ಹಾಗಾದರೆ ಅವಿದ್ಯಾವಂತರ ಕತೆಯೇನು?

Updated on: 

ಹಿಂದಿ ಚಲನಚಿತ್ರ ಜಗತ್ತಿನ ಪ್ರಮುಖ ನಟರಲ್ಲಿ ಒಬ್ಬರಾದ ಸಂಜಯ್ದತ್ಗೆ ಸುಪ್ರಿಂಕೋರ್ಟ್ ಐದು ವರ್ಷಗಳ ಸೆರೆವಾಸವನ್ನು ವಿಧಿಸಿದೆ. ಸಂಜಯ್ದತ್ಗೆ ಕ್ಷಮಾದಾನ ನೀಡಬೇಕೆಂಬ ಒತ್ತಾಯ ಈಗ ಅವರ ಮಿತ್ರರು ಮತ್ತು ಅಭಿಮಾನಿಗಳಿಂದ ಬರುತ್ತಿದೆ. ಸುಪ್ರಿಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಸಹ ಕ್ಷಮಾದಾನದ ಬಗ್ಗೆ ಹೇಳಿದ್ದಾರೆ.
 ಸಂವಿಧಾನದ 161ನೆಯ ವಿಧಿಯನ್ವಯ ನ್ಯಾಯಾಲಯವೊಂದು ವಿಧಿಸಿರುವ ಶಿಕ್ಷೆಯನ್ನು ಕ್ಷಮಾದಾನದ ಮೂಲಕ ನಿವಾರಿಸಬಹುದು. ಅಥವಾ, ಶಿಕ್ಷೆಯ ಪ್ರಲಂಬನ ಅಥವಾ ಮನ್ನ ಅಥವಾ ಕಡಿತಗೊಳಿಸುವುದೂ ಸಾಧ್ಯವಿದೆ. ರಾಜ್ಯಪಾಲರಿಗೆ ಈ ಅಧಿಕಾರವಿದೆ. ಮತ್ತು ಈ ಬಗ್ಗೆ ಅವರಿಗೆ ಅರ್ಜಿ ಸಲ್ಲಿಸುವ ಹಕ್ಕು ಶಿಕ್ಷೆಗೊಳಗಾದವರಿಗೆ ಇದೆ. ಇಲ್ಲಿ ಒಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕ್ಷಮಾದಾನ ನೀಡಿದ ಆಜ್ಞೆಯನ್ನು ನ್ಯಾಯಿಕ ಪುನರವಲೋಕನಕ್ಕೆ (judicial review) ಒಳಪಡಿಸಬಹುದು. ಎಂದರೆ, ರಾಜ್ಯಪಾಲರ ಆಜ್ಞೆಯೇ ಅಂತಿಮವಾದುದು ಎಂದೇನಲ್ಲ. ಡಾ. ಸುಬ್ರಹ್ಮಣ್ಯಸ್ವಾಮಿ ಇದನ್ನೇ ಹೇಳುವುದು.
ಸಂಜಯ್ದತ್ ತಾವು 13 ವರ್ಷಗಳಿಗೂ ಮೇಲ್ಪಟ್ಟು "ಭಯೋತ್ಪಾದಕ" ಎಂಬ ಕಳಂಕಕ್ಕೀಡಾಗಿ ಯಾತನೆ ಅನುಭವಿಸಿದ್ದು, ಮಗಳಿಂದ ಬೇರೆಯಾಗಬೇಕಾಗಿ ಬಂದುದು, ಜಾಮೀನಿನ ನಂತರ ತಮ್ಮ ನೇರ ನಡವಳಿಕೆಗಳು, ಇತ್ತೀಚಿನ ಮದುವೆ, ಎರಡು ಚಿಕ್ಕ ಮಕ್ಕಳಿರುವುದು, ತಮ್ಮ ದಾನಶೀಲ ಕಾರ್ಯಗಳು ಈ ಎಲ್ಲವನ್ನೂ ನ್ಯಾಯಾಲಯದ ಮುಂದೆ ನಿವೇದಿಸಿಕೊಂಡಿದ್ದರು. ಸುಪ್ರಿಂಕೋರ್ಟ್ ಇವನ್ನು ಪರಿಗಣಿಸಿಲ್ಲವೆಂದು ಹೇಳುವಂತಿಲ್ಲ. ಪರವಾನಗಿ ಇಲ್ಲದ ಭಯೋತ್ಪಾದಕ ಎಕೆ.56ನ್ನು ಇಟ್ಟುಕೊಂಡಿದ್ದನ್ನು ದತ್ ಒಪ್ಪಿಕೊಂಡಿದ್ದಾರೆ.
ಅದನ್ನು ನಾಶಪಡಿಸುವಂತೆ (ತಾವು ಮಾರಿಷಸ್ನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ ವೇಳೆ) ಸೂಚಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಹೀಗಿರುವಾಗ! ಒಬ್ಬ ಅವಿದ್ಯಾವಂತ, ಅಮಾಯಕ ಅಥವಾ ಮುಗ್ಧ ಸಂದರ್ಭಗಳ ಒಳಸಂಚಿಗೆ ಬಲಿಯಾಗಿ ತನ್ನ ನಿಲುವನ್ನು ಸ್ಥಾಪಿಸಲು ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲನಾಗಿ ಅಪರಾಧಿಯೆಂದು ತೀರ್ಮಾನಿಸಲ್ಪಟ್ಟು ಶಿಕ್ಷೆಗೊಳಗಾದಾಗ, ಬಹುಶಃ ಆತನಿಗೆ ಕ್ಷಮಾದಾನ ಸೌಲಭ್ಯವನ್ನು ಅನ್ವಯಿಸುವ ಬಗ್ಗೆ ವಿಚಾರ ಮಾಡಬಹುದು. ದುರದೃಷ್ಟವೆಂದರೆ, ಸಂಜಯ್ದತ್ ವಿದ್ಯಾವಂತ, ಸಮಾಜದಲ್ಲಿ ಹೆಸರು ಮಾಡಿದಾತ, ತಿಳಿವಳಿಕೆಯುಳ್ಳವರು ಆದರೂ ಅಜಾಗರೂಕತೆ ಮೆರೆದರು! ಹತ್ತಾರು ವರ್ಷಗಳಿಂದ ಪ್ರಕರಣ ಇತ್ಯರ್ಥವಾಗದೇ ಸೆರೆಮನೆಯಲ್ಲಿ ಕೊಳೆಯುತ್ತಿರುವ ಅವಿದ್ಯಾವಂತ, ಮುಗ್ಧ, ಬಲಿಪಶುಗಳಾದ ನೂರಾರು ಮಂದಿಯ ಕತೆ ಏನು? ಪ್ರಸಿದ್ಧರಿಗೆ, ಪ್ರಭಾವಶಾಲಿಗಳಿಗೆ ಮಾತ್ರವೇ ಕಾಯಿದೆ ಇರುವುದೇನಲ್ಲ. ಕಾಯ್ದೆಗಿಂತ ಮಿಗಿಲಾದವರು ಯಾರೂ ಇಲ್ಲ ಎನ್ನುವ ನಾಣ್ನುಡಿಯೇ ಸಂಜಯ್ದತ್ರ ದುರದೃಷ್ಟ!
-ಸಾಮಗ ದತ್ತಾತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com