ಗೌರಿಬಿದನೂರಿನಿಂದ ಕೆ.ಎ. ರವೀಂದ್ರನಾಥ್ ಅವರು ಪತ್ರ ಬರೆದಿದ್ದಾರೆ: "ದಿನಾಂಕ 20-06-14ರ ಮುಖಪುಟದ 'ಅಪಘಾತ: 12 ಮಂದಿ ಸಾವು' ಎಂಬ ಶಿರೋನಾಮೆಯ ಸುದ್ದಿಯ ಮೊದಲನೇ ಪ್ಯಾರಾದ 3 ಸಾಲಿನಲ್ಲಿ, 'ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ 12 ಮೃತಪಟ್ಟಿದ್ದಾರೆ' ಎಂದಿದೆ. ಆದರೆ ಇಲ್ಲಿ, 'ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ 12 ಮಂದಿ ಮೃತಪಟ್ಟಿದ್ದಾರೆ' ಎಂದಿರಬೇಕಿತ್ತು.
ಇನ್ನು, ಕೋಲಾರ ವಿಭಾಗದ ಎರಡನೇ ಪುಟದ 'ಆಳ ಉಳುಮೆ, ಸದೃಢ ಬದು ನಿರ್ಮಿಸಿ" ಎಂಬ ಸುದ್ದಿ ಎರಡನೇ ಪ್ಯಾರಾದ ಆರನೇ ಸಾಲಿನಲ್ಲಿ "ನಲೆಗಡಲೆ" ಎಂದಿದೆ. ಇಲ್ಲಿ "ನೆಲಗಡಲೆ" ಎಂದಿರಬೇಕಿತ್ತು. 11 ಸಾಲಿನಲ್ಲಿ "ಕೂಳ್ಳುವ" ಎಂದಿದೆ. ಅದು "ಕೊಳ್ಳುವ" ಎಂದಾಗಬೇಕಿತ್ತು.
ಇನ್ನು ಕೋಲಾರ ವಿಭಾಗದ 3ನೇ ಪುಟದ 'ಜೂಜುಕೋರರ ಬಂಧನ: ನಗದು ವಶ' ಎಂಬ ಸುದ್ದಿಯಲ್ಲಿ 'ಶಿಡ್ಲಘಟ್ಟ ಪಟ್ಟಣದಲ್ಲಿ ಅಂದಬಾಹರ್ ಆಡುತ್ತಿದ್ದವರು ಪೊಲೀಸರು ದಾಳಿ ನಡೆಸಿ ಜೂಜುಕೋರ
ರನ್ನು ಬಂಧಿಸಿದ್ದಾರೆ...' ಎಂದಿದೆ. ಆದರೆ ಇದು 'ಅಂದರ್ ಬಾಹರ್ ಆಡುತ್ತಿದ್ದ ಜೂಜುಕೋರರನ್ನು ಪೊಲೀಸರು ಬಂಧಿಸಿದ್ದಾರೆ" ಎಂದಿದ್ದರೆ ಸರಿಯಿತ್ತು.
ಕೋಲಾರ ವಿಭಾಗದ 11ನೇ ಪುಟದ "ಪ್ರಗತಿಗೆ ಸಿಬ್ಬಂದಿ ಕೊರತೆಯೇ ಅಡ್ಡಿ" ಎಂಬ ಸುದ್ದಿಯ 5ನೇ ಪ್ಯಾರಾದ 7ನೇ ಸಾಲಿನಲ್ಲಿ 'ವಿಸ್ತರಣಾಧಿಕಾರಿಗಳು ಹುದ್ದೆ' ಎಂದಿದೆ. ಇಲ್ಲಿ 'ವಿಸ್ತರಣಾಧಿಕಾರಿಗಳ ಹುದ್ದೆ' ಎಂದಿರಬೇಕು.
'ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ" ಎಂಬ ಸುದ್ದಿಯ ಎರಡನೇ ಸಾಲಿನಲ್ಲಿ 'ಇಡೇರಿಸುವಂತೆ' ಎನ್ನುವುದು 'ಈಡೇರಿಸುವಂತೆ' ಎಂದಾಗಬೇಕಿತ್ತು. ಎರಡನೇ ಪ್ಯಾರಾದ 5ನೇ ಸಾಲಿನಲ್ಲಿ, 'ಪಂಚಾಯ್ತಿಯ ಭ್ರಷ್ಟ ಅಧಿಕಾರಿಗಳನ್ನು ತನಿಖೆ ನಡೆಸುವುದು' ಎಂದಿದೆ. 'ಭ್ರಷ್ಟ ಅಧಿಕಾರಿಗಳನ್ನು ತನಿಖೆಗೊಳಪಡಿಸಲಾಗುವುದು' ಎಂದಿರಬೇಕಿತ್ತು. ಮತ್ತು 12ನೇ ಸಾಲಿನಲ್ಲಿ 'ಅಕ್ರಮವಾಗಿ ಅನುಭವದಲ್ಲಿರುವುದನ್ನು' ಎಂದಿದೆ. ಅದು 'ಅಕ್ರಮವಾಗಿ ಅನುಭವಿಸುತ್ತಿರುವವರನ್ನು' ಎಂದಿರಬೇಕಿತ್ತು. ಇನ್ನು 'ಗೆಲುವು ಖಚಿತ: ವೈಎಎನ್' ಎಂಬ ಸುದ್ದಿಯ 12ನೇ ಸಾಲಿನಲ್ಲಿ 'ಬೆಂಬಲ ಸೂಚಿಸಿದರುವುದೂ...' ಎಂದಿದೆ. ಇಲ್ಲಿ 'ಸೂಚಿಸಿರುವುದೂ' ಎಂದಾಗಬೇಕಿತ್ತು."
-ವಿಶ್ವೇಶ್ವರಭಟ್
Advertisement