ಅಶೋಕನಿಗೆ ಬುದ್ಧಿ ಕಲಿಸಿದ ಮಹಿಳೆ

Updated on: 

ಸಾಮ್ರಾಟ್ ಅಶೋಕ ನಮ್ಮ ದೇಶದ ಉದ್ದಗಲಕ್ಕೂ ಆಳ್ವಿಕೆ ಮಾಡಿದ ಮಹಾನ್ ಚಕ್ರವರ್ತಿ. ಅವನ ರಾಜ್ಯ ದಾಹಕ್ಕೆ ಕಡಿವಾಣ ಹಾಕಿದ್ದು ಕಳಿಂಗ ಯುದ್ಧ. ಆನಂತರ ಅವನು ಬೌದ್ಧಮತಾನುಯಾಯಿಯಾಗಿ ಶಾಂತಿಯನ್ನು ಸ್ಥಾಪಿಸಿದ್ದರಿಂದ ಅವನ ಹೆಸರು ನಮ್ಮ ದೇಶದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಒಮ್ಮೆ ಅವನು ವಿಜಯಪುರಿ ಎಂಬ ರಾಜ್ಯದ ಮೇಲೆ ದಂಡೆತ್ತಿಹೋದ. ಅಲ್ಲಿನ ರಾಜ ವೀರಸೇನ ಯುದ್ಧಮಾಡಿದರೂ ಜಯಗಳಿಸಲಾಗಲಿಲ್ಲ. ಕೊನೆಗೆ ಎಲ್ಲ ಯುದ್ಧ ನಡೆದು ಅಶೋಕ ಅಲ್ಲಿನ ಸಿಂಹಾಸನದಲ್ಲಿ ಕುಳಿತು ರಾಜ್ಯಭಾರ ಮಾಡುತ್ತಿದ್ದಾಗ ಒಬ್ಬ ಅವಕುಂಠನ ಧರಿಸಿದ ಸ್ತ್ರೀಯೊಬ್ಬಳು ಅಶೋಕನ ಆಸ್ಥಾನಕ್ಕೆ ಬಂದು ರಾಜನಿಗೆ ದೂರೊಂದನ್ನು ನೀಡಿದಳು. ಯಾವ ತಪ್ಪೂ ಮಾಡದಿದ್ದರೂ ರಾಜನ ಸೈನಿಕರು ದಬ್ಬಾಳಿಕೆ ನಡೆಸಿ ತಮಗೆ ಸೇರಿದ ಭೂಮಿಯನ್ನು, ಆಸ್ತಿಯನ್ನೂ ಕಬಳಿಸಿ, ತನ್ನ ಪತಿಯನ್ನು ಸೆರೆಮನೆಗೆ ತಳ್ಳಿದ್ದಾರೆ. ತನಗೆ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿಕೊಂಡಳು. ಅಶೋಕನಿಗೆ ತುಂಬಾ ಖೇದವಾಯಿತು. ತನ್ನ ರಾಜ್ಯದಲ್ಲಿ ಇಂತಹ ಅನ್ಯಾಯವೇ? ಯಾರದು ಹೇಳಿದರೆ ಶಿಕ್ಷೆ ವಿಧಿಸುವುದಾಗಿ ಅಭಯ ನೀಡಿದ. ಅದಕ್ಕೆ ಆ ಮಹಿಳೆ ಹೇಳಿದಳು, ಅದು ಚರ್ಕವರ್ತಿಯಿಂದಲೂ ಸಾಧ್ಯವಾಗದ ಮಾತು ಏಕೆಂದರೆ ಅಪರಾಧಿಯು ಸಾಮಾನ್ಯನಾಗಿರದೆ, ದಂಡನಾಯಕನೂ ಅವನನ್ನು ಮುಟ್ಟುವ ಸಾಹಸಕ್ಕೆ ಹೋಗಲಾರ ಎಂದು. ಅದನ್ನು ಕೇಳಿ ಅಶೋಕನಿಗೆ ಸಿಟ್ಟು ಬಂತು. ನಿರ್ಭಯವಾಗಿ ಅಪರಾಧಿಯ ವಿವರವನ್ನೆಲ್ಲ ತಿಳಿಸಿದರೆ, ತಾನೇ ಹೋಗಿ ಆ ಅಪರಾಧಿಯನ್ನು ಬಂಧಿಸಿತರುವುದಾಗಿ ಆಶ್ವಾಸನೆ ನೀಡಿದ. ಅದಕ್ಕೆ ಆ ಸ್ತ್ರೀ ತನ್ನನ್ನು ಕ್ಷಮಿಸಲು ಹೇಳಿ ಆ ಅಪರಾಧಿ ಬೇರೆ ಯಾರೂ ಆಗಿರದೆ, ಸ್ವತ- ಅಶೋಕನೇ ಆಗಿದ್ದು, ತನ್ನ ಪತಿ ಆಳುತ್ತಿದ್ದ ರಾಜ್ಯವನ್ನು ವಿನಾಕಾರಣ ಕಿತ್ತುಕೊಂಡು ಅವನನ್ನು ಸೆರೆಮನೆಗೆ ತಳ್ಳಿ ರಾಜ್ಯವಾಳುತ್ತಿರುವುದರಿಂದ ಅಶೋಕ ಅಪರಾಧಿಯಲ್ಲದೆ ಬೇರೇನು ಎಂದು ಪ್ರಶ್ನಿಸಿದಳು. ಅವಳ ಧೈರ್ಯ, ವೀರೋಚಿತ ಮಾತುಗಳನ್ನು ಆಲಿಸಿದ ಅಶೋಕನಿಗೆ ತಾನು ನಿರುಪದ್ರವಿಯಾದ ವೀರಸೇನನ ರಾಜ್ಯವನ್ನು ಕಿತ್ತುಕೊಂಡಿದ್ದೂ, ಅವನನ್ನು ವಿನಾಕಾರಣ ಸೆರೆಮನೆಗೆ ತಳ್ಳಿದ್ದು ತಪ್ಪೆನಿಸಿತು. ಅದಕ್ಕಾಗಿ ಅಲ್ಲಿ ಸೇರಿದ್ದ ಆಸ್ಥಾನ ವಿದ್ವಾಂಸರನ್ನು ತಾನು ಮಾಡಿದ ತಪ್ಪಿಗೆ ಶಿಕ್ಷೆ ಏನು ಎಂದು ವಿಚಾರಿಸಿದ. ಅದಕ್ಕೆ ಅವರೆಲ್ಲರೂ ಅದಕ್ಕೆ ಗಡೀಪಾರಿನ ಶಿಕ್ಷೆ ವಿಧಿಸಬೇಕೆಂದು ಒಮ್ಮತದಿಂದ ಹೇಳಿದರು. ಅದರಂತೆ ಅಶೋಕನು ವೀರಸೇನನನ್ನು ಗೌರವಯುತವಾಗಿ ಕರೆಸಿ ಅವನಿಗೆ ಆತನ ರಾಜ್ಯವನ್ನೊಪ್ಪಿಸಿ ತಾನು ಅಲ್ಲಿಂದ ತನ್ನ ದೇಶಕ್ಕೆ ತೆರಳಿದ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com