ನೋಲಾ ಓಚ್ ಇತ್ತೀಚೆಗೆ ತನ್ನ 102 ಜನ್ಮದಿನವನ್ನು ಆಚರಿಸಿಕೊಂಡಾಗ ಆಕೆಗೆ ಬಂದ ಶುಭಾಶಯಗಳು ಅಪರಿಮಿತ. ಇದರಲ್ಲೇನು ವಿಶೇಷ ಎಂದು ನೀವು ಭಾವಿಸಬಹುದು. ಅಮೆರಿಕದ ಈ ಹಿರಿಯಜ್ಜಿ ಸಾಮಾನ್ಯಳಲ್ಲ. ಈಕೆ ಅತ್ಯಂತ ಹಿರಿಯ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಎಂಬ ಅಭಿದಾನಕ್ಕೆ ಪಾತ್ರಳಾಗಿದ್ದಾಳೆ. ಫೋರ್ಟ್ ಹೇಸ್ ಸ್ಟೇಟ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಾಗ ಈಕೆಗೆ 96 ವರ್ಷಗಳಾಗಿತ್ತು! ವಿದ್ಯೆಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ನೋಲಾ ಜೀವಂತ ಉದಾಹರಣೆ. 2010ರಲ್ಲಿ ತನ್ನ 98ನೆಯ ವಯಸ್ಸಿನಲ್ಲಿ ಲಿಬರಲ್ ಸ್ಟಡೀಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ದಾಖಲೆ ಸ್ಥಾಪಿಸಿದ್ದಾಳೆ. ಈಕೆ ಬಾಹ್ಯ ವಿದ್ಯಾರ್ಥಿನಿಯಾಗಿ ಓದದೆ, ಡಾಡ್ಸ್ ಸಿಟಿ ಕಮ್ಯುನಿಟಿ ಕಾಲೇಜಿಗೆ ಎಲ್ಲರಂತೆ 2007ರಲ್ಲಿ ಪ್ರವೇಶ ಪಡೆದು, ಪ್ರತಿದಿನವೂ ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡಿದಳು. ಈಕೆಯ ಸಹಪಾಠಿಗಳಲ್ಲಿ ಮೊಮ್ಮಗಳು ಅಲೆಕ್ಸಾಂಡ್ರಾ ಓಚ್ ಸಹ ಒಬ್ಬಳು. ಎಲ್ಲ ಸಾಮಾನ್ಯ ವಿದ್ಯಾರ್ಥಿಗಳಂತೆ ನೋಲಾ ಸಹ ತರಗತಿ ತಪ್ಪಿಸದೆ, ಶ್ರದ್ಧೆಯಿಂದ ಓದಿ ಎಲ್ಲರ ಪ್ರಶಂಸೆಗೆ ಕಾರಣಳಾದಳು. ಇತರ ಸಹಪಾಠಿಗಳೊಡನೆ ತಮಾಷೆಯಾಗಿ ಮಾತನಾಡಿಕೊಂಡು ಅವರ ಸ್ನೇಹ ಮತ್ತು ಪ್ರೀತಿಯನ್ನು ಸಂಪಾದಿಸಿದಳು. ಕಾಲೇಜಿನಲ್ಲಿ ನಡೆಯುತ್ತಿದ್ದ ಎಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಕೆಲಬಾರಿ ಬಹುಮಾನಗಳನ್ನೂ ಗಳಿಸಿದಳು. ತನಗೆ ಅಷ್ಟೊಂದು ವಯಸ್ಸಾಗಿದೆ ಎಂಬುದನ್ನೇ ಮರೆತು ಅಪ್ಪಟ ಕಾಲೇಜು ವಿದ್ಯಾರ್ಥಿನಿಯಾಗಿ ಕಲಿತಿದ್ದು ಒಂದು ವಿಶೇಷವಾಗಿದೆ. ಕಾಲೇಜಿನಲ್ಲಿ ಓದುವಾಗ ಹೆಚ್ಚು ಕಾಲ ಗ್ರಂಥಾಲಯದಲ್ಲಿ ಅಧ್ಯಯನ ಮಾಡುತ್ತಿದ್ದುದು ಸಹ ನೋಲಾ ಜ್ಞಾನದಾಹವನ್ನು ಸೂಚಿಸುತ್ತದೆ. ಈಕೆಯ ಅಧ್ಯಯನ ಕ್ರಮ, ತರಗತಿಯಲ್ಲಿನ ನಡವಳಿಕೆ, ಪ್ರಾಧ್ಯಾಪಕರಿಗೆ ನೀಡುತ್ತಿದ್ದ ಗೌರವ ಇವೆಲ್ಲವುಗಳನ್ನು ಪ್ರಾಧ್ಯಾಪಕರು ಮೆಚ್ಚುಗೆಯಿಂದ ಸ್ಮರಿಸಿಕೊಳ್ಳುತ್ತಾರೆ. 13 ಮೊಮ್ಮಕ್ಕಳನ್ನೂ, 15 ಮರಿಮಕ್ಕಳನ್ನೂ ಪಡೆದಿರುವ ನೋಲಾ ಕಾಲೇಜಿನಲ್ಲಿ ಓದಿ, ಪದವಿ ಪಡೆದ ಅತ್ಯಂತ ಹಿರಿಯ ವಯಸ್ಸಿನ ಮಹಿಳೆ ಎಂದು ಗಿನ್ನಿಸ್ ಪುಸ್ತಕದಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ. ಅಚ್ಚರಿಯೆಂದರೆ ಇದೇ ಮೊದಲ ಬಾರಿಗೆ ನೋಲಾ ಪದವಿ ಪಡೆಯುತ್ತಿಲ್ಲ. 1930ರಲ್ಲಿ ಕಾನ್ಸಾಸ್ ಸ್ಟೇಟ್ ಟೀಚರ್ಸ್ ಕಾಲೇಜಿನಲ್ಲಿ ಓದಿ ಮೊದಲ ಪದವಿ ಗಳಿಸಿದಳು. 1970 ರಲ್ಲಿ ತನ್ನ 60ನೆಯ ವಯಸ್ಸಿನಲ್ಲಿ, ತಾನು 96ನೇ ವಯಸ್ಸಿನಲ್ಲಿ ಪದವಿ ಪಡೆದ ಕಾಲೇಜಿನಲ್ಲಿ ಕೆಲಕಾಲ ಅರೆಕಾಲಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಳು. ಆಗ ನೋಲಾಳಿಂದ ಕಲಿತ ಅನೇಕರು ನಂತರ ಆಕೆಯ ಪ್ರಾಧ್ಯಾಪಕರಾಗಿದ್ದೂ ಇದೆ. ತನ್ನ ಜೀವನದ ಮಹತ್ವದ ಘಟನೆಯೆಂದರೆ ಮೊಮ್ಮಗಳೊಡನೆ ತಾನೂ ಸಹ ಪದವಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಪದವಿ ಪಡೆದದ್ದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಈ ಅಜ್ಜಿ ವಿಶ್ವದ ಗಮನ ಸೆಳೆದದ್ದು ಆಗಲೇ. ಪತ್ರಿಕೆಯವರು ಆಕೆಯನ್ನು ಆ ಸಂದರ್ಭದಲ್ಲಿ ಸಂದರ್ಶಿಸಿದಾಗ, "ನಾನು ವಿಶ್ವದಲ್ಲಿಯೇ ಅತ್ಯಂತ ಹಿರಿಯ ವಯಸ್ಸಿನಲ್ಲಿ ಪದವಿ ಪಡೆದ ವ್ಯಕ್ತಿಯಾಗಿರುವುದು ಸಹಜವಾಗಿ ಸಂತಸವನ್ನುಂಟು ಮಾಡಿದೆ. ಇದು ಇತರರಿಗೂ ಪ್ರೇರಣೆ ನೀಡಿರುವುದಂತೂ ಸತ್ಯ. ಶಿಕ್ಷಣ ಕೊನೆಯ ಉಸಿರಿರುವವರೆಗೂ ಮುಂದುವರೆಯಬೇಕು ಎಂಬುದೇ ನನ್ನ ಆಶಯ" ಎಂದು ಹೇಳುತ್ತಾಳೆ ನೋಲಾ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com