ನನ್ನದಲ್ಲದ ಆಹಾರ ನಾನೊಲ್ಲೆ

Updated on: 

ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಬಿಸಿಯೇರುತ್ತಿದ್ದ ಸಮಯ. 1920ನೇ ಇಸವಿಯಲ್ಲಿ ದೇಶಾದ್ಯಂತ ಅಸಹಕಾರ ಚಳವಳಿಗೆ ಗಾಂಧೀಜಿ ಕರೆನೀಡಿದ್ದರು. ಎಲ್ಲೆಲ್ಲೂ ಮಹಾತ್ಮ ಗಾಂಧಿಯವರ ಕರೆಯ ಮೇರೆಗೆ ಕರನಿರಾಕರಣೆ ಸತ್ಯಾಗ್ರಹ ನಡೆಯುತ್ತಿತ್ತು. ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಸಹಸ್ರ ಸಹಸ್ರ ಸತ್ಯಾಗ್ರಹಿಗಳಲ್ಲಿ ಮಹಿಳೆಯರ ಪಾಲೂ ಗಣನೀಯವಾಗಿತ್ತು. ಅಂತಹ ಮಹಿಳೆಯರಲ್ಲಿ ಗೌರಮ್ಮ ಎಂಬ ಮಹಿಳೆ ಅವರ ಪಾತ್ರ ಮಹತ್ವದ್ದು. ಅವರು ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವೆಂಕಟರಾಮಯ್ಯ ಅವರ ಪತ್ನಿ. ಅಂದು ನಡೆಯುತ್ತಿದ್ದ ಸತ್ಯಾಗ್ರಹಗಳಲ್ಲಿ ಮಹಿಳೆಯರನ್ನು ಸಂಘಟಿಸಿ ನಾಯಕತ್ವ ವಹಿಸುತ್ತಿದ್ದ ಗೌರಮ್ಮನವರ ದೇಶಪ್ರೇಮವನ್ನು ಪತ್ರಿಕೆಗಳು ವರದಿಮಾಡುತ್ತಿದ್ದವು.
ಕರನಿರಾಕರಣೆಯ ಚಳವಳಿಗೆ ಬೆಂಬಲಿಸುವ ಜನರ ದನಕರುಗಳನ್ನು, ಮೇಕೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಅವನ್ನು ಹರಾಜು ಹಾಕುತ್ತಿದ್ದರು. ಆದರೆ ಹರಾಜಿನಲ್ಲಿ ಯಾರೂ ಭಾಗವಹಿಸದೇ ಇದ್ದಾಗ ಅಧಿಕಾರಿಗಳು ಕೆಲವು ದುರಾಸೆಯುಳ್ಳ ವ್ಯಕ್ತಿಗಳಿಗೆ ಉತ್ತೇಜನ ನೀಡಿ ಅವರು ಹರಾಜಿನಲ್ಲಿ ಈ ಪ್ರಾಣಿಗಳನ್ನು ಕೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಗೌರಮ್ಮನವರು ಅಂತಹ ವ್ಯಕ್ತಿಗಳ ಮನೆಯೆದುರು ಸತ್ಯಾಗ್ರಹ ಮಾಡಿ ಅವರು ಕೊಂಡದನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸುವಂತೆ ಮಾಡುತ್ತಿದ್ದರು. ಒಂದು ಬಾರಿ ಅಕ್ಕುಂಜಿಯ ಪಟೇಲ್ ಮಹದೇವಪ್ಪ ಗೌಡ ಎಂಬುವವರು ಇದೇ ರೀತಿಯ ಹರಾಜಿನಲ್ಲಿ ಭಾಗವಹಿಸಿ ಎತ್ತುಗಳನ್ನು ಕೊಂಡರು. ಅಲ್ಲಿಗೂ ಗೌರಮ್ಮನವರ ತಂಡ ಹೋಗಿ ಮನೆಯ ಎದುರು ಸತ್ಯಾಗ್ರಹ ಪ್ರಾರಂಭಿಸಿತು. ಪಟೇಲನ ದೂರಿನ ಮೇಲೆ ಗೌರಮ್ಮ ಮತ್ತಿತರ ಸತ್ಯಾಗ್ರಹಿಗಳನ್ನು ಪೊಲೀಸರು ಬಂಧಿಸಿ ಸೆರಮನೆಗೆ ಒಯ್ದರು. ಚಿತ್ರಹಿಂಸೆ ನೀಡಿ, ಸರಿಯಾಗಿ ಆಹಾರ ನೀಡದೆ ಸತಾಯಿಸಿದಾಗ ತಮ್ಮನ್ನು ಕೂಡಲೇ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಬೇಕೆಂದು ಜೈಲಿನಲ್ಲಿಯೇ ಸತ್ಯಾಗ್ರಹ ಪ್ರಾರಂಭಿಸಿಬಿಟ್ಟರು. ಗೌರಮ್ಮನವರಿಗೆ ಆರು ತಿಂಗಳ ಕಠಿಣ ಶಿಕ್ಷೆ ನೀಡಲಾಯ್ತು. ಗೌರಮ್ಮನವರಿದ್ದ ಜೈಲಿನಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಎ-ಕ್ಲಾಸ್ ಕೈದಿಯಾಗಿದ್ದರು. ಅವರಿಗೆ ಬ್ರೆಡ್ಡು, ಬೆಣ್ಣೆ, ಸಕ್ಕರೆ ಇತ್ಯಾದಿ ಒಳ್ಳೆಯ ಆಹಾರ ನೀಡುತ್ತಿದ್ದರು. ಗೌರಮ್ಮನವರಿಗೆ ಈ ಸೌಲಭ್ಯ ಇಲ್ಲದಿದ್ದುದರಿಂದ ಅವರು ದಿನದಿಂದ ದಿನಕ್ಕೆ ದುರ್ಬಲರಾಗುತ್ತಿದ್ದರು. ಇದನ್ನು ಮನಗಂಡು ಕಮಲಾದೇವಿ ಗೌರಮ್ಮನವರ ಬಳಿ ಬಂದು ತಮಗೆ ನೀಡುತ್ತಿದ್ದ ಆಹಾರವನ್ನು ತೆಗೆದುಕೊಳ್ಳುವಂತೆ ವಿನಂತಿಸಿದರು. ಆದರೆ ಸ್ವಾಭಿಮಾನಿಯಾದ ಗೌರಮ್ಮ ನನ್ನದಲ್ಲದ ಆಹಾರವನ್ನು ನಾನು ಸೇವಿಸಲಾರೆ ಎಂದು ತಿರಸ್ಕರಿಸಿದರು. ಅವರು 1932ರಲ್ಲಿ ಜೈಲಿನಿಂದ ಬಿಡುಗಡೆಯಾದ ಮರುಕ್ಷಣ ಉತ್ತರಕನ್ನಡ ಜಿಲ್ಲೆಯಲ್ಲಿ ಸತ್ಯಾಗ್ರಹ ಮಾಡಲು ತೆರಳಿದರು. ಹೀಗೆ ಕೊನೆಯವರೆಗೂ ಸಮಾಜಸೇವೆ ಮಾಡುತ್ತಾ ನೂರಾರು ಮಹಿಳೆಯರನ್ನು ಸ್ವಾತಂತ್ರ್ಯ ಚಳವಳಿಗಳಲ್ಲಿ ಭಾಗವಹಿಸುವಂತೆ ಪ್ರಚೋದಿಸಿದ ಧೀರ ಮಹಿಳೆ ಅವರು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com