ನಕಲಿ ವೈದ್ಯರ ಹಾವಳಿ ತಡೆಗಟ್ಟಿ

Updated on

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಅವರ ಅವೈಜ್ಞಾನಿಕ ಚಿಕಿತ್ಸೆಯು ಮುಗ್ಧ ಜನರ ಪ್ರಾಣಕ್ಕೆ ಸಂಚಕಾರಿಯಾಗಿದೆ. ವೈದ್ಯಕೀಯ ತರಬೇತಿ ಪಡೆಯದ, ಯಾವುದೆ ಪ್ರಮಾಣಪತ್ರ ಹೊಂದದ ಇವರು ಸಣ್ಣ ಪುಟ್ಟ ಆಸ್ಪತ್ರೆಗಳಲ್ಲಿ ತಾತ್ಕಾಲಿಕ ಕಂಪೌಂಡರ್ ಆಗಿ ಕಾರ್ಯನಿರ್ವಹಿಸಿದ ಅನುಭವದ ಮೇಲೆಯೇ ಸ್ವತಃ ಕ್ಲಿನಿಕ್ ತೆಗೆದು, ರೋಗಿಗಳ ಮೇಲೆ ಔಷಧಗಳ ಪ್ರಯೋಗ ಮಾಡುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಇನ್ನು ಕೆಲವರು ನಾಟಿ-ವನಸ್ಪತಿಗಳಿಂದ ಚಿಕಿತ್ಸೆ ಕೊಡುವುದಾಗಿ ಪ್ರಚಾರ ಗಿಟ್ಟಿಸಿ, ಆಯುರ್ವೇದ ದವಾಖಾನೆ ಎಂಬ ಬೋರ್ಡ್ ನೇತುಹಾಕಿ, ಮಧುಮೇಹ-ಏಡ್ಸ್‌ನಂತಹ ರೋಗಗಳನ್ನು ಗುಣಪಡಿಸುವುದಾಗಿ ನಂಬಿಸಿ ರೋಗಿಗಳಿಂದ ಸಾವಿರಾರು ರುಪಾಯಿಗಳನ್ನು ದೋಚುತ್ತಿದ್ದಾರೆ.
ತಮ್ಮ ಕೈಚಳಕದಿಂದ ಕಣ್ಣುಬೇನೆಗೆ ಕಣ್ಣಿನಿಂದ ಹರಳು ತೆಗೆಯುವುದು, ಕಿವಿಬೇನೆಗೆ ಕಿವಿಯಿಂದ ಹುಳುಗಳನ್ನು ತೆಗೆಯುವುದಾಗಿ ನಂಬಿಸಿ, ಸಾವಿರಾರು ರುಪಾಯಿಗಳನ್ನು ದೋಚುವುದಲ್ಲದೇ ಜನರನ್ನು ಮೂಢರನ್ನಾಗಿ ಮಾಡುತ್ತಿದ್ದಾರೆ. ನಕಲಿ ವೈದ್ಯರ ವಿರುದ್ಧ ಆಗಾಗ ಜಿಲ್ಲಾ ಆಯುಷ್ ಮತ್ತು ಪೊಲೀಸ್ ಇಲಾಖೆ ಕರ್ನಾಟಕ ಆಯುರ್ವೇದ, ನ್ಯಾಚುರೋಪತಿ, ಸಿದ್ಧ, ಯುನಾನಿ ಮತ್ತು ಯೋಗ ಪ್ರಾಕ್ಟಿಸನರ್ ಆ್ಯಂಡ್ ಮಿಸಲೇನಿಯಸ್ ಆ್ಯಕ್ಟ್ 1960ರ ಅನ್ವಯ ದೂರು ದಾಖಲಿಸುತ್ತಿದ್ದು, ಇದರಲ್ಲಿ ದಂಡದ ಮೊತ್ತ ಅತ್ಯಲ್ಪವಿದೆ. ಇದನ್ನು ಸುಲಭವಾಗಿ ಭರಿಸುವ ನಕಲಿಗಳಿಗೆ ಕಾನೂನಿನ ಭಯವಿಲ್ಲದಂತಾಗಿದೆ. ಸರ್ಕಾರ ಎಚ್ಚೆತ್ತು 1960ರ ಕಾಯ್ದೆಗೆ ತಿದ್ದುಪಡಿ ತರಲಿ. ದಂಡದ ಮೊತ್ತ ಲಕ್ಷಕ್ಕೆ ಏರಿಸಿ ಪುನರಾವರ್ತಿತ ಅಪರಾಧಗಳಿಗೆ ಜೈಲು ಶಿಕ್ಷೆ ವಿಧಿಸಲಿ.
- ಡಾ ಸಮೀರ ಎಲ್. ಹಾದಿಮನಿ

ಸೇತುವೆ ಅಗತ್ಯ

ಯಾದಗಿರ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರದ ಹತ್ತಿರ ಕೃಷ್ಣೆಯ ತಟದಲ್ಲಿ ಸೂರ್ಯನ ಪತ್ನಿ ಛಾಯೆಯ ದೇಗುಲವಿದೆ. ನಾರಾಯಣಪುರದಿಂದ ಈ ದೇಗುಲಕ್ಕೆ ಹೋಗಲು ಬಸ್ಸಿನ ಸೌಕರ್ಯವಿಲ್ಲ. ಪ್ರವಾಸಿಗಳು ಸ್ವಂತ ಇಲ್ಲವೇ ಬಾಡಿಗೆ ವಾಹನ ಮಾಡಿಕೊಂಡು ಹೋಗಬೇಕು. ಛಾಯಾ ಭಗವತಿ ದೇವಾಲಯದಿಂದ ಕೃಷ್ಣೆಯ ಆಚೆ ತಟದಲ್ಲಿ ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿಗೆ ಸೇರಿದ ಆದಿಲಶಾಹಿ ನಿರ್ಮಿತ ಜಲದುರ್ಗವು ಕಾಣುತ್ತದೆ. ಛಾಯಾ ಭಗವತಿಯಿಂದ ಈ ದುರ್ಗವು ಸುಮಾರು ಒಂದು ಕಿ.ಮೀ ಕಣ್ಣಳತೆಯ ಅಂತರದಲ್ಲಿದೆ. ಕಡಿದಾದ ಪ್ರದೇಶದಲ್ಲಿರುವ ಈ  ಪ್ರಖ್ಯಾತ ಜಲದುರ್ಗವನ್ನು ನೋಡಲು ಮತ್ತೆ ನಾರಾಯಣಪುರ-ಲಿಂಗಸೂರು ಮಾರ್ಗ ಬಳಸಿ ನಲವತ್ತು ಕಿ.ಮೀ ಪ್ರಯಾಣಿಸಬೇಕು. ಪ್ರವಾಸಿಗರ ಹಣ, ಸಮಯ ಉಳಿತಾಯದ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿ ನಿಟ್ಟಿನಿಂದ ಶೀಘ್ರವೇ ಸುರಪುರ ಮತ್ತು ಲಿಂಗಸೂರು ತಾಲೂಕಿನ ಸಂಪರ್ಕ ಕೊಂಡಿಯಾಗುವಂತೆ ಕೃಷ್ಣಾ ನದಿಗೆ ಸೇತುವೆಯೊಂದನ್ನು ನಿರ್ಮಿಸುವುದು ಅವಶ್ಯವಿದೆ.
-ಪ್ರೊ. ಎ.ಎಲ್.ನಾಗೂರ, ಬಿಜಾಪೂರ

ಅಪಾಯಕಾರಿ ಮುರ್ಡೇಶ್ವರ ಬೀಚ್

ಮುಂಗಾರು ವರ್ಷಧಾರೆಯ ಸಂದರ್ಭ ಕೆಲವೊಮ್ಮೆ -ಇತರ ದಿವಸಗಳಲ್ಲೂ ಅಮಾಯಕ ಪ್ರವಾಸಿಗಳನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಬೀಚ್‌ನಲ್ಲಿ ಪ್ರವಾಸಿಗಳು ಸಮುದ್ರದ ನೀರಿಗಿಳಿಯದಂತೆ ಲಕ್ಷ್ಮಣರೇಖೆ ವಿಧಿಸಬೇಕು. ಈಗಾಗಲೇ ಹತ್ತು ಹಲವಾರು ಮಾನವ ಆಹುತಿಯನ್ನು ಪಡೆದ ಪಶ್ಚಿಮ ಸಮುದ್ರದ ಆ ಭಾಗದಲ್ಲಿ ಜೀವರಕ್ಷಕ ಬೋಟುಗಳು ನಿರಂತರ ಕಾರ್ಯ ಪ್ರವೃತ್ತವಾಗಿರಬೇಕಾಗಿದೆ. ಜೊತೆಯಲ್ಲಿ ಪರಿಣಿತ ಈಜುಗಾರರು ಸಹ ತೀವ್ರ ನಿಗಾ ವಹಿಸಿ ಮಾನವ ಜೀವಗಳ ರಕ್ಷಣೆ ಮಾಡಬೇಕಾಗಿದೆ. ಪಶ್ಚಿಮ ಸಮುದ್ರದ ಭಾರಿ ಅಲೆಗಳ ಘರ್ಜನೆಯಿಂದ ಉತ್ತೇಜಿತಗೊಳ್ಳುವ ಯುವಕರನ್ನು ನೀರಿಗಿಳಿಯದಂತೆ ನಿರ್ದಾಕ್ಷಿಣ್ಯವಾಗಿ ತಡೆಯಬೇಕಾಗಿದೆ. ಕರಾವಳಿ ರಕ್ಷಕ ಬೋಟುಗಳ ಪಾತ್ರವೂ ಇಲ್ಲಿ ಮಹತ್ವದ್ದಾಗಿದೆ. ಸರ್ಕಾರ ಎಚ್ಚೆತ್ತುಕೊಳ್ಳಲಿ.
-ಕೋಟೇಶ್ವರ ಸೂರ್ಯನಾರಾಯಣರಾವ್, ಬೆಂಗಳೂರು

ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com