ಕನ್ನಡಿ
ನಡಿ ನಡಿ ಲೇಟಾಯ್ತು ಎಂದು ಕೂಗಿಕೊಂಡರೂ ಮಡದಿ ಮಾತ್ರ ಕನ್ನಡಿ ಬಿಟ್ಟು ಬಾರಳು
ಇದರಲ್ಲಿ ಕಾಣುವುದೆಲ್ಲ ಸತ್ಯವಲ್ಲದಿರಬಹುದು. ಆದರೆ ಸುಳ್ಳಂತೂ ಕಾಣುವುದಿಲ್ಲ
ತಾನೇ ಸುಂದರಿ ಎಂಬ ದರ್ಪ ಹುಟ್ಟುಹಾಕುವ ದರ್ಪಣ
ಇದರ ಸೃಷ್ಟಿಯಾಗದೇ ಇದ್ದಿದ್ದರೆ ಸೌಂದರ್ಯವೆಂಬುದು ಕನ್ನಡಿಯೊಳಗಿನ ಗಂಟಾಗಿರುತ್ತಿತ್ತು
ನಿಮ್ಮ ಮುಖವನ್ನು ನೇರಪ್ರಸಾರದಲ್ಲಿ ತೋರಿಸುವ ಸಾಧನ
ಅಂಗೈ ಹುಣ್ಣಿಗೆ ಇದು ಬೇಡ. ಆದರೆ ಮುಖದ ಹುಣ್ಣಿಗೆ ಇದು ಬೇಕೇ ಬೇಕು
ನಮ್ಮ ಮುಖ ಅದೆಷ್ಟು ಹಾರರ್ ಆಗಿದೆಯೆಂದು ತೋರಿಸುವ ಮಿರರ್
ಕನ್ನಡಿಯೆದುರಿಗೇ ಮೂರು ಹೊತ್ತೂ ಕಳೆವವರನ್ನು ಕನ್ನಡಿ-ಗರು ಎನ್ನಬಹುದು
ಕನ್ನೆಯರ ಕೆನ್ನೆ ಕೆಂಪೇರಿಸುವ ಸಾಧನ
ಇದು ಅತ್ಯಂತ ಭಾಗ್ಯವಂತ. ಸರ್ವದಾ ಚೆಲುವೆಯರ ಸಂಗವೋ ಸಂಗ
ಎಂಥ ಅರ್ಜೆಂಟ್ ಇದ್ದರೂ ಇದು ಎದುರಾದಾಗ ಒಮ್ಮೆ ನಿಂತು ಹೋಗದಿರಲು ಸಾಧ್ಯವಿಲ್ಲ
ಹುಡುಗಿಯರು ಕನ್ನಡಿ ನೋಡುತ್ತಾರೆ ಮತ್ತು ಹುಡುಗರು ಕನ್ನಡಿಯಂಥ ಹುಡುಗಿಯ ಮುಖವನ್ನೇ ನೋಡುತ್ತಾರೆ
ಸಮಯಕ್ಕೆ ಬೆಲೆ ಕೊಡುವವರ ಮನೆಯಲ್ಲಿ ಕನ್ನಡಿ ತುಂಬಾ ಚಿಕ್ಕದಾಗಿರುತ್ತದೆ
ಯಥಾ ಬಿಂಬ. ತಥಾ ಪ್ರತಿಬಿಂಬ
ಎಲ್ಲ ಹುಡುಗಿಯರ ಮೊದಲ ಪ್ರಿಯಕರ
ವಿಶ್ವನಾಥ ಸುಂಕಸಾಳ
vishwasunkasal@yahoo.com