ಬೆಂಗಳೂರಿನಲ್ಲಿ, ಹಾಗೂ ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳು ಹೆಚ್ಚಿರುವ ವರದಿಗಳ ವಿಚಾರದಲ್ಲಿ ಕಂಡು ಬಂದ ಜನರ ಆಕ್ರೋಶವನ್ನು ಗಮನಿಸಿ, ಪೊಲೀಸರು ವಿಶೇಷ ಕ್ರಮಗಳನ್ನು ಕೈಗೊಂಡು ಬೀದಿ ಕಾಮಣ್ಣರಿಗೆ ಪಾಠ ಕಲಿಸುವುದರ ಜತೆಯಲ್ಲೇ ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವ ಒಂದು ಆಂದೋಲನವನ್ನೇ ಆರಂಭಿಸಿದಂತಿದೆ.
ನಾಲ್ಕು ದಿನಗಳ ಆಂದೋಲನದಲ್ಲಿ ಮೊದಲ ದಿನವಾಗಿದ್ದ ಭಾನುವಾರ ಬೆಂಗಳೂರಿನಲ್ಲಿ ಮಹಿಳೆಯರನ್ನು ಚುಡಾಯಿಸಿ, ರೇಗಿಸಿ, ಗೋಳುಗುಟ್ಟಿಸಿ ಕಿರುಕುಳ ಕೊಡಲು ಪ್ರಯತ್ನಿಸಿದ್ದ 499 ಕಾಮಣ್ಣರಿಗೆ ತಕ್ಕ ಶಾಸ್ತಿಯಾಗಿದೆ. ಮೊದಲ ಅಪರಾಧಕ್ಕೆ 100 ರುಪಾಯಿ ಜುಲ್ಮಾನೆ ಅಥವಾ ಜೈಲು, ಎರಡನೇ ಅಪರಾಧಕ್ಕೆ ಒಂದು ತಿಂಗಳ ಜಾಮೀನಿಲ್ಲದ ಬಂಧನದ ಅಧಿಕಾರವಿರುವ ಪೊಲೀಸ್ ಕಾಯಿದೆಯ ವಿಧಿಗಳನ್ನು ಬಳಸುವ ಬೆದರಿಕೆಯನ್ನು ಒಡ್ಡಲಾಗಿದೆ. ಈ 'ಅಪರಾಧಕ್ಕೆ' ಸಾಕ್ಷಿಗಳ ಅಗತ್ಯ ಇದೆಯೋ ಇಲ್ಲವೋ ಗೊತ್ತಿಲ್ಲ. ಪೊಲೀಸ್ ಅಧಿಕಾರಿಗಳು ಸಾಮಾನ್ಯ ಜನರಂತೆ ಓಡಾಡಿ ಅಪರಾಧಿಗಳನ್ನು ಹಿಡಿದು, ನ್ಯಾಯಾಲಯಕ್ಕೆ ಕಳುಹಿಸುವ ವ್ಯವಸ್ಥೆ ಇದು. ನಿಜ, ಮಹಿಳೆಯರನ್ನು ಬಹಿರಂಗವಾಗಿ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುವುದನ್ನು ನಾಗರಿಕ ಸಮಾಜ ಸಹಿಸಬಾರದು. ಅಂತಹ ಕೀಳು ಚಟುವಟಿಕೆಯನ್ನು ಮಟ್ಟಹಾಕಲು ದಂಡಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ದಂಡದ ಜತೆಗೆ ಕಾಮಣ್ಣರ ಮಾನ ಮರ್ಯಾದೆಯೂ ಹರಾಜಾಗುತ್ತದೆ. ಆಗಲೇ ಬೇಕು.
ಆದರೆ, ಚುಡಾಯಿಸುವುದು, ರೇಗಿಸುವುದು, ಗೋಳುಗುಟ್ಟಿಸುವುದು - ಇಂತಹ ಪಡೆಗಳಿಗೆ ಕಾಯಿದೆಯ ನಿಘಂಟಿನ ಅರ್ಥ ವಿವರಣೆಯನ್ನು ಪ್ರಕಟಿಸಿಲ್ಲ. ಮಫ್ತಿ ಪೊಲೀಸ್ ವ್ಯವಸ್ಥೆ ಎಂದರೆ ನಕಲಿ ಪೊಲೀಸರ ಹಾವಳಿಗೆ, ಭ್ರಷ್ಟಾಚಾರಕ್ಕೆ, ಬಹಿರಂಗ ಆಹ್ವಾನ ನೀಡಿದಂತೆಯೇ ಆದೀತೇನೋ ಎನ್ನುವ ಅಳುಕೂ ನಾಗರಿಕ ಸಮಾಜದ ಕೆಲವು ವಲಯಗಳಲ್ಲಿ ಇದೆ. ಈಗಿನ ಕ್ರಮ ದುರುಪಯೋಗವಾಗದಂತೆ, ಅಮಾಯಕರನ್ನು ಗೋಳುಗುಟ್ಟಿಸಲು ಅವಕಾಶವಿಲ್ಲದಂತೆ ಜಾರಿಗೆ ತರುವುದು ಪೊಲೀಸರ ಕರ್ತವ್ಯ.
Advertisement