ಎಲ್ಲದಕ್ಕೂ ಕ್ಯಾತೆ ಎತ್ತುವವನಿಗೆ ಬೇಗ ಖ್ಯಾತಿ ಸಿಗುತ್ತದೆ
ಯೇನ ಕೇನ ಪ್ರಕಾರೇಣ ಯೇನೋ ಒಂದ್ಮಾಡಾಕ್ಬುಟ್ರೆ ಖ್ಯಾತಿ ಬೆನ್ನಟ್ಕಂಡ್ಬ್ರ್ತದೆ ಸಿವಾ...
ರಾಜಕಾರಣಿಗಳು ಹೂಡುವ ಬಂಡವಾಳವಿದು
ಖ್ಯಾತಿಯಲ್ಲೂ ಎರಡು ಪ್ರ-ಕಾರವಿದೆ. ಪ್ರ-ಖ್ಯಾತಿಯ ಪ್ರಕಾರವನ್ನೇ ಆರಿಸಿಕೊಳ್ಳುವವ ಜಾಣ
ನೀವು ಕುಶಲ ಕರ್ಮಿಗಳಾಗಿದ್ದರೂ ಕುಕರ್ಮಕ್ಕೆ ಅದನ್ನು ಬಳಸಿಕೊಂಡರೆ ನಿಮ್ಮ ಖ್ಯಾತಿಯ ಹಿಂದೆ ಕು ಸೇರಿಕೊಳ್ಳುತ್ತದೆ
ಯಾವ ಕಷ್ಟಗಳಿಗೂ ಕ್ಯಾರೆ ಅನ್ನದವನಿಗೆ ಖ್ಯಾತಿ ಬೇಗ ಒಲಿಯುವುದು
ಓತಿಕ್ಯಾತನಂತಿದ್ದರೂ ಖ್ಯಾತಿಯೊಂದು ಸಿಕ್ಕಿಬಿಟ್ಟರೆ ಆತ ಖ್ಯಾತ ಓತಿ ಆಗುತ್ತಾನೆ
ಕೀರ್ತಿಯ ಗಂಧವೇ ಖ್ಯಾತಿ
ಇದನ್ನು ಶ್ರಮವಿಲ್ಲದೇ ಗಳಿಸುವ ಮಾರ್ಗ ತಿಳಿಯಬೇಕೆಂದಿದ್ದರೆ ಬುದ್ಧಿ ಜೀವಿಗಳನ್ನು ಸಂಪರ್ಕಿಸಬಹುದು
ಇದನ್ನು ಪ್ರಸಿದ್ಧಿ ಎನ್ನುತ್ತಾರೆ. ಇದನ್ನು ಗಳಿಸಲೂ ವಿಶೇಷವಾದ ಸಿದ್ಧಿ ಬೇಕು. ಆಗಲೇ ಇದು ಸಿದ್ಧಿಸುತ್ತದೆ
'ರಾತ್ರೋರಾತ್ರಿ' ಪ್ರಸಿದ್ಧಿಗಳಿಸಲು ಸಾಧ್ಯವಿಲ್ಲ. ಈ ಮಾತು ಕಳ್ಳ ಕಾಕರಿಗೆ ಅನ್ವಯವಾಗುವುದಿಲ್ಲ
ಒಮ್ಮೆ ಇದನ್ನು ಗಳಿಸಿ ನೋಡಿ. ನೀವು ಬಿಟ್ಟ ಅಪಾನವಾಯು ಕೂಡ ಚಂಡಮಾರುತವಾಗುತ್ತದೆ
ಪತ್ರಕರ್ತರನ್ನು ಪ್ರಸನ್ನಗೊಳಿಸಿದರೆ ಪ್ರಖ್ಯಾತಿ ಗಳಿಸಿಕೊಡುತ್ತಾರೆ ಎಂಬ ಕುಖ್ಯಾತಿ ಪತ್ರಕರ್ತರಿಗಿದೆ
ಇದು ನಿಮ್ಮ ಹೆಸರನ್ನು ಮೇಲಕ್ಕೇರಿಸುತ್ತದೆ. ನಿಮ್ಮ ಅರ್ಹತೆಯನ್ನಲ್ಲ.
ವಿಶ್ವನಾಥ ಸುಂಕಸಾಳ