ಸಂಪತ್ತನ್ನು ಒಲ್ಲದ ಸರಳ ಜೀವಿ

Updated on: 

ಭಾರತದ ಇತಿಹಾಸದಲ್ಲಿ ಆಳಿದ ರಾಣಿಯರಲ್ಲಿ ಮೊದಲ ಪಂಕ್ತಿಗೆ ಸೇರಿದ ರಾಣಿಯೆಂದರೆ, ಅಹಲ್ಯಾಬಾಯಿ ಹೋಳ್ಕರ್. ಯಾವ ರಾಜರಿಗೂ ಸರಿಸಾಟಿಯಾಗದ ಉತ್ತಮ ಆಡಳಿತ ನೀಡಿ ಮನೆಮಾತಾದವಳು. ತನ್ನ ಇಪ್ಪತ್ತೊಂಬತ್ತನೇ ವರ್ಷದಲ್ಲಿ ವಿಧವೆಯಾದ ಅಹಲ್ಯಾಬಾಯಿ ಸತಿ ಪದ್ಧತಿಯಂತೆ ಪ್ರಾಣ ತ್ಯಜಿಸಲು ಹೊರಟಾಗ ಅವಳ ಮಾವ ಮಲ್ಹಾರ್ ರಾವ್ ಹೋಳ್ಕರ್ ಅವಳನ್ನು ತಡೆದು ರಾಜ್ಯಾಡಳಿತ ನೋಡಿಕೊಳ್ಳಲು ನೇಮಿಸಿದನು. 1767 ರಿಂದ 1795 ರವರೆಗೆ ಆಳಿದ ಅಹಲ್ಯಾಬಾಯಿಯ ಆಡಳಿತ ಚಿರಸ್ಮರಣೀಯವಾಗಿದೆ. ಮಾಹೇಶ್ವರಿಯಲ್ಲಿ ಹೆಚ್ಚು ಕಾಲ ನೆಲೆಸಿ, ಅತಿ ಶ್ರೀಮಂತ ಸಾಮ್ರಾಜ್ಯದ ಅಧಿಪತಿಯಾದರೂ ಅತ್ಯಂತ ಸರಳ ಜೀವನ ನಡೆಸಿ, ತನ್ನ  ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಸರಳತೆ ಮತ್ತು ಪ್ರಜಾ ಪ್ರೀತಿಯಿಂದ ಎಲ್ಲರ ಪ್ರಶಂಸೆಗೆ ಪಾತ್ರಳಾಗಿದ್ದಳು. ಮಾಹೇಶ್ವರದಲ್ಲಿರುವ ಗೋದಾವರಿ ನದಿ ತೀರದಲ್ಲಿರುವ ರಾಣಿಯ ನಿವಾಸ ಅರಮನೆಯಂತೆ ವೈಭವೋಪೇತವಾಗಿರದೆ ಸರಳ ನಿವಾಸವಾಗಿದೆ. ಅವಳ ಪ್ರಕಾರ ಅಧಿಕಾರವೆಂಬುದು ದೇವರು ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದೇ ಆಗಿದೆ. ಒಮ್ಮೆ ಒಬ್ಬ ಶ್ರೀಮಂತ ವಿಧವೆ ತನ್ನ ಆಸ್ತಿ ಮತ್ತು ಅಪಾರ ಸಂಪತ್ತಿಗೆ ವಾರಸುದಾರನನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದಾಗ ಅಧಿಕಾರಿಗಳು ಅದಕ್ಕೆ ಅನುಮತಿ ನೀಡಲಿಲ್ಲ. ಆ ವಿಧವೆ ತನ್ನ ಆಸ್ತಿಯ ಒಂದಂಶವನ್ನು ಸರ್ಕಾರಕ್ಕೆ ನೀಡಿದರೆ ಮಾತ್ರ ದತ್ತು ತೆಗೆದುಕೊಳ್ಳಲು ಅನುಮತಿ ನೀಡುವುದಾಗಿ ತಿಳಿಸಿದರು. ಆಗ ಬೇರೆ ದಾರಿ ಕಾಣದೆ ಆ ವಿಧವೆ ಈ ವಿಷಯವನ್ನು ರಾಣಿಯ ಗಮನಕ್ಕೆ ತಂದು ತನಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿಕೊಂಡಳು. ಈ ವಿಷಯ ರಾಣಿಯ ದರ್ಬಾರಿನಲ್ಲಿ ಪ್ರಸ್ತಾಪವಾಗಿ ಅಲ್ಲಿ ನೆರೆದಿದ್ದ ಎಲ್ಲ ಅಧಿಕಾರಿಗಳೂ ದತ್ತು ತೆಗೆದುಕೊಳ್ಳಲು ಅನುಮತಿ ನೀಡಬಹುದೆಂದೂ, ಆದರೆ ಸರ್ಕಾರಕ್ಕೆ ಆ ವಿಧವೆಯ ಸಂಪತ್ತಿನಲ್ಲಿ ಕೆಲವಂಶವನ್ನು ಸಲ್ಲಿಸಬೇಕೆಂದು ಅಭಿಪ್ರಾಯಪಟ್ಟರು. ಆದರೆ ಅಹಲ್ಯಾಬಾಯಿ ಅವರ ಸಲಹೆಯನ್ನು ಒಪ್ಪದೆ, ವಿಧವೆಗೆ ಸ್ವಾಭಾವಿಕವಾಗಿ ಅವಳ ಗಂಡನ ಆಸ್ತಿಯ ಮೇಲೆ ಸಂಪೂರ್ಣ ಹಕ್ಕಿರುವುದರಿಂದ ಸರ್ಕಾರಕ್ಕೆ ಅದರಲ್ಲಿ ಭಾಗ ಪಡೆಯುವ ಯಾವ ಅಧಿಕಾರವಿಲ್ಲವೆಂದೂ, ಆ ವಿಧವೆ ತನ್ನಿಷ್ಟದಂತೆ ದತ್ತು ಪಡೆಯಬಹುದೆಂದೂ ಆದೇಶಿಸಿದಳು. ರಾಣಿಯ ನ್ಯಾಯ ತೀರ್ಮಾನದಿಂದ ಪ್ರಭಾವಿತಳಾದ ಆ ಮಹಿಳೆ ತನ್ನ ಎಲ್ಲ ಆಸ್ತಿ ಮತ್ತು ಸಮಸ್ತ ಸಂಪತ್ತನ್ನು ರಾಣಿಯೇ ವಹಿಸಿಕೊಂಡು ಅದನ್ನು ಜನೋಪಕಾರಿ ಕೆಲಸಗಳಿಗೆ ವಿನಿಯೋಗಿಸಬೇಕೆಂದೂ, ತಾನು ದತ್ತು ತೆಗೆದುಕೊಳ್ಳುವ ವಿಚಾರದಿಂದ ಹಿಂದೆ ಸರಿದಿರುವುದಾಗಿ ಮನವಿ ಮಾಡಿದಳು. ವಿಧವೆಯ ಮಾತನ್ನು ಕೇಳಿದ ಎಲ್ಲ ಸಭಾಸದರೂ ರಾಣಿಯನ್ನೊಳಗೊಂಡು ಆಶ್ಚರ್ಯ ಚಕಿತರಾದರು. ಆದರೆ ರಾಣಿಯು ವಿಧವೆಯ ಮನವಿಯನ್ನು ತಳ್ಳಿಹಾಕಿ, ಆ ಆಸ್ತಿಗೆ ಅವಳೇ ಒಡೆಯಳಾಗಿರುವುದರಿಂದ ಅದನ್ನು ಅವಳಿಷ್ಟ ಬಂದಂತೆ ಸದ್ವಿನಿಯೋಗ ಮಾಡಬಹುದೆಂದು ತಿಳಿಸಿದಳು. ವಿಧವೆಯು ರಾಣಿಯ ಮಾತುಗಳಿಂದ ಪ್ರಭಾವಿತಳಾಗಿ ತನ್ನ ಸಂಪತ್ತನ್ನು ಸಮಾಜೋಪಯೋಗಿ ಕಾರ್ಯಗಳಿಗೆ ಬಳಸಿ ಎಲ್ಲರ ಆದರಕ್ಕೆ ಪಾತ್ರಳಾದಳು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com