ಸಿಂದಗಿಯ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಪವಾಡ ಪುರುಷರಾಗಿದ್ದರು. ಮೃದುಭಾಷಿಗಳೂ, ನಿರಹಂಕಾರಿಗಳೂ, ಪರೋಪಕಾರಿಗಳೂ ಆಗಿದ್ದ ಅವರಿಗೆ ಬಹುದೊಡ್ಡ ಶಿಷ್ಯಬಳಗವೇ ಇತ್ತು. ಸದಾ ಅಧ್ಯಯನಶೀಲರಾಗಿ ತಮ್ಮ ಬಳಿ ಬಂದ ಶಿಷ್ಯವರ್ಗದ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ, ಸರಳ ಜೀವನ ನಡೆಸುತ್ತಿದ್ದರು. ಪರಿಶುದ್ಧ ನಡವಳಿಕೆಯಿಂದ ಎಲ್ಲರ ಗೌರವಾದರಗಳಿಗೆ ಪಾತ್ರರಾಗಿದ್ದ ಶಾಂತವೀರ ಸ್ವಾಮಿಗಳು ಅನೇಕ ವಟುಗಳಿಗೆ ತಮ್ಮ ಮಠದಲ್ಲಿ ಆಶ್ರಯ ನೀಡಿ ಎಲ್ಲ ರೀತಿಯ ವಿದ್ಯೆ ಕಲಿಯಲು ಅನುವು ಮಾಡಿಕೊಟ್ಟಿದ್ದರು.
ಒಮ್ಮೆ ತಮ್ಮ ಮಠದ ವಟುಗಳು ಒಬ್ಬ ಹುಡುಗನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸುತ್ತಿರುವುದನ್ನು ನೋಡಿ ಆ ಬಾಲಕನನ್ನು ಬಿಡಿಸಿ, ಅವನಿಗೆ ಸಾಂತ್ವನ ನೀಡಿ, ಒಳಗೆ ಕರೆದೊಯ್ದು ಆಹಾರನೀಡಿ ಸತ್ಕರಿಸಿದರು. ಅವರ ಮಾತೃವಾತ್ಸಲ್ಯದ ಮಾತು ಕೇಳಿದ ಬಾಲಕ ಗುರುಗಳ ಪಾದಕ್ಕೆ ನಮಿಸಿ, ಕಣ್ಣೀರಿಡುತ್ತಾ, 'ತಾನು ಮಠಕ್ಕೆ ಬಂದು ಪಾದರಕ್ಷೆಯನ್ನು ಕದ್ದು ಸಿಕ್ಕಿಬಿದ್ದುದಾಗಿ' ತನ್ನ ತಪ್ಪನ್ನು ಒಪ್ಪಿಕೊಂಡ. ಮನೆಯಲ್ಲಿ ಬಡತನವಿದ್ದುದರಿಂದ ಇತರರು ತಿನ್ನುವ ತಿನಿಸನ್ನು ತಾನು ಪಡೆಯುವ ಉದ್ದೇಶದಿಂದ ಕದ್ದಾದರೂ ದೊರಕಿಸಿಕೊಳ್ಳುವ ದುರಾಸೆಯಿಂದ ಹೀಗೆ ಮಾಡಬೇಕಾಯಿತೆಂದು ಇರುವ ಸತ್ಯವನ್ನು ಹೇಳಿದನು. ಅದನ್ನು ಕೇಳಿ ಮೃದು ಹೃದಯದ ಸ್ವಾಮೀಜಿಯ ಕಣ್ಣಲ್ಲಿ ನೀರು ಬಂತು. ಅವನ ಬಡತನದ ಬದುಕನ್ನು ನೋಡಿ ಅವರ ಮನ ಕರಗಿತು. ನಂತರ ಆ ಬಾಲಕನನ್ನು ತಮ್ಮ ಮಠದಲ್ಲಿಯೇ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿಸಿ ಸಮಾಜದಲ್ಲಿ ಅವನೊಬ್ಬ ಒಳ್ಳೆಯ ವ್ಯಕ್ತಿಯಾಗಿ ಬಾಳಲು ಅನುವುಮಾಡಿಕೊಟ್ಟರು. ಅದೇ ರೀತಿ ಇನ್ನೊಮ್ಮೆ, ನಡುರಾತ್ರಿ ಕಳ್ಳರು ಮಠದೊಳಗೆ ಪ್ರವೇಶಿಸಿ ಹಸುವೊಂದನ್ನು ಕದ್ದೊಯ್ಯಲು ಪ್ರಯತ್ನಿಸಿದಾಗಲೂ ಹಸು ಕೂಗುವ ಧ್ವನಿಯನ್ನು ಆಲಿಸಿ ಹೊರ ಬಂದ ಸ್ವಾಮಿಗಳು, 'ಬರ್ರೆಪಾ, ಬರ್ರಿ, ನಿಮಗೆ ಏನು ಬೇಕು ಹೇಳ್ರಿ, ನಾ ಕೊಡ್ತೀನಿ, ದಯಮಾಡಿ ಓಡಬ್ಯಾಡಿ' ಎಂದು ಓಡಿಹೊಗುತ್ತಿದ್ದ ಕಳ್ಳರನ್ನು ಕರೆದರು. ಪಾತ್ರೆಗಳನ್ನು ಕದಿಯಲು ಬಂದ ಕಳ್ಳನೊಬ್ಬನಿಗೆ ತಮ್ಮ ಮಠದಲ್ಲಿಯೇ ಕೆಲಸ ನೀಡಿ, ಕೊನೆಯವರೆಗೂ ಅವನನ್ನು ತಮ್ಮ ಮಠದಲ್ಲಿಟ್ಟುಕೊಂಡಿದ್ದರು. ಅವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ತಪ್ಪು ಮಾರ್ಗದಲ್ಲಿ ನಡೆಯುವ ವ್ಯಕ್ತಿಯನ್ನು ಸರಿದಾರಿಗೆ ತರುವುದೇ ಸಾಮಾಜಿಕ ಪರಿವರ್ತನೆ ಎಂದು ತಿಳಿದಿದ್ದರು. ಅವರ ಪ್ರಕಾರ ಬೇಡದೇ ಬಂದುದು ಲಿಂಗಾರ್ಪಿತ, ಬೇಡಿ ತಂದಿದ್ದು ಅಂಗಾರ್ಪಿತ! ಪ್ರಚಾರದ ಆಡಂಬರವಿಲ್ಲದೆ, ಸದ್ದಿಲ್ಲದೆ ಕಾರ್ಯಗೈಯುವ ಮಹಾನ್ ಕರ್ಮಯೋಗಿ ಅವರಾಗಿದ್ದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com