ಸಿ.ಎ ಆಗ ಹೊರಟವನು ಸಂಗೀತಗಾರನಾದ

ವಸಂತರಾವ್ ದೇಶಪಾಂಡೆ ಪ್ರಸಿದ್ಧ ಸಂಗೀತಗಾರರಾಗಿದ್ದವರು. ಕುಮಾರ ಗಂಧರ್ವರನ್ನು ಅವರು ತಮ್ಮ ಗುರುಗಳೆಂದೇ ಭಾವಿಸಿದ್ದರು...
Updated on: 

ವಸಂತರಾವ್ ದೇಶಪಾಂಡೆ ಪ್ರಸಿದ್ಧ ಸಂಗೀತಗಾರರಾಗಿದ್ದವರು. ಕುಮಾರ ಗಂಧರ್ವರನ್ನು ಅವರು ತಮ್ಮ ಗುರುಗಳೆಂದೇ ಭಾವಿಸಿದ್ದರು. ಅವರ ಮೊಮ್ಮಗ ರಾಹುಲ್ ದೇಶಪಾಂಡೆ ಸಹ ತನ್ನಂತೆ ಸಂಗೀತಗಾರನಾಗಬೇಕೆಂಬ ಆಸೆ ಅಜ್ಜನದು. ಆದರೆ ರಾಹುಲ್ಗೆ ತಾನು ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಬಯಕೆ. ಹೀಗಾಗಿ ಅವರು ಸಿ.ಎ. ಪರೀಕ್ಷೆಗಾಗಿ ಓದುತ್ತಿದ್ದರು. ಕುಮಾರ ಗಂಧರ್ವರು ಕಾಲವಾದ ನಂತರ ಒಂದು ದಿನ ರಾಹುಲ್ ಕಾಲ ಕಳೆಯಲು ಕುಮಾರ ಗಂಧರ್ವರ ಭಜನೆಯ ಕ್ಯಾಸೆಟ್ ಹಾಕಿಕೊಂಡು ಕೇಳುತ್ತಿದ್ದ. ಸಂಗೀತದ ಬಗ್ಗೆ ಅಷ್ಟೇನೂ ಆಸಕ್ತಿಯಿಲ್ಲದ ಆತ ಕುಮಾರರ ಧ್ವನಿಗೆ ಮಾರುಹೋದ. ಕೇವಲ ಒಂದೇ ದಿನದಲ್ಲಿ ಗಂಧರ್ವರ ಎಲ್ಲ ಭಜನೆಗಳನ್ನೂ ಕಲಿತು ಅದೇ ರೀತಿ ಹಾಡ ತೊಡಗಿದಾಗ ಎಲ್ಲರಿಗೂ ಆಶ್ಚರ್ಯ. ಆದರೂ ಸಂಗೀತಗಾರನಾಗುವ ಬದಲು ಒಬ್ಬ ಸಿ.ಎ. ಆಗಬೇಕೆಂಬ ಬಯಕೆ ಉತ್ಕಟವಾಗಿದ್ದುದರಿಂದ ಓದಲು ತೊಡಗಿದ.
ರಾಹುಲ್ ದೇಶಪಾಂಡೆ ಒಮ್ಮೆ ಅನಾರೋಗ್ಯದಿಂದ ಕೊನೆ ದಿನಗಳನ್ನೆಣಿಸುತ್ತಿದ್ದ ಪ್ರಸಿದ್ಧ ಮರಾಠಿ ಲೇಖಕ ಫು.ಲ.ದೇಶಪಾಂಡೆಯವರನ್ನು ಕಾಣಲು ಹೋಗಿದ್ದ. ವಿಶ್ವಾಸದಿಂದ ಮಾತನಾಡಿಸಿದ ಫು.ಲ.ದೇಶಪಾಂಡೆಯವರು ರಾಹುಲನ ಮುಂದಿನ ಗುರಿಯೇನು ಎಂದು ಪ್ರಶ್ನಿಸಿದರು. ಅದಕ್ಕೆ ರಾಹುಲ್ ತನ್ನ ಬಯಕೆಯನ್ನೂ, ಅದಕ್ಕಾಗಿ ತುಂಬಾ ಶ್ರಮವಹಿಸಿ ಓದುತ್ತಿರುವ ವಿಷಯವನ್ನೂ ತಿಳಿಸಿದ. ಅದನ್ನು ಕೇಳಿ ಫು.ಲ. ಅವರು ಹೇಳಿದರು, 'ಮುಂಬೈಯ ಬಹುತೇಕ ಮನೆಯ ಎದುರಿನ ನಾಮಫಲಕಗಳಲ್ಲಿ ಡಾಕ್ಟರು, ಇಂಜಿನಿಯರ್, ಅಕೌಂಟೆಂಟ್  ಎಂಬ ಹೆಸರು ಇರುತ್ತದೆಯೇ ಹೊರತು ಗಾಯಕನೆಂಬ ನಾಮಫಲಕ ಗೋಚರಿಸುವುದಿಲ್ಲ. ಆದ್ದರಿಂದ ಸಂಗೀತಾಭ್ಯಾಸ ಮಾಡಿ ಖ್ಯಾತ ಸಂಗೀತಗಾರ ಎಂಬ ನಾಮಫಲಕನ್ನು ಮನೆಯ ಮುಂದೆ ಹಾಕಿಕೊಂಡು ವಸಂತರಾವ್ ದೇಶಪಾಂಡೆಯವರ ಹೆಸರನ್ನುಳಿಸುವ ಕೆಲಸ ಮಾಡು' ಎಂದು ಕೇಳಿಕೊಂಡರು. ಅವರ ಮಾತಿಗೆ ರಾಹುಲ್ ತಲೆಯಾಡಿಸಿದರು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅಷ್ಟಕ್ಕೇ ಸುಮ್ಮನಾಗದ ಫು.ಲ.ದೇಶಪಾಂಡೆಯವರು ತಮ್ಮ ಡೈರಿಯನ್ನು ತರಿಸಿ ಅದರಲ್ಲಿ ರಾಹುಲ್ ದೇಶಪಾಂಡೆಯಿಂದ ತಾನು ಸಂಗೀತಗಾರನಾಗುತ್ತೇನೆಂದು ಬರೆಸಿ ಅದಕ್ಕೆ ಸಹಿಯನ್ನೂ ಪಡೆದರು. ಸಹಿ ಮಾಡಿದ್ದರಿಂದ ವಚನ ನೀಡಿದಂತಾಯಿತು ಅದನ್ನು ಪರಿಪಾಲಿಸಬೇಕು ಎಂದು ತಾಕೀತು ಮಾಡಿದರು. ಮುಂದೆ ರಾಹುಲ್ ದೇಶಪಾಂಡೆ ತಮ್ಮ ಕನಸಿನ ಸಿ.ಎ.ಮಾಡುವುದನ್ನು ಬಿಟ್ಟು ಸಂಗೀತ ಕಲಿಯುವುದರ ಬಗ್ಗೆ ಆಸ್ಥೆ ವಹಿಸಿದರು. ತುಂಬಾ ಶ್ರದ್ಧೆಯಿಂದ ಸಂಗೀತ ಕಲಿತು ಪ್ರಸಿದ್ಧ ಸಂಗೀತಗಾರರೆನಿಸಿಕೊಂಡರು. ಹೀಗಾಗಿ ಅವರಿಂದು ವಿಶ್ವ ಪ್ರಸಿದ್ಧ ಸಂಗೀತಗಾರರಾಗಿ ದೇಶವಿದೇಶಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿ ಎಲ್ಲ ಕಲಾರಸಿಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಫು.ಲ.ದೇಶಪಾಂಡೆಯವರ ಮುಂದಾಲೋಚನೆಯಿಂದ ಮತ್ತು ಒತ್ತಾಸೆಯಿಂದ ನಾಡಿಗೆ ಒಬ್ಬ ಪ್ರತಿಭಾವಂತ ಸಿಕ್ಕರು.



 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com