ಕಳೆದ ಐದು ವರ್ಷಗಳಲ್ಲಿ ಸರ್ಕಾರ ಮೊದಲ ಬಾರಿಗೆ ಒಂದು ಪ್ರಮುಖ ಆರ್ಥಿಕ ಸುಧಾರಣೆಯ ಕ್ರಮಕ್ಕೆ ನಿಖರವಾದ ಸ್ವರೂಪವನ್ನು ಕೊಡಲು ನಡೆಸಿರುವ ಪ್ರಯತ್ನ ಸುಧಾರಿತ ವಿಮಾ ನಿಯಂತ್ರಣ ವಿಧೇಯಕ. ಮೂಲಭೂತವಾಗಿ ವಿಮಾ ವಲಯದ ಪ್ರಗತಿಗೆ ಈಗಿನ ಕಾಯಿದೆಯಲ್ಲಿ ಬದಲಾವಣೆಗಳು ಅಗತ್ಯ ಎನ್ನುವುದನ್ನು ದೇಶದ ಬಹುತೇಕ ಜನರು ಒಪ್ಪಿದ್ದಾರೆ.
ಯುಪಿಎ ಸರ್ಕಾರ ಸಿದ್ಧಪಡಿಸಿ, ಸಂಸದೀಯ ಸಮಿತಿಯ ಪರಿಶೀಲನೆಗೆ ಕಳುಹಿಸಿದ್ದ ವಿಮಾ ವಿಧೇಯಕದಲ್ಲಿ ಹಲವು ಗಮನಾರ್ಹವಾದ ಮಾರ್ಪಾಟುಗಳನ್ನು ಅಳವಡಿಸಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ವಿಧೇಯಕವನ್ನು ರೂಪಿಸಿದ್ದು, ಅದಕ್ಕೆ ಸಾಧ್ಯವಿರುವಷ್ಟೂ ಅಧಿಕ ಪ್ರಮಾಣದ ರಾಜಕೀಯ ಬೆಂಬಲ ಪಡೆಯಲು ನಡೆಸಿದ ಮಾತುಕತೆ ಸಂಧಾನ ವಿಫಲವಾದಂತಿದೆ. ಸೋಮವಾರ ರಾಜ್ಯಸಭೆಯಲ್ಲಿ ನೂತನ ವಿಧೇಯಕವನ್ನು ಮಂಡಿಸುವ ಪ್ರಸ್ತಾಪವೂ ಇತ್ತು. ಈಗ ಸರ್ವ ಪಕ್ಷಗಳ ಸಭೆಯಲ್ಲಿ ವಿಧೇಯಕ ಕುರಿತು ಒಮ್ಮತ ಮೂಡದಿರುವುದರಿಂದ ಆ ಪ್ರಕ್ರಿಯೆ ಮುಂದಕ್ಕೆ ಹೋಗಿದೆ.
ರಾಜ್ಯ ಸಭೆಯಲ್ಲಿ ಆಳುವ ಕೂಟಕ್ಕೆ ಬಹುಮತವಿಲ್ಲ. ಅಲ್ಲಿ ಇತರ ಪಕ್ಷಗಳ ಸಹಕಾರದಿಂದ ಬಹುಮತ ಪಡೆಯುವುದು ಸಾಧ್ಯವಾದರೆ ಈಗಿನ ಕ್ರಮಕ್ಕೆ ಸಮಗ್ರ ರಾಷ್ಟ್ರೀಯ ರಾಜಕೀಯ ಬಹುಮತ ಸಿಕ್ಕಿದಂತೆಯೇ ಆಗುತ್ತದೆ ಎನ್ನುವ ಅಭಿಪ್ರಾಯವೇ ರಾಜ್ಯಸಭೆಯಲ್ಲಿ ಅದನ್ನು ಮಂಡಿಸಲು ಕಾರಣ. ರಾಜ್ಯ ಸಭೆಯಲ್ಲಿ ಈಗಿನ ಲೆಕ್ಕದಲ್ಲಿ ರಾಜ್ಯ ಸಭೆಯಲ್ಲಿ ವಿಧೇಯಕಕ್ಕೆ ಬೆಂಬಲ ನೀಡುವವರ ಸಂಖ್ಯೆ 69. ಕಾಂಗ್ರೆಸ್ಸೂ ಸೇರಿದಂತೆ ಅದನ್ನು ವಿರೋಧಿಸುವವರ ಸಂಖ್ಯೆ 114. ಬಹುಜನ ಸಮಾಜ ಪಾರ್ಟಿ, ಅಣ್ಣಾ ಡಿಎಂಕೆ, ತೃಣಮೂಲ ಕಾಂಗ್ರೆಸ್ ಪಕ್ಷಗಳು ತಮ್ಮ ಅಭಿಪ್ರಾಯವನ್ನು ಪ್ರಕಟಿಸಿಲ್ಲ. ಪಕ್ಷೇತರರಾಗಿರುವ ಹತ್ತು ಸದಸ್ಯರ ವಿಚಾರ ಗೊತ್ತಿಲ್ಲ. ನಾಮಕರಣ ಸದಸ್ಯರಲ್ಲಿ ಹತ್ತು ಸದಸ್ಯರನ್ನು ಕಾಂಗ್ರೆಸ್ಸೇ ನಾಮಕರಣ ಮಾಡಿದ್ದರಿಂದ ಆ ಪಕ್ಷದ ನಿಲುವನ್ನೇ ಅವರು ಬೆಂಬಲಿಸಬಹುದು.
ಈ ವಿಧೇಯಕಕ್ಕೆ ಕಮ್ಯುನಿಸ್ಟ್‌ರ ಹಾಗೂ ಅವರ ಸಂಗಾತಿಗಳ ವಿರೋಧ ನಿರೀಕ್ಷಿತವಾದದ್ದೇ. ಆದರೆ ಅವರ ಧ್ವನಿ ಈ ಸಂಸತ್ತಿನಲ್ಲಿ ಕ್ಷೀಣ. ಈಗಾಗಲೇ ಕಮ್ಯುನಿಸ್ಟ್ ನೇತೃತ್ವದ ನೌಕರ- ಕಾರ್ಮಿಕ ಸಂಘಟನೆಗಳ ವಿರೋಧವೂ ಪ್ರಕಟವಾಗಿದೆ. ಕಾಂಗ್ರೆಸ್ ವಿಧೇಯಕಕ್ಕೂ, ಬಿಜೆಪಿ ವಿಧೇಯಕಕ್ಕೂ ಇರುವ ವ್ಯತ್ಯಾಸಗಳಲ್ಲಿ ಪ್ರಮುಖವಾದದ್ದು ವಿಮಾ ವಲಯದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಶೇಕಡಾ 29 ರಿಂದ 49ಕ್ಕೇರಿಸುವುದು. ವಿಮಾ ಕಂಪೆನಿಗಳ ಬಂಡವಾಳದಲ್ಲಿ ಸ್ವದೇಶೀ ಖಾಸಗಿ ಬಂಡವಾಳದ ಪಾಲೂ ಇರುವುದರಿಂದ ಕೆಲವು ಖಾಸಗಿ ಕಂಪೆನಿಗಳು ವಿದೇಶೀ ಕಂಪನಿಗಳ ಜತೆ ಸೇರಿಕೊಂಡರೂ, ಇಡೀ ಉದ್ಯಮದ ಮೇಲಿನ ನಿಯಂತ್ರಣ ವಿದೇಶಿ ಬಂಡವಾಳಿಗರ ಪಾಲಾದೀತು ಎನ್ನುವ ಅನಿಸಿಕೆ ಕಮ್ಯುನಿಸ್ಟರದ್ದು. ಆದರೆ ಶೇಕಡಾ 29ರಷ್ಟು ಬಂಡವಾಳ ಹೂಡಿಕೆಯ ಮಿತಿ ವಿಧಿಸಿರುವುದರಿಂದ (ಅದು ಈಗಿನ ನಿಯಮ) ಹೆಚ್ಚು ಬಂಡವಾಳವನ್ನು ಆಕರ್ಷಿಸುವುದೂ ಸಾಧ್ಯವಾಗಿಲ್ಲ. ವಿಮಾ ರಕ್ಷಣೆಯ ವ್ಯಾಪ್ತಿಯನ್ನು ಹೆಚ್ಚಿಸುವುದಕ್ಕೂ ಆಗಿಲ್ಲ ಎನ್ನುವುದು. ಒಂದು ವೇಳೆ ವಿದೇಶೀ ಬಂಡವಾಳದ ಮಾಲಿಕತ್ವದ ಸಂಸ್ಥೆ ದೇಶದ ಹಿತಕ್ಕೆ, ಇಲ್ಲಿನ ಜನಗಳ ಹಿತಕ್ಕೆ, ಅಥವಾ ಕಾಯಿದೆಯ ವಿರುದ್ಧ ಯಾವುದಾದರೂ ಕ್ರಮ ಕೈಗೊಂಡರೆ ಅದರ ನಿವಾರಣೆಗೆ ವಿಮಾ ನಿಯಂತ್ರಣ ಪ್ರಾಧಿಕಾರಕ್ಕೆ ಅಧಿಕಾರ ಇದ್ದೇ ಇದೆ ಎನ್ನುವುದು ಸರ್ಕಾರದ ವಾದ.
ಈಗ ಒಮ್ಮತ ಮೂಡುವುದು ಸಾಧ್ಯವಾಗದೇ ಹೋದರೆ ಸರ್ಕಾರ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿ, ರಾಜ್ಯಸಭೆ ಅದನ್ನು ಹಿಂದಕ್ಕೆ ಕಳುಹಿಸಿದರೂ ಮತ್ತೆ ಅಂಗೀಕರಿಸಿ ಕಾಯಿದೆಯನ್ನಾಗಿ ಮಾಡಬಹುದು. ಈಗ ಮಂಡನೆಯಾಗಿರುವ ವಿಧೇಯಕ ಬಿಜೆಪಿಯ ಆರ್ಥಿಕ ನೀತಿಯ ಬುನಾದಿ ಸ್ವರೂಪದ್ದು. ಅದನ್ನು ಯಾವುದಾದರೊಂದು ಮಾರ್ಗದಲ್ಲಿ, ಇತರ ಪಕ್ಷಗಳ ಸಹಕಾರದಿಂದ ಸಾಧ್ಯವಾದರೆ, ಇಲ್ಲವಾದರೆ ಸಂವಿಧಾನದ ವಿಶೇಷ ವಿಧಿಯಂತೆ ಅಂಗೀಕರಿಸುವುದು ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆ. ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸಿದರೆ ಅದು ಸರಿಯಾದ ಮಾರ್ಗವೇ.
Advertisement