ನಿಜಲಿಂಗಪ್ಪನವರ ದೊಡ್ಡಗುಣ

Updated on: 

ಎಸ್.ನಿಜಲಿಂಗಪ್ಪನವರು ರಾಷ್ಟ್ರರಾಜಕಾರಣದಲ್ಲಿ ತುಂಬಾ ಪ್ರಭಾವಶಾಲಿಗಳಾಗಿದ್ದರು. ಅವರು ನೆಹರೂ ಅವರನ್ನು ಭೇಟಿ ಮಾಡಲು ಹೋದರೆ ಅವರನ್ನು ಎದುರುಗೊಂಡು ಒಳಗೆ ಕರೆದೊಯ್ಯಲು ಸ್ವತಃ ನೆಹರೂ ಅವರೇ ಹೊರಗೆ ಬರುತ್ತಿದ್ದರು. ನಂತರ ಬಂದ ಲಾಲ್‌ಬಹಾದ್ದೂರ್ ಶಾಸ್ತ್ರಿಯವರೂ ಸಹ ಎಸ್.ಎನ್.ಅವರ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡಿದ್ದರು. ಅವರು ಮುಖ್ಯಮಂತ್ರಿಗಳಾಗಿದ್ದಾಗ ಎಸ್.ವರದನ್ ಎಂಬುವವರು ಕಾರವಾರದಲ್ಲಿ ಜಿಲ್ಲಾಧಿಕಾರಿಗಳಾಗಿದ್ದರು. ನಿಜಲಿಂಗಪ್ಪನವರು ಉತ್ತಮ ಆಡಳಿತಕ್ಕೆ, ಪ್ರಾಮಾಣಿಕ ನಡವಳಿಕೆಗೆ ಹೆಸರಾಗಿದ್ದರು. ಅವರ ಮಂತ್ರಿಮಂಡಲದಲ್ಲಿದ್ದ ಸಚಿವರ ಬಗ್ಗೆ ಅವರಿಗೆ ಹೆಮ್ಮೆ ಮತ್ತು ಗೌರವವಿತ್ತು. ಅದೇ ರೀತಿ ಅಧಿಕಾರಿಗಳೂ ಸಹ ಮುಖ್ಯಮಂತ್ರಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದರು. ಆದ್ದರಿಂದ ಅವರ ಮಾತಿಗೆ ಮನ್ನಣೆ ಇತ್ತು. ಒಮ್ಮೆ ನಿಜಲಿಂಗಪ್ಪನವರ ಮಂತ್ರಿಮಂಡಲದಲ್ಲಿದ್ದ ಸಚಿವರೊಬ್ಬರು ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಭೂವಿವಾದವೊಂದರ ಕುರಿತು ಒತ್ತಡ ತಂದರು. ಹಾಗೂ ಅವರ ನಿರ್ದೇಶನದಂತೆಯೇ ಸದರಿ ವಿವಾದವನ್ನು ಬಗೆಹರಿಸಬೇಕೆಂದು ಆದೇಶಿಸಿದರು. ಆದರೆ ಅದು ಕಾನೂನು ಬಾಹಿರವಾಗಿ ಇದ್ದುದರಿಂದ ಜಿಲ್ಲಾಧಿಕಾರಿಗಳು ಈ ವಿಷಯದಲ್ಲಿ ತಲೆಹಾಕದಂತೆ ಸಚಿವರಿಗೆ ಸಲಹೆ ನೀಡಿದರು ಮತ್ತು ಕಾನೂನು ರೀತ್ಯಾ ಅದನ್ನು ಬಗೆಹರಿಸಿದರು. ಇದರಿಂದ ಕೋಪಗೊಂಡಸಚಿವರು ಈ ವಿಷಯವನ್ನು ನಿಜಲಿಂಗಪ್ಪನವರ ಗಮನಕ್ಕೆ ತಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ವ್ಯಗ್ರಗೊಂಡ ಎಸ್.ಎನ್. ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಕರೆಸಿ ಜಿಲ್ಲಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಅದರಂತೆ ತಕ್ಷಣ ಕಾರವಾರದ ಜಿಲ್ಲಾಧಿಕಾರಿಗಳಿಗೆ ತುರ್ತು ಸಂದೇಶ ನೀಡಿ ಜಿಲ್ಲಾಧಿಕಾರಿಗಳ ಚಾರ್ಜನ್ನು ಬೇರೆಯವರಿಗೆ ವಹಿಸಿಕೊಟ್ಟು ತಕ್ಷಣ ಬೆಂಗಳೂರಿಗೆ ಬರಬೇಕೆಂದು ಆದೇಶಿಸಿದರು. ಅದರಂತೆ ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳ ಎದುರು ಹಾಜರಾದರು. ಆಗ ಅವರನ್ನು ಮುಖ್ಯಮಂತ್ರಿಗಳ ಸಮಕ್ಷಮ ಕರೆದೊಯ್ಯಲಾಯಿತು. ಅವರನ್ನು ನೋಡಿದ ಎಸ್.ಎನ್. ಕೋಪದಿಂದ, 'ನೀವೇನೋ ನನ್ನ ಸಚಿವರಿಗೆ ಹೇಗೆ ನಡೆದುಕೊಳ್ಳಬೇಕೆಂದು ಬೋಧಿಸಿದವರು?' ಎಂದು ವಂಗ್ಯವಾಗಿ ಕೇಳಿದರು. ಆಗ ವರದನ್, ತಮಗೆ ಐದು ನಿಮಿಷ ಕಾಲಾವಕಾಶಕೊಟ್ಟರೆ ಪರಿಸ್ಥಿತಿಯನ್ನು ವಿವರಿಸುವುದಾಗಿ ಮನವಿಮಾಡಿಕೊಂಡರು. ನಂತರ, ಸಚಿವರು ಒತ್ತಾಯ ತಂದ ವಿಚಾರ, ಅವರ ಮಾತು ಕೇಳಿದರೆ ಅದು ಹೇಗೆ ಕಾನೂನು ಬಾಹಿರವಾಗುತ್ತದೆ ಎಂಬುದನ್ನು ವಿವರಿಸಿ ಹೇಳಿದರು. ಜಿಲ್ಲಾಧಿಕಾರಿಗಳು ಹೇಳುವುದನ್ನು ಶಾಂತಚಿತ್ತದಿಂದ ಆಲಿಸಿದ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳ ಕಡೆ ತಿರುಗಿ, 'ಮುಖ್ಯ ಕಾರ್ಯದರ್ಶಿಗಳೇ, ನನ್ನ ಸಚಿವರೇ ತಪ್ಪು ಮಾಡಿದ್ದಾರೆ' ಎಂದು ಹೇಳಿ, ವರದನ್ ಅವರನ್ನು ತಮ್ಮ ಕಾರ್ಯದರ್ಶಿಯನ್ನಾಗಿ ನೇಮಕಮಾಡಿಕೊಂಡರು. ಇದು ನಿಷ್ಠಾವಂತರನ್ನು ನಿಜಲಿಂಗಪ್ಪನವರು ಪ್ರೋತ್ಸಾಹಿಸುತ್ತಿದ್ದ ರೀತಿ.

 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com