ಮತ್ತೂರು ಕೃಷ್ಣಮೂರ್ತಿಯವರು ಭಾರತೀಯ ವಿದ್ಯಾಭವನದ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದರು. ಲಂಡನ್ನಿನ ಭಾರತೀಯ ವಿದ್ಯಾಭವನದ ನಿರ್ಮಾಣದಲ್ಲಿ ಅವರ ಪಾತ್ರ ಹಿರಿದು. ಬೆಂಗಳೂರಿನ ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿ ಅವರ ಸೇವೆ ಅನುಪಮವಾದುದು. ಅನೇಕ ಮೌಲಿಕ ಕೃತಿಗಳ ಮೂಲಕ ಮತ್ತು ದೂರದರ್ಶನದಲ್ಲಿ ವ್ಯಾಖ್ಯಾನಕಾರರಾಗಿ ಎಲ್ಲರಿಗೂ ಚಿರಪರಿಚಿತರಾದವರು. ಕೃಷ್ಣ ಜನ್ಮಾಷ್ಠಮಿಯಂದು ಜನಿಸಿ, 82 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ, ವಿಜಯದಶಮಿಯಂದು ನಮ್ಮನ್ನಗಲಿದ ಕೃಷ್ಣಮೂರ್ತಿ ಜನನ ಮತ್ತು ಸಾವಿನಲ್ಲಿ ಕೂಡ ವಿಶೇಷತೆಯನ್ನು ಮೆರೆದವರು. ತಮ್ಮ ಯಶಸ್ಸಿಗೆ ತಮಗಿದ್ದ ಬಡತನವೇ ಮೂಲಕಾರಣ ಎಂದು ಆಗಾಗ ಹೇಳುತ್ತಿದ್ದರು.
ಅವರಿಗೆ ಗಾಂಧೀಜಿಯ ಬಗ್ಗೆ ಅಪಾರ ಭಕ್ತಿ ಮತ್ತು ಗೌರವ. ಅವರು 13 ವರ್ಷದವರಿದ್ದಾಗ ಮದ್ರಾಸಿಗೆ ಮಹಾತ್ಮ ಗಾಂಧಿಯವರು ಭೇಟಿ ನೀಡುವ ಕಾರ್ಯಕ್ರಮವಿತ್ತು. ಅದಕ್ಕಾಗಿ ಹಿಂದಿ ತಿಳಿದಿರುವ ಸ್ವಯಂ ಸೇವಕರನ್ನು ನೇಮಿಸಲು ತಯಾರಿ ನಡೆದಿತ್ತು. ಆಗ ಮತ್ತೂರು ಕೃಷ್ಣಮೂರ್ತಿ ಅಲ್ಲಿಯೇ ಇದ್ದರು. ಗಾಂಧೀಜಿಯವರನ್ನು ಸಮೀಪದಿಂದ ನೋಡಬಹುದೆಂಬ ಆಸೆಯಿಂದ ಬಾಪೂ ಕಾರ್ಯದರ್ಶಿಗಳನ್ನು ಸಂಪರ್ಕಿಸಿದಾಗ ಹಿಂದಿ ಭಾಷೆಯ ಜ್ಞಾನವಿಲ್ಲದ ಅವರನ್ನು ಸ್ವಯಂ ಸೇವಕರನ್ನಾಗಿ ನೇಮಕ ಮಾಡಿಕೊಳ್ಳಲು ನಿರಾಕರಿಸಿದರು. ನಂತರ ಒಬ್ಬ ಹಿಂದಿ ಅಧ್ಯಾಪಕಿಯನ್ನು ಕಾಡಿ ಬೇಡಿ ಕೇಳಿಕೊಂಡಾಗ ಆಕೆ ಒಲ್ಲದ ಮನಸ್ಸಿನಿಂದ ಐದು ಪುಸ್ತಕಗಳನ್ನು ನೀಡಿದರು. ಅವು ವರ್ಣಮಾಲೆಯಿಂದ ಹಿಡಿದು ಪ್ರಬಂಧ ಬರೆಯುವ ಮಟ್ಟಿಗೆ ಕಲಿಯುವಂತಹದು. ಮತ್ತೂರ್ಜಿ ಅವುಗಳನ್ನು ಕೇವಲ ಮೂರೇ ದಿನಗಳಲ್ಲಿ ಬಾಯಿಪಾಠ ಮಾಡಿ ಒಪ್ಪಿಸಿದಾಗ ಆ ಶಿಕ್ಷಕಿಗೆ ಆಶ್ಚರ್ಯ. ನಂತರ ಬಾಪೂ ಕಾರ್ಯದರ್ಶಿಗಳ ಎದುರು ನಿಂತು ತಮ್ಮ ಹಿಂದಿ ಜ್ಞಾನವನ್ನು ತೋರಿಸಿದಾಗ 'ಮೂರು ದಿನಗಳ ಹಿಂದೆ ತಮ್ಮನ್ನು ಭೇಟಿ ಮಾಡಿದ ಹಿಂದಿ ಬಾರದ ಹುಡುಗ ಇವನೇನಾ?' ಎಂಬ ಅಚ್ಚರಿ ಅವರಿಗೆ. ನಂತರ ಅವರನ್ನು ಸ್ವಯಂ ಸೇವಕರನ್ನಾಗಿ ನೇಮಿಸಿಕೊಳ್ಳಲಾಯಿತು. ಮತ್ತೊಮ್ಮೆ 'ಇಂಡಿಯಾ ಟುಡೇ' ಮಾಲೀಕರಾದ ಅರುಣ್ ಪುರಿಯವರ ಸಹೋದರಿ ಕೌಸಲ್ಯಪುರಿ ಮತ್ತೂರರನ್ನು ಲಂಡನ್ನಿನ ಎಪ್ಸಾಂ ಕುದುರೆ ರೇಸ್ಗೆ ಕರೆದೊಯ್ದು ಯಾವ ಕುದುರೆ ಗೆಲ್ಲುತ್ತದೆಂದು ಹೇಳಿದರೆ ಐದುಸಾವಿರ ಪೌಂಡ್ ಹಣವನ್ನು ಭಾರತೀಯ ವಿದ್ಯಾಭವನಕ್ಕೆ ಕೊಡುಗೆಯಾಗಿ ನೀಡುವುದಾಗಿ ಹೇಳಿದರು. ಕುದುರೆ ಜೂಜಿನ ಬಗ್ಗೆ ಏನೊಂದೂ ತಿಳಿಯದ ಮತ್ತೂರರು ಈ ರೀತಿ ಜೂಜಿನಂತಹ ಅನ್ಯಾಯದಿಂದ ದೊರೆತ ಹಣದಿಂದ ಭಾರತೀಯ ವಿದ್ಯಾಭವನ ಕಟ್ಟುವ ಆಸೆ ತಮಗಿಲ್ಲವೆಂದು ಪುರಿಯವರಿಗೆ ಸ್ಪಷ್ಟವಾಗಿ ತಿಳಿಸಿದರು. ಅವರ ಮನೋಭಾವವನ್ನು ಮೆಚ್ಚಿ ಅರುಣ್ ಪುರಿಯವರು ಮರುಮಾತನಾಡದೆ ಐದುಸಾವಿರ ಪೌಂಡ್ಗಳನ್ನು ಭಾರತೀಯ ವಿದ್ಯಾಭವನಕ್ಕೆ ನೀಡಿ ಮತ್ತೂರರ ದೃಢ ನಿಲುವಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com