ಡಾ.ಸರ್.ಸಿ. ಪಿ. ರಾಮಸ್ವಾಮಿ ಅಯ್ಯರ್ರವರು ಡಾ. ಅನಿಬೆಸಂಟರೊಡನೆ ಕೆಲಸ ಮಾಡಿದವರು. ಅನಿಬೆಸೆಂಟ್ ಹೋಂರೂಲ್ ಲೀಗ್ ಸ್ಥಾಪಿಸಿದಾಗ ಅದಕ್ಕೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು ಅಯ್ಯರ್. ಮದ್ರಾಸಿನಲ್ಲಿ ಪ್ರಸಿದ್ಧ ವಕೀಲರಾಗಿ ಹಣ ಮತ್ತು ಹೆಸರು ಎರಡನ್ನೂ ಗಳಿಸಿದವರು. ನಂತರ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ತಿರುವಾಂಕೂರಿನ ದಿವಾನರಾಗಿ, ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸಹ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ಅಡ್ವೋಕೇಟ್ ಜನರಲ್ ಆಗಿ, ಲೀಗ್ ಆಫ್ ನೇಷನ್ಸ್ನ ಭಾರತದ ಪ್ರತಿನಿಧಿಯಾಗಿಯೂ ಸಹ ಸೇವೆ ಸಲ್ಲಿಸಿದರು. 1919ರ ಮಾಂಟೆಗೋ-ಚಲ್ಮಸ್ಫರ್ಡ್ ಸುಧಾರಣೆಯ ಪ್ರಕಾರ ಪ್ರಾಂತ್ಯಗಳ ಶಾಸನ ಸಭೆಗೆ ಚುನಾವಣೆ ನಡೆಯಿತು. ಆಗ ಸರ್.ಸಿ.ಪಿ.ಯವರು ಮದ್ರಾಸು ಪ್ರಾಂತ್ಯದ ಶಾಸನ ಸಭೆಗೆ ಸ್ಪರ್ಧಿಸಿದರು. ಇವರ ಪ್ರತಿಸ್ಪರ್ಧಿಯಾಗಿದ್ದವರು ಜಸ್ಟೀಸ್ ಪಾರ್ಟಿಯ ಹುರಿಯಾಳು. ಒಮ್ಮೆ ಮದ್ರಾಸು ನಗರದ ಕ್ರೌನ್ ಥಿಯೇಟರ್ನಲ್ಲಿ ಚುನಾವಣಾ ಭಾಷಣ ಮಾಡುವಾಗ ಜಸ್ಟೀಸ್ ಪಕ್ಷದ ಕಾರ್ಯಕರ್ತರು ಸಿ.ಪಿ.ಯವರ ಭಾಷಣಕ್ಕೆ ಅಡ್ಡಿ ಮಾಡಿದ್ದಲ್ಲದೆ, ಅವರ ಮೇಲೆ ಹಲ್ಲೆ ಮಾಡಲು ಸಿದ್ಧತೆ ನಡೆಸಿದ್ದರು. ಪೋಲಿಸರು ಚುನಾವಣಾ ಭಾಷಣದಲ್ಲಿ ಪಾಲ್ಗೊಳ್ಳಬಾರದೆಂದು ಮುನ್ನೆಚ್ಚರಿಕೆ ನೀಡಿದ್ದರೂ ಸಹ ರಾಮಸ್ವಾಮಿ ಅಯ್ಯರ್ ಆ ಸಭೆಯಲ್ಲಿ ಪಾಲ್ಗೊಂಡರು. ಇನ್ನೇನು ಭಾಷಣ ಪ್ರಾರಂಭಿಸಬೇಕು ಅಷ್ಟರಲ್ಲಿ ಸೆಗಣಿ ಉಂಡೆ ಮತ್ತು ಗಾಜಿನ ಚೂರುಗಳನ್ನು ಹಿಡಿದು ಬಂದಿದ್ದ ಕೆಲವರು ಎದ್ದು ನಿಂತು ಗದ್ದಲ ಮಾಡಲಾರಂಭಿಸಿದರು. ಆಗ ಅಯ್ಯರ್ ಎತ್ತರಿಸಿದ ಧ್ವನಿಯಲ್ಲಿ, 'ನಾನು ಭಾಷಣವನ್ನು ಮಾಡಿಯೇ ತೀರುತ್ತೇನೆ. ನಿಮ್ಮ ಗಲಾಟೆಯಿಂದ ಅದು ಸಭಿಕರಿಗೆ ಕೇಳಿಸದೇ ಇರಬಹುದು, ಆದರೆ, ಮುಂದೆ ಕುಳಿತಿರುವ ಪತ್ರಿಕೆಯವರು ಅದನ್ನು ಮಾರನೇ ದಿನ ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ' ಎಂದು ಗುಡುಗಿದರು. ಅಲ್ಲದೆ ತಮ್ಮ ಜೇಬಿನಿಂದ ಪಿಸ್ತೂಲೊಂದನ್ನು ತೆಗೆದು ತೋರಿಸುತ್ತಾ, ಯಾರಾದರೂ ತಮ್ಮ ಮೇಲೆ ಏನಾದರೂ ಎಸೆದರೆ, ಪರಿಣಾಮ ನೆಟ್ಟಗಾಗಲಿಕ್ಕಿಲ್ಲ ಎಂದು ಘರ್ಜಿಸಿದಾಗ ಗದ್ದಲ ಎಬ್ಬಿಸಲು ಬಂದವರು ತೆಪ್ಪಗೆ ಕುಳಿತರು. ಸಿ.ಪಿ.ರಾಮಸ್ವಾಮಿ ಅಯ್ಯರ್ರ ಮಾತುಗಳು ಅಲ್ಲಿ ಕುಳಿತವರ ಮೇಲೆ ಅಗಾಧ ಪರಿಣಾಮ ಬೀರಿತ್ತು. ಆ ಬಾರಿ ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಸಿ ದಾಖಲೆ ಸೃಷ್ಟಿ ಮಾಡಿದರು. ಮುಂದೆ ಗಾಂಧೀಜಿಯವರ ಅಸಹಕಾರ ಚಳವಳಿ ಮತ್ತು ಸ್ವದೇಶಿ ಚಳವಳಿಯನ್ನು ವಿರೋಧಿಸಿ ಗಾಂಧೀಜಿಯವರಿಂದ ದೂರವಾದರೂ ಸಹ ಅಸ್ಪೃಶ್ಯರಿಗೆ ಸಮಾನ ಅವಕಾಶ ನೀಡಬೇಕೆಂದು ಹೋರಾಡಿದರು. ಅಲ್ಲದೆ, ದಿವಾನರಾಗಿದ್ದಾಗ ದೇವಾಲಯಗಳ ಪ್ರವೇಶಕ್ಕೆ ಅಲ್ಲಿಯವರೆಗೆ ಅಸ್ಪೃಶ್ಯರಿಗಿದ್ದ ನಿಷೇಧವನ್ನು ತೆಗೆದುಹಾಕಲು ಕಾರಣರಾದರು. ಮೊದಲಬಾರಿಗೆ ಶಾಲಾಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆಯನ್ನು ಜಾರಿಗೆ ತಂದರು. ಕನ್ಯಾಕುಮಾರಿಯಲ್ಲಿ ವಿವೇಕಾನಂದರ ಸ್ಮಾರಕ ಸ್ಥಾಪಿಸಲು ಕಾರಣರಾದವರಲ್ಲಿ ಸಿ.ಪಿ ಸಹ ಒಬ್ಬರು.