1940 ರಿಂದ ಸತತ ಅರವತೈದು ವರ್ಷಗಳ ಕಾಲ ಹಿಂದಿ ಚಿತ್ರರಂಗದಲ್ಲಿ ಸಂಗೀತ ನಿರ್ದೇರ್ಶಕರಾಗಿ ಅಳಿಸಲಾಗದ ಛಾಪು ಮೂಡಿಸಿ ಮರೆಯಾದವರು ನೌಷಾದ್ ಅಲಿಯವರು. ಅವರು ಸಂಗೀತ ನೀಡಿದ 65ಕ್ಕೂ ಹೆಚ್ಚು ಚಿತ್ರಗಳೆಲ್ಲಾ ಅದ್ಭುತ ಯಶಸ್ಸನ್ನು ಗಳಿಸಿದ್ದು ವಿಶೇಷ. ಅದರಲ್ಲಿಯೂ ಹಲವಾರು ಚಿತ್ರಗಳು ರಜತಮಹೋತ್ಸವ, ಸುವರ್ಣ ಮಹೋತ್ಸವ ಮತ್ತು ವಜ್ರಹೋತ್ಸವವನ್ನು ಆಚರಿಸಿ ದಾಖಲೆ ಸ್ಥಾಪಿಸಿವೆ. ಅನೇಕ ಹಿನ್ನಲೆ ಗಾಯಕರಿಗೆ ನೆಲೆಯೊದಗಿಸಿಕೊಟ್ಟು ಕೀರ್ತಿವಂತರನ್ನಾಗಿ ಮಾಡಿದ ದಾಖಲೆಯೂ ನೌಷಾದ್ ಪಾಲಿಗಿದೆ. ಅವರ ಸೇವೆಯನ್ನು ಪರಿಗಣಿಸಿ ಪದ್ಮವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಹ ನೀಡಲಾಯಿತು. ಮೂಲತಃ ಲಕ್ನೋದವರಾಗಿದ್ದ ನೌಷಾದ್ ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ಅತೀವ ಅಭಿರುಚಿಯುಳ್ಳವರಾಗಿದ್ದರು. ಆಗ ಲಕ್ನೋದಲ್ಲಿ ಉಸ್ತಾದ್ ಗುರ್ಬತ್ ಅಲಿಯವರ ಸಂಗೀತ ವಾದ್ಯಗಳ ಅಂಗಡಿಯಿತ್ತು. ಅಲ್ಲಿ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದ ಹಾರ್ಮೋನಿಯಂಗಳು ನೌಷಾದ್ಗೆ ಆಕರ್ಷಣೆಯ ಕೇಂದ್ರವಾಗಿತ್ತು. ಹೀಗಾಗಿ ಪ್ರತಿನಿತ್ಯ ಅವರು ಅಂಗಡಿಯ ಮುಂದೆ ಆಸೆಯಿಂದ ಹಾರ್ಮೋನಿಯಂಗಳನ್ನು ನೋಡುತ್ತಾ ನಿಲ್ಲುತ್ತಿದ್ದರು. ಬಾಲಕನ ಈ ವರ್ತನೆಯಿಂದ ಆಕರ್ಷಿತರಾದ ಗುರ್ಬತ್ ಅಲಿಯವರು "ಏಕೆ ಹೀಗೆ?" ಎಂದು ಕೇಳಿದರು. ಅದಕ್ಕೆ ನೌಷಾದ್ ತಾವು ಹಾರ್ಮೋನಿಯಂ ಕಲಿಯಲು ಆಸಕ್ತರಾಗಿರುವುದನ್ನು ತಿಳಿಸಿದರು. ಅಂದಿನಿಂದ ಗುರ್ಬತ್ ಅಲಿಯವರು ನೌಷಾದರಿಗೆ ಪ್ರತಿನಿತ್ಯ ತಮ್ಮ ಮನೆಯಲ್ಲಿ ಹಾರ್ಮೋನಿಯಂ ವಾದ್ಯ ನುಡಿಸುವುದನ್ನು ಕಲಿಸಲು ಪ್ರಾರಂಭಿಸಿದರು. ಬಾಲಕನ ಆಸಕ್ತಿ, ಕಲಿಯುವ ರೀತಿ ಎಲ್ಲವೂ ಗುರುಗಳಿಗೆ ಮೆಚ್ಚುಗೆಯಾಯಿತು. ಕೆಲ ಸಮಯದ ನಂತರ ನೌಷಾದ್, ಗುರ್ಬತ್ ಅಲಿಯವರ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಪ್ರತಿದಿನ ಬೆಳಿಗ್ಗೆ ಬೇಗ ಬಂದು ಅಂಗಡಿಯ ಬಾಗಿಲು ತೆರದು, ಸ್ವಚ್ಛಗೊಳಿಸಿ, ತಮ್ಮ ಗುರುಗಳು ಬರುವವರೆಗೂ ಅಲ್ಲಿದ್ದ ಹಾರ್ಮೋನಿಯಂನಲ್ಲಿ ಅಭ್ಯಾಸ ಮಾಡುತ್ತಿದ್ದರು. ಒಮ್ಮೆ ಗುರುಗಳ ಕಿವಿಗೆ ಇಂಪಾದ ಹಾರ್ಮೋನಿಯಂ ಸಂಗೀತ ಕಿವಿಗೆ ಬಿತ್ತು. ಕೆಲವು ಅಪರೂಪದ ರಾಗಗಳನ್ನು ನುಡಿಸುವುದನ್ನು ಕೇಳಿ ಭಾವಪರವಶರಾದರು. ಆದರೂ ಒಳಬಂದು ಹುಸಿಕೋಪವನ್ನು ಪ್ರಕಟಿಸಿ, ತಮ್ಮ ಅನುಮತಿಯಿಲ್ಲದೇ ಹೀಗೆ ಸಂಗೀತ ವಾದ್ಯವನ್ನು ಬಳಸಿಕೊಂಡದ್ದಕ್ಕೆ ಶಿಕ್ಷೆ ವಿಧಿಸುವುದಾಗಿ ಗುಡುಗಿದರು. ಏನು ಶಿಕ್ಷೆ ಕಾದಿದೆಯೋ ಎಂದು ನೌಷಾದರು ಭಯಪಟ್ಟರು. ಆಗ ಗುರ್ಬತ್ ಅಲಿಯವರು ಹಸನ್ಮುಖರಾಗಿ, ನಿನಗೆ ಬೇಕಾದ ಹಾರ್ಮೋನಿಯಂ ಅನ್ನು ಆರಿಸಿಕೋ. ಅದನ್ನು ಕೊಡುಗೆಯಾಗಿ ನೀಡುತ್ತೇನೆ ಎಂದಾಗ ನೌಷಾದರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ತಮ್ಮ ಗುರುಗಳು ನೀಡಿದ ಹಾರ್ಮೋನಿಯಂ ಅನ್ನು ಕಡೆಯವರೆಗೂ ತಮ್ಮಲ್ಲಿಟ್ಟುಕೊಂಡು ಹಿಂದಿ ಚತ್ರರಂಗಕ್ಕೆ ಅನೇಕ ಇಂಪಾದ ರಾಗಗಳನ್ನು ನೀಡಿದ ನೌಷಾದ್ ಅಜರಾಮರರಾಗಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com