ಈ ಜನ ಸಾಮಾನ್ಯನಲ್ಲ
ಸಾಮಾನನ್ನು ಹೊತ್ತು ಬಂದಿರುವ ಜನ
ಸಿರಿವಂತರೊಂದಿಗೆ ಸಮಾನವಾದ ಮಾನವನ್ನು ಹೊಂದದವರು
ಚುನಾವಣೆಯ ಸಮಯದಲ್ಲಿ ಕೇಂದ್ರ ಬಿಂದು, ನಂತರ ಬರೀ ಬಿಂದು
ತಲೆಯಿಲ್ಲದವರ ದರ್ಬಾರಿನಲ್ಲಿ ದರ ಏರಿಕೆಯ ಜ್ವರ ಅನುಭವಿಸುವವ
ಎಲ್ಲವೂ ಏರುತ್ತದೆ, ಇವನ ಗತಿ ಮಾತ್ರ ಜಾರುತ್ತದೆ
ಎಲ್ಲ ಭಾಷಣಗಳಲ್ಲಿ ಇವನಿಗೇ ಸಿಂಹಪಾಲು, ಭಾಷಣ ಮುಗಿದ ಮೇಲೆ ಇವನ ಜೀವನವೇ ಸಿಂಹದ ಪಾಲು
ಜನ ಸಾಮಾನ್ಯರ ಉದ್ಧಾರಕ್ಕಾಗಿಯೇ ಅದೆಷ್ಟೋ ಪರಮ ಪುರುಷ ರಾಜಕಾರಣಿಗಳ ಅವತಾರವಾಗಿದ್ದು
ಟೋಪಿ ಹಾಕಿಸಿಕೊಳ್ಳಲೆಂದೇ ತಲೆ ಬೋಳಿಸಿಕೊಂಡು ನಾನು ಜನ ಸಾಮಾನ್ಯನೆಂದು ಟೋಪಿ ಹಾಕಿಸಿಕೊಳ್ಳುವ ಬೋಳೆ ಸ್ವಭಾವದವ (ದೆಹಲಿಯಿಂದ ಬಂದ ವರದಿ)
ಈತನ ಆಮ್ ಆದ್ಮಿ ಎಂಬ ಹೆಸರನ್ನು ಇವನಿಗೇ ಮಾರಿ ಕೈಗೆ ಪೊರಕೆ ಕೊಟ್ಟು ಬೇರೆಯವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ..
ಈತನ ಬೆಲೆ ಎಷ್ಟೆಂದರೆ ಒಂದು ವೋಟಿಗಿರುವಷ್ಟು ಮಾತ್ರ
-ವಿಶ್ವನಾಥ ಸುಂಕಸಾಳ
vishwasunkasal@yahoo.com