ಶಿವಮೊಗ್ಗದ ಹಳೆಯ ತಲೆಮಾರಿಗೆ ಸೇರಿದ ವೈದ್ಯರಲ್ಲಿ ಡಾ.ಡಿ.ಕೃಷ್ಣಮೂರ್ತಿಯವರೂ ಒಬ್ಬರು. ಸೈನ್ಯಸೇವೆಯಿಂದ ನಿವೃತ್ತರಾಗಿ, 1947ರಿಂದ ತಮ್ಮ ಜೀವನದ ಕೊನೆಯವರೆಗೂ ಮಲೆನಾಡು ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದು ಜನಸೇವೆ ಮಾಡಿದ ನಿಷ್ಠಾವಂತ. ತಮ್ಮ ಮಾನವೀಯ ಗುಣಗಳಿಂದ ಅಪಾರ ಗೌರವ ಮತ್ತು ಜನಪ್ರಿಯತೆಯನ್ನು ಗಳಿಸಿದ್ದರು. ಅವರ ಉದ್ದೇಶ ಹಣ ಸಂಪಾದಿಸುವುದಾಗಿರದೆ, ಜನಸೇವೆ ಮಾಡುವುದೇ ಆಗಿತ್ತು. ರೋಗಿಗಳು ಕೊಟ್ಟಷ್ಟೇ ಫೀಸು. ಹಣಕ್ಕಾಗಿ ಎಂದಿಗೂ ತಗಾದೆ ಮಾಡುತ್ತಿರಲಿಲ್ಲ. ಕೆಲ ಬಡ ರೋಗಿಗಳಿಗಂತೂ ಉಚಿತವಾಗಿ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದರು. ಮಾತು ಗಡುಸಾದರೂ ಹೃದಯ ಬೆಣ್ಣೆಯಷ್ಟೇ ಮೃದುವಾಗಿತ್ತು. ಸರಳ ಜೀವನವನ್ನು ಇಷ್ಟಪಡುತ್ತಿದ್ದ ಕೃಷ್ಣಮೂರ್ತಿಯವರು ಸದಾ ಸೈಕಲ್‌ನಲ್ಲಿ ಸಂಚರಿಸುತ್ತಿದ್ದರು. ಒಂದು ದಿನ ಅವರು ಆಸ್ಪತ್ರೆಯ ಹೊರಗೆ ಇಣುಕಿದಾಗ ಒಬ್ಬ ಲಂಬಾಣಿ ಮಹಿಳೆ ಅಳುತ್ತಿರುವ ಮಗುವನ್ನು ಜೋಳಿಗೆಯಲ್ಲಿಟ್ಟುಕೊಂಡು ನಿಂತಿದ್ದು ಕಾಣಿಸಿತ್ತು. ಬಡತನವೇ ಮೂರ್ತಿವೆತ್ತಂತಹ ಆ ಮಹಿಳೆ ತನ್ನ ಅನಾರೋಗ್ಯದ ಮಗುವನ್ನು ಡಾಕ್ಟರಿಗೆ ತೋರಿಸಲು ಬಂದಿದ್ದಳು. ತಕ್ಷಣ ಕೃಷ್ಣಮೂರ್ತಿಗಳು ಆಕೆಯನ್ನು ಒಳಕರೆದು, ಮಗುವಿಗೆ ಚಿಕಿತ್ಸೆ ನೀಡಿದರು. ಅದುವರೆಗೆ ಅಳುತ್ತಿದ್ದ ಮಗು ಮುಗುಳ್ನಗೆ ಬೀರಿದಾಗ ತಾಯಿಯ ಮುಖದಲ್ಲಿ ಮೂಡಿದ್ದ ಆತಂಕ ದೂರವಾಯಿತು. ಆಗ ಆಕೆ ತನ್ನ ಸೊಂಟದಲ್ಲಿ ಸಿಕ್ಕಿಸಿದ್ದ ಎರಡು ರುಪಾಯಿ ನೋಟನ್ನು ತೆಗೆದು ವೈದ್ಯರಿಗೆ ನೀಡಲು ಹೋದಾಗ ಅದನ್ನು ತೆಗೆದುಕೊಳ್ಳಲು ನಿರಾಕರಿಸಿ, ತಾವೇ ಹತ್ತು ರುಪಾಯಿಯ ನೋಟನ್ನು ಆ ತಾಯಿಗೆ ನೀಡಿ ಮಗುವಿಗೆ ಹಾಲು ಹಣ್ಣು ನೀಡಿ ಆರೈಕೆ ಮಾಡಲು ತಿಳಿಸಿದರು. ಮತ್ತೊಂದು ದಿನ ಹುಸೇನ್ ಎಂಬ ವ್ಯಕ್ತಿ ತನ್ನ ಅನಾರೋಗ್ಯಪೀಡಿತ ಮಗಳನ್ನು ಒಂದು ಗಾಡಿಯಲ್ಲಿ ಕರೆತಂದು ತನ್ನ ಮಗಳನ್ನು ಉಳಿಸಿಕೊಡಿ ಡಾಕ್ಟರೇ ಎಂದು ಗೋಳಾಡಿದ. ಕೃಷ್ಣಮೂರ್ತಿಯವರು ಹೊರಗೆ ಗಾಡಿಯ ಬಳಿಯೇ ತಮ್ಮ ವೈದ್ಯಕೀಯ ಕಿಟ್‌ನೊಂದಿಗೆ ಧಾವಿಸಿ ಬಂದು ನೋಡಿದಾಗ ಆಗಲೇ ಗತಪ್ರಾಣಳಾಗಿದ್ದ ಮಹಿಳೆ ಕೊನೆಯುಸಿರೆಳೆದಿದ್ದಳು. ಅದನ್ನು ನೋಡಿ ವೈದ್ಯರ ಮನಸ್ಸಿಗೆ ದುಃಖವಾಯಿತು. ತಮ್ಮ ಜೇಬಿಗೆ ಕೈಹಾಕಿ ಅದರಲ್ಲಿದ್ದ ಇನ್ನೂರು ರುಪಾಯಿಗಳನ್ನು ಹುಸೇನನಿಗೆ ನೀಡಿ ಅಂತ್ಯಕ್ರಿಯೆ ನಡೆಸಲು ಹೇಳಿದರು. ವೈದ್ಯರ ವಾತ್ಸಲ್ಯ ಮತ್ತು ಮಾನವೀಯತೆಯನ್ನು ಕಂಡ ಹುಸೇನ್ ಮತ್ತೆ ಅತ್ತರು. ಅದು ತಮ್ಮ ಮಗಳ ಸಾವಿಗಾಗಿ ಅಲ್ಲ, ವೈದ್ಯರಿಗೆ ರೋಗಿಗಳ ಮೇಲಿದ್ದ ಕಳಕಳಿಗೆ. ತಮ್ಮ ಜೀವನದ ಸಂಧ್ಯಾಕಾಲವನ್ನವರು ಮಂಡಗದ್ದೆಯಲ್ಲಿ ಕಳೆದರು. ಇಂದು ಡಾ.ಕೃಷ್ಣಮೂರ್ತಿಯವರು ನೀಡಿದ ವಿಶಾಲವಾದ ನಿವೇಶನದಲ್ಲಿ ಭಾರತೀಯ ವಿದ್ಯಾಭವನ ಶಾಲೆಯ ಕಟ್ಟಡ ಮತ್ತು ರೋಟರಿಯವರ ಬುದ್ಧಿಮಾಂದ್ಯ ಮಕ್ಕಳ ಆಶಾಕಿರಣ ಶಾಲೆ ನಡೆಯುತ್ತಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com