ಕೀನ್ಯಾ ದೇಶದ ನದಿಗಳು ಅಕಾಲಿಕ ಮತ್ತು ಶೀಘ್ರ ಪ್ರವಾಹದಿಂದಾಗಿ ಅನೇಕ ಅನಾಹುತಗಳಿಗೆ ಮತ್ತು ನಾಶಕ್ಕೆ ಎಡೆಮಾಡಿಕೊಡುತ್ತಿದ್ದವು. ಅಲ್ಲದೆ ಸಾಕಷ್ಟು ಸೇತುವೆಗಳಿಲ್ಲದೆ ಅನೇಕರು ನೆರೆಬಂದಾಗ ತಮ್ಮ ಜೀವಗಳನ್ನು ಕಳೆದುಕೊಂಡದ್ದೂ ಇದೆ. ಪ್ರವಾಹದ ಜೊತೆಗೆ ನದಿಯಲ್ಲಿರುವ ಭಯಂಕರ ಮೊಸಳೆಗಳು ಮತ್ತು ನೀರಾನೆಗಳಿಂದಾಗಿ ಅನೇಕ ಆದಿವಾಸಿಗಳು ನದಿ ದಾಟುವ ಪ್ರಯತ್ನದಲ್ಲಿ ಜೀವಕಳೆದುಕೊಳ್ಳುವ ಸ್ಥಿತಿ ಸಾಮಾನ್ಯವಾಗಿತ್ತು. ಅಲ್ಲಿ ಹರಿಯುವ ಮೊರುನಿ ನದಿಯಂತೂ ಆಗಾಗ್ಗೆ ಅಸಂಖ್ಯಾತ ಜನರ ಬಲಿ ತೆಗೆದುಕೊಳ್ಳುತ್ತಿತ್ತು. ಇದರಿಂದಾಗಿ ಅನೇಕರು ವಸ್ತುಶಃ ಅನಾಥರಾಗಿದ್ದರು. ಹೀಗೆ ತಂದೆ ತಾಯಿಯರನ್ನು ಪ್ರವಾಹದಲ್ಲಿ ಕಳೆದು ಕೊಂಡ ಡೇವಿಡ್ ಕಕೂಕೋ ಎಂಬ ವ್ಯಕ್ತಿ ಇದಕ್ಕೊಂದು ಪರಿಹಾರವನ್ನು ಕಂಡುಹಿಡಿಯಲೇಬೇಕೆಂದು ಪಣತೊಟ್ಟು, ಮೊರುನಿ ನದಿಗೆ ಕಾಲು ಸೇತುವೆಯೊಂದನ್ನು ಕಟ್ಟಲು ನೆರವಾದ. 1989ರಲ್ಲಿ ಕೀನ್ಯಾಕ್ಕೆ ಬಂದ ಹರ್ಮನ್ ಪಾರ್ಕರ್ ಎಂಬ ಕ್ರೈಸ್ತ ಪಾದ್ರಿಗೆ ಅಲ್ಲಿನ ಜನ ತಮ್ಮ ಕುಟುಂಬದ ಒಬ್ಬ ಸದಸ್ಯನನ್ನಾದರೂ ಆ ಪ್ರವಾಹದಲ್ಲಿ ಕಳೆದುಕೊಂಡಿದ್ದರ ಬಗ್ಗೆ ತಿಳಿದುಬಂತು. ಪ್ರವಾಹದ ವೇಳೆಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಜನ ಸಂಚರಿಸುವಂತಿರಲಿಲ್ಲ, ಮಕ್ಕಳು ಶಾಲೆಗೆ ಹೋಗಲಾಗುತ್ತಿರಲಿಲ್ಲ. ಮಾರುಕಟ್ಟೆಗಳು, ಅಂಗಡಿಗಳು ಮುಚ್ಚಿ ಹೋಗಿದ್ದವು. ವೈದ್ಯಕೀಯ ಚಿಕಿತ್ಸೆ ಕೊಡಿಸದೆ ಅನೇಕರು ಕೊನೆಯುಸಿರು ಎಳೆಯುವಂತಾಯಿತು. ಈ ಸಮಸ್ಯೆಯನ್ನು ಹೇಗಾದರೂ ಮಾಡಿ ಪರಿಹರಿಸಬೇಕೆಂದು ನಿರ್ಧರಿಸಿದ ಪಾರ್ಕರ್ ಕೊನೆಗೆ ನದಿಗಳಿಗೆ ಅಂಕುಶ ಹಾಕಲು ಸೇತುವೆಗಳನ್ನು ನಿರ್ಮಾಣ ಮಾಡುವ ನಿರ್ಧಾರ ಮಾಡಿದ. ಜೆ ಹಿಂಡ್ಸನ್ ಎಂಬ ಸಮಾಜ ಸೇವಕ ಪಾರ್ಕರ್ ಗೆಳೆಯನಾದ ಮತ್ತು ಆತನೂ ಸಹ ಕಾಲು ಸೇತುವೆಗಳ ನಿರ್ಮಾಣದ ಕುರಿತು ಅಗತ್ಯ ನೆರವನ್ನು ಪಾರ್ಕರ್ಗೆ ನೀಡಿದ. ಅಲ್ಲದೆ ಡೇವಿಡ್ ಕಕೂಕೊ ಸಹ ಇವನ ಕಾರ್ಯದಲ್ಲಿ ನೆರವಾದ. ಇದರ ಪರಿಣಾಮವಾಗಿ 1997ರಿಂದೀಚೆಗೆ ಅಲ್ಲಿ ನಲವತೈದು ತೂಗು ಸೇತುವೆಗಳನ್ನು ನಿರ್ಮಿಸಿದ ಕೀರ್ತಿ ಪಾರ್ಕರ್ಗೆ ಸೇರುತ್ತದೆ. ಅದಕ್ಕಾಗಿ 2003 ರಲ್ಲಿ ಆತ 'ಬ್ರಿಡ್ಜಿಂಗ್ ದಿ ಗ್ಯಾಪ್' ಎಂಬ ಸಂಸ್ಥೆಯನ್ನು ಸ್ಥಾಪಿಸಿದ. ಸರಳವಾದ ವಿಧಾನಗಳನ್ನು ಉಪಯೋಗಿಸಿ, ಸ್ಥಳೀಯರ ನೆರವಿನಿಂದ ಮತ್ತು ಸ್ಥಳೀಯವಾಗಿ ದೊರೆಯುವ ವಸ್ತುಗಳನ್ನೇ ಉಪಯೋಗಿಸಿ, ಕೇವಲ ಆರು ಸಾವಿರ ಡಾಲರಿನಲ್ಲಿ ಅಲ್ಲಲ್ಲಿ ಕಾಲು ಸೇತುವೆಗಳನ್ನು ನಿರ್ಮಿಸಿದ. ಹೀಗಾಗಿ ಕೀನ್ಯಾದಲ್ಲಿ ಅನೇಕ ಕಡೆ ಇಂತಹ ಸೇತುವೆಗಳು ಜನರ ಜೀವನ ಗತಿಯನ್ನೇ ಬದಲಾಯಿಸಿತು. ಈ ಪ್ರಕ್ರಿಯೆ ಅಷ್ಟು ಸುಲಭವಾಗಿರಲಿಲ್ಲ. ಅನೇಕ ಬಾರಿ ಪಾರ್ಕರ್ ಮಲೇರಿಯಾ ಮತ್ತು ಡೆಂಘೇ ಖಾಯಿಲೆಯಿಂದ ನರಳಬೇಕಾಯಿತು. ಕೆಲವು ಬಾರಿ ದರೋಡೆಕೋರರಿಂದಲೂ ದಾಳಿಗೊಳಗಾದ. ಏನೇ ಆದರೂ ಅವನು ಮಾತ್ರ ತನ್ನ ಕಾರ್ಯದಿಂದ ವಿಮುಖನಾಗಲಿಲ್ಲ. 'ನನಗೆ ಪರಿಚಯವಿಲ್ಲದ ಅನೇಕ ಜೀವಗಳನ್ನು ರಕ್ಷಿಸಿದ್ದೇನೆ. ನನ್ನ ಈ ಸೇತುವೆಗಳು ಕನಿಷ್ಠ ಕುಟುಂಬದ ಒಬ್ಬ ಸದಸ್ಯನ ಜೀವವನ್ನಾದರೂ ಉಳಿಸಿದ ತೃಪ್ತಿ ನೀಡಿವೆ. ಇಂತಹ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಪರಮಾತ್ಮನಿಗೆ ನಾನು ಕೃತಜ್ಞ' ಎಂದಾತ ಆಗಾಗ ಹೇಳುತ್ತಿರುತ್ತಾನೆ. ಹೀಗೆ ಪ್ರತಿಫಲಾಪೇಕ್ಷೆಯಿಲ್ಲದೆ, ಸರ್ಕಾರದ ನೆರವಿಲ್ಲದೆ ಕೀನ್ಯಾದ ಸಾಮಾನ್ಯ ಜನರ ಬದುಕನ್ನು ರೂಪಿಸುತ್ತಿರುವ ಹರ್ಮನ್ ಪಾರ್ಕರ್ ಎಲ್ಲರ ಗೌರವಾದರಗಳಿಗೆ ಪಾತ್ರನಾಗಿದ್ದಾನೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com