ದಶರಥ್ ಮಂಜಿ ಅಂತಿಂಥವನಲ್ಲ

Updated on: 

ಗಹ್ಲೋರ್ ಎಂಬುದು ಬಿಹಾರದ ಗಯಾ ಬಳಿ ಇರುವ ಒಂದು ಕುಗ್ರಾಮ. ಅಲ್ಲಿ ಕುಡಿಯುವ ನೀರಿಗೂ ತತ್ವಾರ. ಒಂದು ಕೊಡ ನೀರು ತರಲು ಆ ಹಳ್ಳಿಯ ಅಂಚಿನಲ್ಲಿದ್ದ ಪರ್ವತದಾಚೆ ನಡೆದು ಹೋಗಿ ಅಲ್ಲಿರುವ ನದಿಯಿಂದ ನೀರು ತರಲು ಕನಿಷ್ಟ ಅರ್ಧ ದಿನ ವ್ಯಯಮಾಡಬೇಕಾಗಿತ್ತು. ಇದು ಅಲ್ಲಿನ ಮಹಿಳೆಯರಿಗೆ ಪ್ರಯಾಸದ ಕೆಲಸವೇ ಆಗಿತ್ತು. ಒಮ್ಮೆ ನೀರು ತರಲು ಹೋಗಿದ್ದ ದಶರಥ್ ಮಂಜಿ ಎಂಬ ಗ್ರಾಮಸ್ಥನ ಪತ್ನಿ ತುಂಬಾ ತಡವಾಗಿ ಅದೂ ಬರೀಕೈನಲ್ಲಿ ಬಂದಾಗ ದಶರಥನಿಗೆ ತುಂಬಾ ಕೋಪಬಂತು. 'ಬಾಯಾರಿಕೆಯಿಂದ ಬಳಲುತ್ತಿದ್ದೇನೆ. ನೀರು ತರಲಾಗದೇ?' ಎಂದು ಪತ್ನಿಯನ್ನು ನಿಂದಿಸಿದಾಗ ಆಕೆ ಕಣ್ಣಲ್ಲಿ ನೀರು ತುಂಬಿಕೊಂಡು, 'ನಾನೇನು ಮಾಡಲಿ, ನೀರು ತರುವಾಗ ಇನ್ನೇನು ಮನೆ ಸಮೀಪಿಸುತ್ತಿದೆ ಎನ್ನುವಷ್ಟರಲ್ಲಿ ಎಡವಿ ಬಿದ್ದು ಬಿಂದಿಗೆ ಒಡೆದು ಹೋಯಿತು.'
ತನ್ನ ಪತ್ನಿಯ ಪರಿಸ್ಥಿತಿ, ಅಸಹಾಯಕತೆಯನ್ನು ನೋಡಿ ದಶರಥನ ಮನ ಕಲಕಿತು. ನದಿಯ ಬಳಿ ಹೋಗಲು ಅಡ್ಡಿಯಾಗಿರುವ ಬೆಟ್ಟವನ್ನೇ ಕೊರೆದು ರಸ್ತೆ ನಿರ್ಮಿಸಿದರೆ ಹೇಗೆ ಎಂಬ ಆಲೋಚನೆ ಮನದಲ್ಲಿ ಮೂಡಿತು. ತನಗೆ ತಾನೇ ಹೇಳಿಕೊಂಡ, 'ಹೌದು ನಾನಿದನ್ನು ಮಾಡಲೇ ಬೇಕು'.
ಆದರೆ ಅವನು ಅಂದುಕೊಂಡಂತೆ ಆ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ಆದರೂ ಅವನು ಛಲದಿಂದ ಒಂದು ಸುತ್ತಿಗೆ, ಕಬ್ಬಿಣದ ಉಳಿ ಮತ್ತು ದೊಡ್ಡ ಮೊಳೆಯನ್ನುಪಯೋಗಿಸಿ, ಬೆಟ್ಟ ಕೊರೆಯಲು ಹೊರಟೇ ಬಿಟ್ಟ. ಆತನ  ಹುಚ್ಚು ಸಾಹಸಕ್ಕೆ ಎಲ್ಲರೂ ಪರಿಹಾಸ್ಯ ಮಾಡಿದರು. ಅವನ ಪತ್ನಿ ಮತ್ತು ಬಂಧುಗಳೂ ಸಹ ಇವನ ಕಾರ್ಯಕ್ಕೆ ಸಮ್ಮತಿಸಲಿಲ್ಲ. ತನ್ನ ಗುಡಿಸಲನ್ನು ಬೆಟ್ಟದ ಬುಡಕ್ಕೇ ಬದಲಾಯಿಸಿ, ಹಗಲು ರಾತ್ರಿಯೆನ್ನದೆ ಒಬ್ಬನೇ ಈ ಕಾರ್ಯದಲ್ಲಿ ಮುಳುಗಿಹೋದ. ಊಟ- ನಿದ್ದೆ ಸಹ ಅವನಿಗೆ ಬೇಡವಾದವು. ಹೀಗೆ ಸತತ ಹತ್ತು ವರ್ಷಗಳ ಕಠಿಣ ಪರಿಶ್ರಮದಿಂದ ಅವನು ಕೊರೆಯುತ್ತಿದ್ದ ಸುರಂಗಕ್ಕೆ ಒಂದು ಆಕಾರ ಬಂದಾಗ ಹುಚ್ಚನೆಂದು ಕರೆದವರೇ ಅವನಿಗೆ ನೆರವು ನೀಡಲು ಪ್ರಾರಂಭಿಸಿದರು. ಅಂತೂ 22 ವರ್ಷಗಳ ನಂತರ 360 ಅಡಿ ಉದ್ದದ, 30 ಅಡಿ ಅಗಲದ, 25 ಅಡಿ ಎತ್ತರದ ಸುರಂಗ ಮಾರ್ಗ ನಿರ್ಮಾಣವಾಗಿತ್ತು. ಅರ್ಧದಿನ ನಡೆದು ಹೋಗುವ ಈ ಮಾರ್ಗದಲ್ಲೀಗ ಅರ್ಧ ಗಂಟೆ ಸಾಕಾಗಿತ್ತು.
ಎಲ್ಲರೂ ದಶರಥನ ಸಾಹಸವನ್ನು ಕೊಂಡಾಡುವವರೇ. ಆದರೆ ದಶರಥ್ ಮಾತ್ರ ದುಃಖಿತನಾಗಿದ್ದ, ಏಕೆಂದರೆ ಈ ಹಾದಿಯ ನಿರ್ಮಾಣಕ್ಕೆ ಸ್ಫೂರ್ತಿ ನಿಡಿದ್ದ ಆತನ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಆದರೂ  ಗ್ರಾಮದ ಇತರ ಮಹಿಳೆಯರು ತನ್ನ ಪತ್ನಿಯಂತೆ ಇನ್ನು ಮುಂದೆ ಕಷ್ಟ ಪಡಬೇಕಿಲ್ಲ ಎಂಬ ಸಮಾಧಾನವಾಯಿತು. ಬಿಹಾರ ಸರ್ಕಾರ ಅವನು ಮಾಡಿದ ಸಮಾಜ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿತು. ಅಲ್ಲದೆ ಅವನ ಸೇವೆಯನ್ನು ಮೆಚ್ಚಿ ಸರ್ಕಾರ ಅವನಿಗೆ ಐದು ಎಕರೆ ಭೂಮಿಯನ್ನು ನೀಡಿತಾದರೂ ಅದನ್ನು ಆಸ್ಪತ್ರೆ ನಿರ್ಮಿಸಲು ದಾನ ಮಾಡಿದ. ಅಲ್ಲಿ ಅವನ ಹೆಸರಿನ ಒಂದು ಸರ್ಕಾರಿ ಆಸ್ಪತ್ರೆ ತಲೆಎತ್ತಿದೆ. ಒಮ್ಮೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಲು ಹೋದಾಗ ನಿತೀಶ್ ಎದ್ದು ನಿಂತು ಗೌರವ ತೋರಿಸಿದ್ದಲ್ಲದೆ, ಸ್ವತಃ ತಮ್ಮ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂಡಿಸಿ ಗೌರವ ಸೂಚಿಸಿದ್ದರು. 2007ರಲ್ಲಿ ಮಂಜಿ ಅನಾರೋಗ್ಯದಿಂದ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಾಗ ಬಿಹಾರ ಸರ್ಕಾರ ಆತ ನಿರ್ಮಿಸಿದ ರಸ್ತೆಗೆ ಆತನ ಹೆಸರನ್ನೇ ಇಟ್ಟಿತು.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com