿದ್ದರು. ವೆಂಕಣ್ಣಯ್ಯನವರು ಅದೇ ತಟ್ಟೆಯಲ್ಲಿ ಕೊನೆಯವರೆಗೂ ಊಟ ಮಾಡುತ್ತಿದ್ದರು.
ನಂತರ ಪುಟ್ಟಪ್ಪನವರನ್ನು ಕರೆಸಿ, ಯುವರಾಜರಿಗೆ ಪಾಠಹೇಳಲು ಕೇಳಿಕೊಂಡರು. ಆದರೆ ಪುಟ್ಟಪ್ಪನವರು, 'ಗುರುಗಳೇ ಖಾಸಗಿ ಪಾಠ ಹೇಳದೇ ಇರುವುದರಿಂದ ನಾನೂ ಸಹ ಪಾಠ ಮಾಡುವುದಿಲ್ಲ' ಎಂದು ವಿನೀತರಾಗಿ ಹೇಳಿದರು. ಕೊನೆಗೆ ತೀ.ನಂ.ಶ್ರೀಕಂಠಯ್ಯನವರನ್ನು ಒಪ್ಪಿಸಿ, ಯುವರಾಜರಿಗೆ ಕನ್ನಡ ಪಾಠ ಮಾಡಲು ವೆಂಕಣ್ಣಯ್ಯವನರು ಏರ್ಪಾಡು ಮಾಡಿದರು ಮತ್ತು ಆ ವರ್ಷ ಯುವರಾಜ ಜಯಚಾಮರಾಜ ಒಡೆಯರ್ ಕನ್ನಡ ವಿಷಯದ ಪರೀಕ್ಷೆಯಲ್ಲಿ ಪಾಸಾದರು.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com