ಡಾ. ಶ್ರೀನಿವಾಸ ಕವಲಗುಡ್ಡ ಅವರದ್ದು ವೈದ್ಯಲೋಕದಲ್ಲಿ ಚಿರಸ್ಥಾಯಿಯಾಗಿರುವ ಹೆಸರು. ವೈದ್ಯಕೀಯ ವೃತ್ತಿಯೆಂದರೆ ಹಣ ಮಾಡುವ ದಂಧೆ ಎಂದೇ ಭಾವಿಸಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇಂದಿನ ಕಾಲದಲ್ಲಿ ಕವಲಗುಡ್ಡ ಅಂಥವರ ಸಂಖ್ಯೆ ತುಂಬಾ ಕಡಿಮೆ. ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಪರಿಣಿತರಾಗಿದ್ದ ಈ ವೈದ್ಯರಿಗೆ ಬಡವರು ಮತ್ತು ಶ್ರೀಮಂತರೆಂಬ ಬೇಧವಿರಲಿಲ್ಲ. ತಾಳ್ಮೆಯಿಂದ ರೋಗಿಗಳ ಅಳಲನ್ನು ಆಲಿಸಿ ಚಿಕಿತ್ಸೆ ನೀಡುತ್ತಿದ್ದ ಅವರ ಮನೋಭಾವ, ಯಾರಿಂದಲೂ ಹಣ ಸ್ವೀಕರಿಸಬಾರದೆಂಬ ಅವರ ಅಚಲ ನಿರ್ಧಾರ, ಎಲ್ಲರ ಮೆಚ್ಚುಗೆ ಗಳಿಸಿತ್ತು. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಕೆಲಕಾಲ ಸೇವೆಸಲ್ಲಿಸುವಾಗ ಎಷ್ಟೋ ವೇಳೆ ಔಷಧಿ ತರಿಸಿಕೊಳ್ಳಲು ಅಸಮರ್ಥರಾದ ರೋಗಿಗಳಿಗೆ ತಮ್ಮ ಸ್ವಂತ ಹಣದಿಂದ ಔಷಧಿ ತರಿಸಿ ಕೊಟ್ಟಿದ್ದೂ, ಆರೈಕೆಗಾಗಿ ತಮ್ಮ ಜೇಬಿನಿಂದ ಹಣ ತೆಗೆದು ಕೊಟ್ಟಿದ್ದೂ ಇದೆ. ಅವರು ತುಂಬ ಸರಳ ಜೀವನ ನಡೆಸುತ್ತಿದ್ದರು. ಅವರ ಮನೆಯಲ್ಲಿ ಯಾವ ಬೆಲೆಬಾಳುವ ಪೀಠೋಪಕರಣಗಳೂ ಇರಲಿಲ್ಲ. ಅವರು ಮೌಲ್ಯಗಳ ತಪಸ್ವಿಯಾಗಿ ಸೇವೆಯನ್ನೇ ವ್ರತವನ್ನಾಗಿ ಸ್ವೀಕರಿಸಿ ಹೆಸರು ಮಾಡಿದ್ದರು. ರೋಗಿಗಳ ಸೇವೆಯಲ್ಲಿಯೇ ದೇವರನ್ನು ಕಾಣುತ್ತಿದ್ದ ಕವಲಗುಡ್ಡರಿಗೆ ಸಮಯಾಸಮಯದ ಎಚ್ಚರವಿರಲಿಲ್ಲ. ಒಮ್ಮೆ ಅವರ ಮಗಳ ನಿಶ್ಚಿತಾರ್ಥ. ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಓಡಾಡುತ್ತಿದ್ದಾರೆ. ಇನ್ನೇನು ವರನ ಕಡೆಯವರು ಆಗಮಿಸಿ ಮುಂದಿನ ಕಾರ್ಯಕ್ರಮ ನಡೆಯಬೇಕು, ಅಷ್ಟರಲ್ಲಿ ಆಸ್ಪತ್ರೆಯಿಂದ ಫೋನ್ ಬಂತು. ಒಬ್ಬ ರೋಗಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದೆ, ದಯಮಾಡಿ ತಕ್ಷಣ ಬರಬೇಕು ಎಂಬ ಕರೆ. ಕವಲಗುಡ್ಡರು ಹಿಂದೆ ಮುಂದೆ ಯೋಚಿಸಲಿಲ್ಲ. ಒಂದೇ ಮನಸ್ಸಿನಿಂದ ಆಸ್ಪತ್ರೆಗೆ ಹೊರಟೇ ಬಿಟ್ಟರು. ಮನೆಯವರಿಗೆಲ್ಲಾ ಅಸಮಾಧಾನ, ಬೀಗರ ಕಡೆಯವರು ಬರುತ್ತಿರುವಾಗ ವಧುವಿನ ತಂದೆ ಇರದಿದ್ದರೆ ಹೇಗೆ? ಹೀಗಾಗಿ ಅವರಿಗೆ ಸ್ವಲ್ಪ ತಡೆದು ಹೋಗಲು ಆಗ್ರಹಿಸಿದರು. ಆದರೆ ಕವಲಗುಡ್ಡರು ಕೇಳಿದರೆ ತಾನೆ! "ನಿಶ್ಚಿತಾರ್ಥ ನೀವು ಮಾಡಿಕೊಳ್ಳಿ, ನಾನು ಶಸ್ತ್ರಚಿಕಿತ್ಸೆ ಮಾಡಿದ ನಂತರ ಸೇರಿಕೊಳುತ್ತೇನೆ" ಎಂದವರೇ ಪ್ರತಿಕ್ರಿಯೆ ಬರುವುದರೊಳಗೆ ಹೊರಟೇ ಬಿಟ್ಟರು. ಅವರಿಗೆ ತಮ್ಮ ಸ್ವಂತ ಕೆಲಸಕ್ಕಿಂತ ಕರ್ತವ್ಯ ಪರಿಪಾಲನೆ ಅತಿಮುಖ್ಯವಾಗಿತ್ತು. ಮತ್ತೊಮ್ಮೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಒಬ್ಬ ಬಡ ರೋಗಿಗೆ ಚಿಕಿತ್ಸೆ ನೀಡಿ ಮನೆಗೆ ಮರಳಿದಾಗ ಸರಿರಾತ್ರಿಯಾಗಿತ್ತು. ಆದರೆ ಯಶಸ್ವಿ ಚಿಕಿತ್ಸೆ ನೀಡಿದ ಸಂತೃಪ್ತಿ ಅವರ ಮುಖದ ಮೇಲೆ ನಲಿದಾಡುತ್ತಿತ್ತು. ಹೀಗೆ ಜೀವದಾನ ಪಡೆದ ಮಹಿಳೆಯೊಬ್ಬಳು ಹೇಳಿದ ಮಾತುಗಳು ಕವಲಗುಡ್ಡ ಅವರ ವ್ಯಕ್ತಿತ್ವಕ್ಕೆ ಕೈಗನ್ನಡಿಯಾಗಿದೆ. ಆಕೆ ಹೇಳಿದರು, "ಒಂದು ವೇಳೆ ಆಯುಷ್ಯವನ್ನು ಬೇರೆಯವರಿಗೆ ನೀಡುವಂತಿದ್ದರೆ, ನನ್ನ ಆಯುಷ್ಯವನ್ನು ಅವರಿಗೇ ಕೊಟ್ಟು ಬಿಡುತ್ತಿದ್ದೆ."
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com