ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯಲ್ಲಿ ಅರ್ಥಶಾಸ್ತ್ರ ಎಂ.ಎ. ಕಲಿಯುತ್ತಿರುವ ಕೃತಿರಾಜ್ ಹಿರೇಮಠ್ ಅವರು ಬರೆಯುತ್ತಾರೆ- 'ಜು.16ರ ಪತ್ರಿಕೆಯಲ್ಲಿ ಪುಟ 2ರಲ್ಲಿ 'ಬಳ್ಳಾರಿಯ ಕುಡಿವ ನೀರಿನ ಸಮಸ್ಯೆಗೆ ಮುಕ್ತಿ' ಎಂಬ ವರದಿಯಲ್ಲಿ ತುಂಗಭದ್ರಾ ಜಲಾಶಯದಿಂದ ಕಾಲುವೆಯ ಮೂಲಕ ನೀರು ಬಳ್ಳಾರಿಗೆ 'ತಲುಬೇಕಾದರೆ' 83 ಕಿ.ಮೀ. ಕ್ರಮಿಸಬೇಕಾಗುತ್ತದೆ ಎಂದಿದೆ. ಇಲ್ಲಿ 'ತಲುಪಬೇಕಾದರೆ' ಎಂದಾಗಬೇಕಿತ್ತು.'
'ಪುಟ 4ರಲ್ಲಿ 'ಸಂಧ್ಯಾ ಕಾಲದಲ್ಲಿ ಪ್ರತಿಭಾನ್ವಿತ ಹುನುಮಂತಪ್ಪಗೆ ಬೇಕು ನೆರವು' ಎಂಬ ಶೀರ್ಷಿಕೆಯಲ್ಲಿ 'ಹನುಮಂತಪ್ಪ' ಎಂದಾಗಬೇಕಿತ್ತು. ಇದೇ ವರದಿಯಲ್ಲಿ 'ಎಂಬತ್ತರ ಹರೆಯದ ರಾಟಿ ಹನುಮಂತಪ್ಪನ ಬದುಕು 'ಹೂಲಿಕೆ' ಕಾಣದ ಬಟ್ಟೆಯಂತಾಗಿದೆ' ಎಂದಿದೆ. ಅದು 'ಹೊಲಿಗೆ ಕಾಣದ' ಬಟ್ಟೆಯಂತಾಗಿದೆ ಎಂದಾಗಬೇಕಿತ್ತು.'
'ಹಾಗೆಯೇ 'ಬಹುಮುಖ ಪ್ರತಿಭೆ ಇರುವ ಹನುಮಂತಪ್ಪ ಅವರಿಗೆ ಇಳಿವಯಸ್ಸಿನಲ್ಲೂ ದುಡಿದು ತಿನ್ನುವ ಹಂಬಲ. ಆದರೆ ಸರ್ಕಾರದಿಂದ ಬರುತ್ತಿರುವ ವೃದ್ಧಾಪ್ಯ ಸರಿಯಾಗಿ ಬರುತ್ತಿಲ್ಲ' ಎಂದಿದೆ. ಸಂಪಾದಕರೇ ಈಗಾಗಲೇ ಹನುಮಂತಪ್ಪ ಅವರಿಗೆ ಈಗಾಗಲೇ ವೃದ್ಧಾಪ್ಯ ಆವರಿಸಿಕೊಂಡಿದೆ. ಸರ್ಕಾರದಿಂದ ವೃದ್ಧಾಪ್ಯವೇನು ಬರುವುದು ಬೇಡ. ಪಾಪ ಅವರಿಗೆ ಸರ್ಕಾರದಿಂದ ವೃದ್ಧಾಪ್ಯ ವೇತನ ಬಂದರೆ ಸಾಕಾಗಿದೆ ಅಲ್ಲವೇ? 'ವೇತನ' ಎಂಬ ಪದ ಇಲ್ಲಿ ಕಾಣೆಯಾಗಿದೆ.'
'ಪುಟ 4ರಲ್ಲಿ 'ಶಂಕಿಲ್ ಡೆಂಘಿಗೆ ಬಾಲಕ ಬಲಿ' ಎಂಬ ವರದಿಯಲ್ಲಿ 'ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಡೆಂಘಿ ಜ್ವರದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿರುವ ಎಲ್ಲಾ ದಾಖಲೆಗಳನ್ನು ನೀಡಿದ್ದಾರೆ ಎಂದು ಬಾಲಕರು- ಪೋಷಕರು ತಿಳಿಸಿದ್ದಾರೆ' ಎಂದು ಪ್ರಕಟವಾಗಿದೆ. ಇಲ್ಲಿ 'ಬಾಲಕನ ಪೋಷಕರು' ಎಂದಾಗಬೇಕಿತ್ತು' ಎಂದಿದ್ದಾರೆ.
ತುಮಕೂರಿನಿಂದ ಜಿ. ರಾಜನ್ ಅವರು 'ಕ.ಪ್ರ. ವಿಚಾರ ತೋರಣದಲ್ಲಿ ಸಂಪಾದಕರ ಹೆಸರು ಹುಡುಕಬೇಕಾ ಎಂದು ಬರೆದಿರುತ್ತೀರಿ. ಈ ಬಗ್ಗೆ ಹಿಂದೆ ಬರೆದಿದ್ದೆ. ಹಲವು ದಶಕಗಳಿಂದ ಸಂಪಾದಕರ ಹೆಸರು ಪತ್ರಿಕೆಯ ಹೆಸರಿನ ಕೆಳಗಡೆ ಇರುತ್ತಿತ್ತು. ಖಾದ್ರಿ ಶಾಮಣ್ಣನವರು ಅವರ ಸಹಿಯೊ ಇರುತ್ತಿತ್ತು. ಈ ಯಾಕೆ ಮುದ್ರಿಸುವುದಿಲ್ಲ?'
'ಜು.26 ಪತ್ರಿಕೆಯಲ್ಲಿ ಸ್ವಾತಂತ್ರ್ಯ ಹರಣದಿಂದಾಗಿ 'ತಿಂಗು' ಲೇಖನ- ಮೂರನೇ ಪ್ಯಾರಾದಲ್ಲಿ 'ದನಸ್ತೋಮ' 'ಜನಸ್ತೋಮ' ಎನ್ನುವುದನ್ನು ಎಂದು ಮುದ್ರಿಸಿದ್ದಾರೆ. ಅದೇ ಲೇಖನ 3ನೇ ಕಾಲಂ 2ನೆಯ ಸಾಲಿನ 'ಕಛೇರಿ' ಬದಲಾಗಿ 'ಕಚೇರಿ' ಎಂದು ಮುದ್ರಿಸಲಾಗಿದೆ. ಇಂಥಹ ತಪ್ಪುಗಳು ಅದರಲ್ಲೂ ಜನಸ್ತೋಮಕ್ಕೆ 'ದನಸ್ತೋಮ' ಏನು ಅರ್ಥ ಬರುತ್ತೆ. ದಯವಿಟ್ಟು ಇಂತಹ ತಪ್ಪುಗಳು ಆಗದಿರಲಿ' ಎಂದಿರಲಿದೆ.
'ಕಛೇರಿ' ಮತ್ತು 'ಕಚೇರಿ' ಬಗ್ಗೆ ಈಗಾಗಲೇ ಈ ಅಂಕಣದಲ್ಲಿ ಬರೆಯಲಾಗಿದೆ. ಆದ್ದರಿಂದ ಮತ್ತೆ ವಿವರಣೆ ಅಗತ್ಯವಿಲ್ಲ.
-ವಿಶ್ವೇಶ್ವರಭಟ್
Advertisement