ಬಂಕಿಮಚಂದ್ರ ಚಟರ್ಜಿಯವರು ಬಂಗಾಲಿ ಭಾಷೆಯ ಸುಪ್ರಸಿದ್ಧ ಸಾಹಿತಿಯಾಗಿ, ಹೆಸರಾಂತ ಕಾದಂಬರಿಕಾರರಾಗಿ, ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದವರು. ಅವರು ರಚನೆ ಮಾಡಿದ ವಂದೇ ಮಾತರಂ ಗೀತೆ ತುಂಬಾ ಪ್ರಸಿದ್ಧವಾದುದು. ಅದು ಅವರು ಬರೆದ ಆನಂದಮಠ ಕಾದಂಬರಿಯಲ್ಲಿ ಪ್ರಕಟವಾಗಿದೆ. ಅದೂ ಸೇರಿ ಅವರು ಹದಿಮೂರು ಕಾದಂಬರಿಗಳನ್ನು ಬರೆದಿದ್ದಾರೆ. ಕವಿಯಾಗಿ, ಪತ್ರಕರ್ತರಾಗಿ ಸಹ ಪ್ರಸಿದ್ಧರಾಗಿದ್ದ ಚಟರ್ಜಿಯವರು ನಮ್ಮ ದೇಶದ ಸಂಸ್ಕೃತಿ, ಧರ್ಮ ಮತ್ತು ದೇಶಭಕ್ತಿಯ ಆರಾಧಕರಾಗಿ ಹೆಸರು ಮಾಡಿದವರು. ವಿದ್ಯಾರ್ಥಿದೆಸೆಯಲ್ಲಿ ಉತ್ತಮ ಸಾಧನೆ ಮಾಡಿದ ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಬಿ.ಎ.ಪದವಿಯನ್ನು ಪಡೆದರು. ಕಲ್ಕತ್ತಾದ ಲೆಫ್ಟಿನೆಂಟ್ ಗೌರ್ನರ್ರವರು ಬಂಕಿಮಚಂದ್ರರನ್ನು ಕರೆಸಿ ಅವರ ಬುದ್ಧಿಮತ್ತೆಯನ್ನೂ, ಪ್ರತಿಭೆಯನ್ನೂ ಮನಸಾರೆ ಹೊಗಳಿ ಅಭಿನಂದಿಸಿದರು. ಅಲ್ಲದೆ ಅವರಿಗೆ ಸರ್ಕಾರದಲ್ಲಿ ಡೆಪ್ಯುಟಿ ಕಲೆಕ್ಟರ್ ಹುದ್ದೆಯನ್ನು ನೀಡುವುದಾಗಿ ಘೋಷಿಸಿದರು. ಅದಕ್ಕಾಗಿ ಬಂಕಿಮಚಂದ್ರರ ಲಿಖಿತ ಒಪ್ಪಿಗೆಯನ್ನು ನೀಡಬೇಕೆಂದು ಸಲಹೆ ಮಾಡಿದರು. ಬಂಕಿಮಚಂದ್ರರಿಗೆ ಇದನ್ನು ಕೇಳಿ ತುಂಬಾ ಸಂತೋಷವಾಯಿತು.
ಅಧಿಕಾರಿಗಳ ಶ್ಲಾಘನೆಗೆ ಮತ್ತು ಅವರು ನೀಡಲಿರುವ ಕೆಲಸಕ್ಕಾಗಿ ಅಭಿನಂದನೆಗಳನ್ನು ಹೇಳಿ, ಆ ವಿಷಯವನ್ನು ಮೊದಲು ತಮ್ಮ ತಂದೆಗೆ ತಿಳಿಸಿ ಅವರ ಒಪ್ಪಿಗೆ ಪಡೆದು ನಂತರ ಬರುವುದಾಗಿ ತಿಳಿಸಿದರು. ಅದನ್ನು ಕೇಳಿ ಆ ಆಂಗ್ಲ ಅಧಿಕಾರಿಗೆ ತುಂಬಾ ಆಶ್ಚರ್ಯವಾಯಿತು. ಉನ್ನತ ಹುದ್ದೆಯನ್ನು ನೀಡಿದರೆ ಅದನ್ನು ಒಪ್ಪಿಕೊಳ್ಳುವುದಕ್ಕೆ ತಂದೆಯ ಅನುಮತಿ ಏಕೆಂದು ಅವರಿಗೆ ಅರ್ಥವಾಗಲಿಲ್ಲ. ಬಂಕಿಮಚಂದ್ರರಿಗೆ ಅವರ ಗೊಂದಲ ಅರ್ಥವಾಗಿ ಹೇಳಿದರು, 'ನಾವು ಭಾರತೀಯ ಸಂಪ್ರದಾಯದಂತೆ ಏನೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಿರಿಯರ ಒಪ್ಪಿಗೆ ಪಡೆಯುವ ಸತ್ಸಂಪ್ರದಾಯವನ್ನು ಅನುಸರಿಸುತ್ತೇವೆ. ಅವರು ಒಪ್ಪಿಗೆ ನೀಡದಿದ್ದರೆ ಎಂತಹ ದೊಡ್ಡ ಹುದ್ದೆಯನ್ನೂ ಸಹ ತಿರಸ್ಕರಿಸುತ್ತೇವೆ' ಎಂದು ನುಡಿದರು. ಇದನ್ನು ಕೇಳಿ ಆ ಅಧಿಕಾರಿಗೆ ತುಂಬಾ ಸಂತೋಷವಾಯಿತು. ಭಾರತೀಯ ಯುವಕರು ತಮ್ಮ ತಂದೆ ತಾಯಿಗೆ ಮತ್ತು ಹಿರಿಯರಿಗೆ ನೀಡುವ ಗೌರವ ಸ್ಥಾನವನ್ನು ಕಂಡು ಮನದುಂಬಿ ಬಂತು. ಬಂಕಿಮಚಂದ್ರರಿಗೆ ಶುಭ ಹಾರೈಸಿ ಕಳುಹಿಸಿದರು. ಬಂಕಿಮಚಂದ್ರರು ತಮ್ಮ ತಂದೆಗೆ ವಿಷಯ ತಿಳಿಸಿ, ಅವರ ಅನುಮತಿ ಮತ್ತು ಆಶೀರ್ವಾದ ಪಡೆದ ನಂತರವೇ ತಮ್ಮ ಹೊಸ ಹುದ್ದೆಯನ್ನು ಸ್ವೀಕರಿಸಿ ಅದರಲ್ಲಿ ಯಶಸ್ವಿಯಾದರು. ಇದು ಹಿರಿಯ ವಿದ್ವಾಂಸರ ದೊಡ್ಡತನವನ್ನು ಸೂಚಿಸುತ್ತದಲ್ಲದೆ, ಇತರರಿಗೆ ಮಾದರಿಯಾಗಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com