ಪ್ರಕಾಶನ ಸಂಸ್ಥೆಯ ಸಮಾಜಸೇವೆ

Updated on: 

ನಮ್ಮ ನಾಡಿನ ಕೆಲವೇ ಹಿರಿಯ ಪ್ರಕಾಶನ ಸಂಸ್ಥೆಗಳಲ್ಲಿ ಒಂದು ಮೈಸೂರಿನ ಗೀತಾ ಬುಕ್ ಹೌಸ್. ನಗರದ ಹೃದಯ ಭಾಗದಲ್ಲಿದ್ದು ಕನ್ನಡ ಸಾಹಿತ್ಯಕ್ಕೆ ಅನುಪಮ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ಕೆಲವು ವೈಶಿಷ್ಟ್ಯಗಳಿಂದ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. 1952ರಲ್ಲಿ ಒಂದು ಸಣ್ಣ ಉದ್ಯಮವಾಗಿ ಪ್ರಾರಂಭವಾದ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಕೇವಲ ನಮ್ಮ ನಾಡಿಗೆ ಮಾತ್ರವಲ್ಲ, ನೆರೆಹೊರೆಯ ರಾಜ್ಯಗಳ ಕಾಲೇಜುಗಳು, ಅಖಿಲ ಭಾರತ ಮಟ್ಟದ ಗ್ರಂಥಾಲಯಗಳು, ಸಂಶೋಧನಾ ಸಂಸ್ಥೆಗಳು, ದೂರದ ಅಮೆರಿಕ, ಇಂಗ್ಲೆಂಡ್, ಜರ್ಮನಿ ಮುಂತಾದ ದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಮತ್ತಿತರ ಸಂಸ್ಥೆಗಳಿಗೆ ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಪುಸ್ತಕಗಳನ್ನು ಸರಬರಾಜು ಮಾಡಿ ವಿಶಿಷ್ಟ ಸ್ಥಾನ ಗಳಿಸಿದೆ. ಇದುವರೆಗೂ ಒಂದು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ ಹೆಮ್ಮೆಗೆ ಪಾತ್ರವಾಗಿದೆ. ಮೈಸೂರಿಗೆ ಆಗಮಿಸುವ ಗಣ್ಯಾತಿ ಗಣ್ಯರು ತಪ್ಪದೇ ಭೇಟಿ ನೀಡುವ ತಾಣ ಗೀತಾ ಬುಕ್ ಹೌಸ್ ಎಂಬ ಹೆಗ್ಗಳಿಕೆಯೂ ಇದೆ. ಇಲ್ಲಿಗೆ ಭೇಟಿ ನೀಡಿದವರ ಪಟ್ಟಿಯಲ್ಲಿ ಅನೇಕ ಮುಖ್ಯಮಂತ್ರಿಗಳು, ರಾಜ್ಯಪಾಲರುಗಳು, ನ್ಯಾಯಾಧೀಶರು ಮಾತ್ರವಲ್ಲ ಕನ್ನಡದ ದಿಗ್ಗಜರಾದ ಎ.ಆರ್.ಕೃಷ್ಣಶಾಸ್ತ್ರಿ, ತೀನಂಶ್ರೀ, ಬಿಎಂಶ್ರೀ, ದ.ರಾ.ಬೇಂದ್ರೆ, ವಿ.ಸೀ, ಎಸ್.ವಿ.ಪರಮೇಶ್ವರ ಭಟ್ಟ, ಅನಕೃ, ತರಾಸು, ನವರತ್ನ ರಾಮರಾವ್, ಚೆನ್ನವೀರ ಕಣವಿ, ಕಂಬಾರ, ಎಚ್.ಎಂ.ಶಂಕರನಾರಾಯಣ ರಾವ್, ಹಾ.ಮಾ.ನಾಯಕ್, ಸೇಡಿಯಾಪು, ದೇ.ಜ.ಗೌ, ಪರ್ವತವಾಣಿ, ಚಿತ್ತಾಲ, ವ್ಯಾಸರಾಯ ಬಲ್ಲಾಳ, ಪಿ.ಲಂಕೇಶ್, ಎಚ್ಚೆಸ್ಕೆ, ಲಕ್ಷ್ಮೀನಾರಾಯಣ ಭಟ್ಟ, ಚದುರಂಗ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ರಾಷ್ಟ್ರಮಟ್ಟದ ಕವಿಗಳು, ಸಾಹಿತಿಗಳೂ ಸಹ ಇಲ್ಲಿಗೆ ಭೇಟಿ ನೀಡಿದ್ದಾರೆ. ಹಳೆಯ ಸಾಹಿತ್ಯ ದಿಗ್ಗಜರಿಗೆ ಒಂದು ಕಾಲದಲ್ಲಿ ಇದು ಒಟ್ಟಿಗೆ ಸೇರಿ ಸಾಹಿತ್ಯ ಚರ್ಚೆ ನಡೆಯುವ ಕೇಂದ್ರವೂ ಆಗಿತ್ತು. ಇಲ್ಲಿ ಪ್ರಕಟವಾಗಿರುವ ಪುಸ್ತಕಗಳಲ್ಲಿ ಕನ್ನಡದ ಹೆಚ್ಚುಕಡಿಮೆ ಎಲ್ಲ ಪ್ರತಿಷ್ಠಿತರ ಕೃತಿಗಳೂ ಸೇರಿವೆ. ಇವಲ್ಲದೆ ಅನೇಕ ಮೌಲಿಕ ಇಂಗ್ಲಿಷ್ ಕೃತಿಗಳೂ ಸಹ ಇಲ್ಲಿ ಪ್ರಕಟವಾಗಿವೆ. ಇಲ್ಲಿ ಪ್ರಕಟವಾಗಿರುವ ಅನೇಕ ಕೃತಿಗಳು, ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಭಾರತೀಯ ಭಾಷಾ ಸಮ್ಮಾನ್, ಪಂಪ ಪ್ರಶಸ್ತಿ, ಗೋವಿಂದ ಪೈ ಪ್ರಶಸ್ತಿ ಮುಂತಾದ ಪ್ರಶಸ್ತಿಗೆ ಭಾಜನವಾಗಿರುವುದು ಸಹ ಗಮನಾರ್ಹವಾಗಿದೆ. ಕೇವಲ ವ್ಯಾಪಾರ ವ್ಯವಹಾರಗಳಿಗೆ ಮಾತ್ರ ಸೀಮಿತವಾಗದೆ ಮೈಸೂರಿನ ಸಂಸ್ಕೃತಿಯನ್ನು ಬಿಂಬಿಸುವ ಕೇಂದ್ರವಾಗಿ, ಅಪಾರ ಜನಮೆಚ್ಚುಗೆಯನ್ನು ಗಳಿಸಿರುವ ಈ ಸಂಸ್ಥೆಯ ಹಿಂದೆ ಅದರ ರೂವಾರಿಗಳಾದ ಸತ್ಯನಾರಾಯಣ ರಾವ್, ಗೋಪಾಲಕೃಷ್ಣ ಮತ್ತು ಗುರುರಾಜ್ ಸಹೋದರರ ಶ್ರಮವಿದೆ. 2011ರಲ್ಲಿ  ಕನ್ನಡ ಪುಸ್ತಕ ಪ್ರಾಧಿಕಾರ ಅತ್ಯುತ್ತಮ ಪ್ರಕಾಶನ ಸಂಸ್ಥೆ ಎಂದು ಘೋಷಿಸಿ ಒಂದು ಲಕ್ಷ ರುಪಾಯಿ ನಗದು ಬಹುಮಾನವನ್ನು ಘೋಷಿಸಿತು. ಅದನ್ನು ಸ್ವೀಕರಿಸಿ, ಅದಕ್ಕೆ ತಮ್ಮ ಸಂಸ್ಥೆಯ ಪಾಲೂ ಸೇರಿಸಿ ಒಟ್ಟು ಎರಡೂವರೆ ಲಕ್ಷ ರು.ಗಳನ್ನು 1967ರಿಂದ ತಮ್ಮ ಸಂಸ್ಥೆಯೊಡನೆ ಮಧುರ ಬಾಂಧವ್ಯ ಹೊಂದಿರುವ 'ಕನ್ನಡಪ್ರಭ' ಪತ್ರಿಕೆಗೆ ನೀಡಿ, "ವರ್ಷದ ಅತ್ಯುತ್ತಮ ಕನ್ನಡ ಗ್ರಂಥಕ್ಕೆ" ಆ ಹಣವನ್ನು ಪ್ರಶಸ್ತಿ ರೂಪದಲ್ಲಿ ಕೊಡಬೇಕೆಂದು ಕೇಳಿಕೊಂಡಿದೆ. ಇದು ಆ ಸಂಸ್ಥೆಯ ಸಮಾಜಮುಖಿ ನಡವಳಿಕೆಯನ್ನೂ, ಸಾಹಿತ್ಯಕ್ಷೇತ್ರದ ಬೆಳವಣಿಗೆಗಿರುವ ಕಾಳಜಿಯನ್ನೂ ಸೂಚಿಸುತ್ತದೆ.


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com