ಭಾರತರತ್ನ ಡಾ.ಪಾಂಡುರಂಗ ವಾಮನ ಕಾಣೆ(ಪಿ.ವಿ.ಕಾಣೆ) ವಕೀಲರಾಗಿ, ವೇದಶಾಸ್ತ್ರ ಪಂಡಿತರಾಗಿ, ಉತ್ತಮ ಲೇಖಕರಾಗಿ, ಸಮಾಜಸುಧಾರಕರಾಗಿ ಪ್ರಸಿದ್ಧರಾದವರು. ರತ್ನಗಿರಿ ಜಿಲ್ಲೆಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಸಹ ಸಮಾಜದಲ್ಲಿ ಮೇಲ್ವರ್ಗದ ಜನರು ಕೆಳವರ್ಗದ ಜನರನ್ನು ನಡೆಸಿಕೊಳ್ಳುವ ರೀತಿಯನ್ನು ಕಂಡು ಪ್ರತಿಭಟಿಸುತ್ತಿದ್ದರವರು. ಎಲ್ಲರಿಗೂ ಸಮಾನ ಅವಕಾಶ ದೊರಕಬೇಕೆಂಬುದು ಅವರ ಆಶಯವಾಗಿತ್ತು. ಅವರು ಮಹೋಪಾಧ್ಯಾಯರೆಂದೂ ಹೆಸರು ಪಡೆದಿದ್ದರು. ಮುಂಬೈ ವಿಶ್ವ ವಿದ್ಯಾನಿಲಯದ ಉಪಕುಲತಿಗಳಾಗಿ ಸಹ ಸೇವೆ ಸಲ್ಲಿಸಿ ಪ್ರಸಿದ್ಧರಾಗಿದ್ದರು. ರಾಜ್ಯಸಭೆ ಸದಸ್ಯರಾಗಿ ಒಮ್ಮೆ ನಾಮಕರಣಗೊಂಡಿದ್ದರು. ಅವರ ನಿಸ್ವಾರ್ಥ ಸೇವೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ 1963ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಮ್ಮೆ ಪಂಢರಾಪುರದ ವಿಠೋಬನ ದೇವಾಲಯಕ್ಕೆ ಆಗಮಿಸಿದ್ದ ವಿಧವೆಯೊಬ್ಬಳು ದೇವರ ವಿಗ್ರಹದ ಮುಂದೆ ನಿಂತು ಭಾವಪರವಶಳಾಗಿ ಮೂರ್ತಿಯ ಪಾದಗಳಿಗೆ ನಮಿಸಲೆಂದು ಬಗ್ಗಿದಳು. ಅಷ್ಟರಲ್ಲಿ ಅರ್ಚಕನೊಬ್ಬ ಕೇಶಮುಂಡನವಾಗದ ವಿಧವೆಯೊಬ್ಬಳು ದೇವರ ವಿಗ್ರಹವನ್ನು ಮುಟ್ಟುವಂತಿಲ್ಲ ಎಂದು ತಡೆದ. ಇದು ಕಾಣೆಯವರಿಗೆ ತಿಳಿದು ಆ ಅರ್ಚಕನ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ವೇದೋಪನಿಷತ್ತುಗಳನ್ನು ಆಳವಾಗಿ ಅಭ್ಯಸಿಸಿ ಪಾರಂಗತರಾಗಿದ್ದ ಕಾಣೆಯವರು ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸಿ ಯಾವುದೇ ಶಾಸ್ತ್ರ, ಪುರಾಣಗಳಲ್ಲಿ ವಿಧವೆಯ ಕೇಶಮುಂಡನದ ಬಗ್ಗೆ ಆಧಾರವಿಲ್ಲವೆಂದು ವಾದಿಸಿದರು. ಇವರ ಪಾಂಡಿತ್ಯ, ವಿದ್ವತ್ತು ಇವುಗಳಿಗೆ ಉತ್ತರಿಸಲು ಯಾವ ವಿದ್ವಾಂಸನಿಗೂ ಸಾಧ್ಯವಾಗದೇ ಹೋಯಿತು. ಕೊನೆಗೆ ನ್ಯಾಯಾಲಯವು ಕೇಶಮುಂಡನ ಮಾಡಿಸದ ವಿಧವೆಯರೂ ಸಹ ದೇವರನ್ನು ಮುಟ್ಟಿ ಪೂಜಿಸಬಹುದೆಂದು ತೀರ್ಪು ನೀಡಿತು. ಇದು ಅವರ ಜೀವನಗತಿಯನ್ನೇ ಬದಲಾಯಿಸಿತು. ತಮ್ಮ ನಿಲುವನ್ನು ಕೇವಲ ಪ್ರಸ್ತುತ ಪಡಿಸಲು ಮಾತ್ರ ಸೀಮಿತಗೊಳಿಸದೆ, ಅದನ್ನು ತಮ್ಮ ಜೀವನದಲ್ಲಿ ಕಾರ್ಯರೂಪಕ್ಕೂ ತಂದರು. ಇದಾದ ನಂತರ ಕಾಣೆಯವರು ತಮ್ಮ ಮಗನಿಗೆ ವಿಧವೆಯೊಬ್ಬಳನ್ನು ಕರೆತಂದು ವಿವಾಹ ಮಾಡಿಸಿ, ಆದರ್ಶವನ್ನು ಮೆರೆದರು. ಮುಂಬಯಿಯ ಬ್ರಾಹ್ಮಣ ಸಭಾದ ಅಧ್ಯಕ್ಷರಾಗಿದ್ದರೂ ಸಹ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಸಮಾಜದಲ್ಲಿ ದಲಿತರಿಗೆ ಸಮಾನ ಸ್ಥಾನಮಾನ ಕಲ್ಪಿಸದೇ ಇರುವುದು ಅವರಿಗೆ ನೋವಿನ ಸಂಗತಿಯಾಗಿತ್ತು. ಆಗ ಹರಿಜನರು ಗಣಪತಿ ಉತ್ಸವದಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. 1927ರಲ್ಲಿ ಮೊದಲಬಾರಿಗೆ ಕಾಣೆಯವರು ಹರಿಜನರನ್ನೂ ಗಣಪತಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿ ಸಂಪ್ರದಾಯಸ್ಥರ ಕೆಂಗಣ್ಣಿಗೆ ಗುರಿಯಾದರು. ಐದು ಸಂಪುಟಗಳಲ್ಲಿ ಪ್ರಕಟವಾದ ಧರ್ಮಶಾಸ್ತ್ರದ ಇತಿಹಾಸ ಅವರ ಅಮೋಘ ಕೃತಿಗಳಲ್ಲೊಂದು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ